ಮಾಗಿ ಉಳುಮೆ ಸದ್ದು: ಮುಂಗಾರು ಸನ್ನಾಹದಲ್ಲಿ ಆಳಂದ ತಾಲೂಕಿನ ರೈತರು ಸಜ್ಜು
ವೈಜ್ಞಾನಿಕ ಮಣ್ಣು ಪರೀಕ್ಷೆ, ಸಮತೋಲನ ಗೊಬ್ಬರ ಬಳಕೆ—ಉತ್ತಮ ಇಳುವರಿಗೆ ಮಾರ್ಗದರ್ಶಿ
ಆಳಂದ: ಮುಂಗಾರು ಹಂಗಾಮಿನ ಸಿದ್ಧತೆಗಾಗಿ ರೈತರು ಮಾಗಿ ಉಳುಮೆಯಲ್ಲಿ ನಿರತರಾಗಿದ್ದಾರೆ.
ಆಳಂದ: ಬೇಸಿಗೆಯ ಕೊನೆಯ ಹಂತ ತಲುಪುತ್ತಿದ್ದಂತೆ ಮುಂಗಾರು ಹಂಗಾಮಿನ ಮುನ್ಸೂಚನೆ ಕಾಣಿಸಿಕೊಳ್ಳುತ್ತಿದೆ. ಇನ್ನೇನು ಜೂನ್ ತಿಂಗಳ ಮಳೆಯ ಆಗಮನದ ನಿರೀಕ್ಷೆಯಲ್ಲಿ ಆಳಂದ ತಾಲೂಕಿನಾದ್ಯಂತ ರೈತರು ತಮ್ಮ ಹೊಲಗಳಲ್ಲಿ ಭೂಮಿ ಸಿದ್ಧತಾ ಕಾರ್ಯಗಳಿಗೆ ವೇಗ ನೀಡಿದ್ದಾರೆ. ವಿಶೇಷವಾಗಿ ಸಾಂಪ್ರದಾಯಿಕ ಕೃಷಿ ವಿಧಾನವಾದ “ಮಾಗಿ ಉಳುಮೆ” ಕೈಗೊಂಡು ಕಡಿಮೆ ಖರ್ಚಿನಲ್ಲಿ ಉತ್ತಮ ಉತ್ಪಾದನೆ ಪಡೆಯಲು ಮುಂದಾಗಿರುವುದು ಗಮನಾರ್ಹವಾಗಿದೆ.
ಕೃಷಿಯಲ್ಲಿ ಮಣ್ಣಿನ ಪಾತ್ರ ಅತ್ಯಂತ ಮಹತ್ತರವಾಗಿದೆ. ಯಾವುದೇ ಬೆಳೆಯ ಉತ್ತಮ ಬೆಳವಣಿಗೆ ಹಾಗೂ ಇಳುವರಿಗೆ ಮಣ್ಣಿನ ಫಲವತ್ತತೆ ಉನ್ನತ ಮಟ್ಟದಲ್ಲಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಪೆÇೀಷಕಾಂಶಗಳ ಸರಿಯಾದ ಮಾಹಿತಿ ಇಲ್ಲದೆ ಅನಾವಶ್ಯಕವಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಮಣ್ಣಿನ ಗುಣಮಟ್ಟ ಕುಸಿಯುತ್ತಿದ್ದು, ಭೂಮಿ ಕ್ರಮೇಣ ಬರಡಾಗುವ ಆತಂಕ ವ್ಯಕ್ತವಾಗುತ್ತಿದೆ. ಇದನ್ನು ತಡೆಯಲು ರೈತರು ಬಿತ್ತನೆಗೂ ಮುನ್ನ ಮಣ್ಣಿನ ಮಾದರಿಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿ, ವರದಿ ಆಧರಿಸಿ ಬೆಳೆ ಆಯ್ಕೆ ಹಾಗೂ ಗೊಬ್ಬರ ಪ್ರಮಾಣ ನಿಗದಿ ಮಾಡುವುದು ಅಗತ್ಯವಾಗಿದೆ.
ಪ್ರಸ್ತುತ ಗೊಬ್ಬರಗಳ ಬೆಲೆ ಏರಿಕೆಯಾಗಿರುವ ಹಿನ್ನಲೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಮಾತ್ರ ಪೆÇೀಷಕಾಂಶಗಳನ್ನು ನೀಡುವುದರಿಂದ ಖರ್ಚು ಕಡಿಮೆಯಾಗುವುದರ ಜೊತೆಗೆ ಮಣ್ಣಿನ ಆರೋಗ್ಯ ಹಾಗೂ ಮಾನವ ಆರೋಗ್ಯಕ್ಕೂ ಲಾಭವಾಗುತ್ತದೆ. ಇತ್ತೀಚೆಗೆ ಕೆಲವೆಡೆ ಹದವಾದ ಮಳೆಯಾಗಿರುವುದರಿಂದ ಮಾಗಿ ಉಳುಮೆ ಕೈಗೊಳ್ಳಲು ಸೂಕ್ತ ಸಮಯವಾಗಿದ್ದು, ಈ ವಿಧಾನವು ಮುಂಗಾರು ಬೇಸಾಯಕ್ಕೆ ಭೂಮಿಯನ್ನು ಸಜ್ಜುಗೊಳಿಸುವಲ್ಲಿ ಬಹುಪಯೋಗಿಯಾಗಿದೆ.
ಮಾಗಿ ಉಳುಮೆ ಎಂದರೇನು?
ಮಾಗಿ ಉಳುಮೆ ಎಂದರೆ ಮುಂಗಾರು ಹಂಗಾಮಿಗೆ ಮುಂಚೆ ಹಾಗೂ ಹಿಂಗಾರು ಬೆಳೆಗಳ ಕಟಾವಿನ ನಂತರ ಬೇಸಿಗೆಯಲ್ಲಿ ಕೈಗೊಳ್ಳುವ ಕಡಿಮೆ ಖರ್ಚಿನ ಆದರೆ ಬಹು ಪ್ರಯೋಜನಕಾರಿ ಕೃಷಿ ಕ್ರಮವಾಗಿದೆ.
ಮಾಗಿ ಉಳುಮೆಯ ಪ್ರಮುಖ ಪ್ರಯೋಜನಗಳು
ಮಣ್ಣಿನ ಮೇಲಿನ ಪರಿಣಾಮ: ಮಾಗಿ ಉಳುಮೆಯಿಂದ ಮಣ್ಣು ಸಡಿಲವಾಗುತ್ತಿದ್ದು, ಮಳೆಯ ನೀರು ಸುಲಭವಾಗಿ ಭೂಮಿಯಲ್ಲಿ ಇಂಗುತ್ತದೆ. ಇದರಿಂದ ತೇವಾಂಶ ಮತ್ತು ಭೂಗರ್ಭ ಜಲಮಟ್ಟ ಹೆಚ್ಚಾಗಿ ಬೀಜಗಳ ಮೊಳಕೆ ಪ್ರಮಾಣ ಹೆಚ್ಚುತ್ತದೆ. ಬೇರುಗಳು ಆಳಕ್ಕೆ ಬೆಳೆಯಲು ಅನುಕೂಲವಾಗುವುದರಿಂದ ಬೆಳೆಗಳು ಸದೃಢವಾಗಿ ಬೆಳೆಯುತ್ತವೆ. ಇಳಿಜಾರಿಗೆ ಅಡ್ಡವಾಗಿ ಉಳುಮೆ ಮಾಡಿದರೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಮಣ್ಣು ವಿಜ್ಞಾನಿ ಡಾ. ಶ್ರೀನಿವಾಸ ಬಿ.ವಿ ಅವರು ತಿಳಿಸಿದ್ದಾರೆ.
ಕಳೆಗಳ ನಿಯಂತ್ರಣ: ಮಾಗಿ ಉಳುಮೆಯಿಂದ ಕಳೆಗಳ ಬೇರುಗಳು ಮತ್ತು ಗಡ್ಡೆಗಳನ್ನು ಸುಲಭವಾಗಿ ತೆಗೆಯಬಹುದು. ಇದರಿಂದ ಮುಂದಿನ ಹಂತದಲ್ಲಿ ಕಳೆ ನಿಯಂತ್ರಣಕ್ಕೆ ಬೇಕಾಗುವ ಕೂಲಿ ಹಾಗೂ ವೆಚ್ಚ ಕಡಿಮೆಯಾಗುತ್ತದೆ.
ಕೀಟ ಹಾಗೂ ರೋಗ ನಿಯಂತ್ರಣ: ಮಣ್ಣಿನೊಳಗಿನ ಕೀಟಗಳ ಕೋಶಗಳು ಸೂರ್ಯನ ತಾಪಕ್ಕೆ ಒಳಗಾಗುವುದರಿಂದ ಅವುಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಕೀಟನಾಶಕ ಬಳಕೆ ಕಡಿಮೆ ಮಾಡಬಹುದು.
ಪರಿಸರದ ಮೇಲೆ ಪರಿಣಾಮ: ಕೀಟಗಳ ಕೋಶಗಳನ್ನು ಪಕ್ಷಿಗಳು ತಿನ್ನುವುದರಿಂದ ಜೈವಿಕ ನಿಯಂತ್ರಣ ಸಾಧ್ಯವಾಗುತ್ತದೆ. ಇದರಿಂದ ರಾಸಾಯನಿಕಗಳ ಬಳಕೆ ಕಡಿಮೆಯಾಗುತ್ತಿದ್ದು, ಮಣ್ಣಿನ ಜೈವಿಕ ಚಟುವಟಿಕೆ ಹೆಚ್ಚುತ್ತದೆ.
ಬೆಳೆ ಉಳಿಕೆಗಳ ಉಪಯೋಗ: ಬೆಳೆ ಕಟಾವಿನ ನಂತರ ಉಳಿದ ಅವಶೇಷಗಳು ಮಣ್ಣಿನಲ್ಲಿ ಕೊಳೆತು ಸಾವಯವ ಗೊಬ್ಬರವಾಗಿ ಮಾರ್ಪಡುತ್ತವೆ. ಇದು ಮಣ್ಣಿನ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
ವೈಜ್ಞಾನಿಕ ಸಲಹೆ: “ರೈತರು ಮಾಗಿ ಉಳುಮೆ ಕೈಗೊಂಡು ಮಣ್ಣು ಪರೀಕ್ಷೆ ಆಧಾರಿತವಾಗಿ ಸಮತೋಲನ ಗೊಬ್ಬರ ಬಳಕೆ ಮಾಡಿದರೆ ಮಣ್ಣಿನ ಆರೋಗ್ಯವನ್ನು ದೀರ್ಘಕಾಲ ಕಾಪಾಡಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆದು ಆದಾಯವನ್ನೂ ಹೆಚ್ಚಿಸಿಕೊಳ್ಳಬಹುದು,” ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ. ಜಹೀರ್ ಅಹಮದ್, ಡಾ. ಶ್ರೀನಿವಾಸ ಬಿ.ವಿ, ಡಾ. ರಾಜು ಜಿ. ತೆಗ್ಗಳ್ಳಿ ಮತ್ತು ಡಾ. ಯುಸುಫ್ ಅಲಿ ತಿಳಿಸಿದ್ದಾರೆ.
ಮುಂಗಾರು ಹಂಗಾಮಿಗೆ ಮುನ್ನವೇ ಭೂಮಿಯನ್ನು ವೈಜ್ಞಾನಿಕವಾಗಿ ಸಜ್ಜುಗೊಳಿಸುವ ಈ ಕ್ರಮ ರೈತರ ಆರ್ಥಿಕ ಸ್ಥಿರತೆಗೆ ಮಾತ್ರವಲ್ಲ, ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಪೂರಕವಾಗಲಿದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.
Comments are closed.