ರಾಜ್ಯದಲ್ಲಿ ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಭೂ ದಾಖಲೆಗಳಲ್ಲಿ ಅಧಿಕೃತವಾಗಿ ಹೆಸರು ದಾಖಲಾಗದೆ ಉಳಿದಿರುವ ಸಾವಿರಾರು ಸರ್ಕಾರಿ ಶಾಲೆಗಳ ಜಮೀನುಗಳನ್ನು ಸಂರಕ್ಷಿಸಲು ರಾಜ್ಯ ಕಂದಾಯ ಇಲಾಖೆ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ರಾಜ್ಯದ ನಾನಾ ಭಾಗಗಳಲ್ಲಿ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳು ಬಳಸುತ್ತಿರುವ ಭೂಮಿಯನ್ನು ಕಡ್ಡಾಯವಾಗಿ ಆಯಾ ಶಿಕ್ಷಣ ಸಂಸ್ಥೆಗಳ ಹೆಸರಿಗೆ ಪಹಣಿ (ಆರ್‌ಟಿಸಿ) ಮತ್ತು ಭೂ ದಾಖಲೆಗಳಲ್ಲಿ ನಮೂದಿಸಬೇಕು ಎಂದು ಆದೇಶಿಸಲಾಗಿದೆ. ಈ ಕುರಿತು ಕಂದಾಯ ಆಯುಕ್ತಾಲಯವು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತುರ್ತು ಮತ್ತು ಕಡ್ಡಾಯ ನಿರ್ದೇಶನಗಳನ್ನು ಒಳಗೊಂಡ ಅಧಿಕೃತ ಸುತ್ತೋಲೆಯನ್ನು ಹೊರಡಿಸುವ ಮೂಲಕ ತಕ್ಷಣದ ಕ್ರಮಕ್ಕೆ ಮುಂದಾಗಿದೆ.
ಸುದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಈ ಗಂಭೀರ ಸಮಸ್ಯೆಯು ಇತ್ತೀಚೆಗೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿತ್ತು. ಮುಖ್ಯವಾಗಿ, ರಾಜ್ಯದ ಪ್ರಮುಖ ದಿನಪತ್ರಿಕೆಯಾದ “ಸಂಯುಕ್ತ ಕರ್ನಾಟಕ”ದಲ್ಲಿ “18700 ಸರ್ಕಾರಿ ಶಾಲೆಗಳಿಗೆ ಭೂದಾಖಲೆಗಳಿಲ್ಲ” ಎಂಬ ಶೀರ್ಷಿಕೆಯಡಿ ಪ್ರಕಟವಾದ ತನಿಖಾ ವರದಿಯು ಸರ್ಕಾರದ ಗಮನ ಸೆಳೆದಿತ್ತು. ಸಾವಿರಾರು ಸರ್ಕಾರಿ ಶಾಲೆಗಳು ಸ್ವಂತ ಕಟ್ಟಡ ಹೊಂದಿದ್ದರೂ ಕಂದಾಯ ದಾಖಲೆಗಳಲ್ಲಿ ಅವುಗಳ ಜಾಗ ಸರ್ಕಾರದ ಇತರೆ ಇಲಾಖೆಗಳ ಹೆಸರಿನಲ್ಲಿ ಅಥವಾ ಗೋಮಾಳ, ಗೈರಾಣು ಎಂದೇ ಮುಂದುವರಿದಿರುವುದು ಈ ವರದಿಗಳ ಮೂಲಕ ಬಹಿರಂಗವಾಗಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಮತ್ತು ಮುಖ್ಯ ಕಾರ್ಯದರ್ಶಿಯವರು, ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಕಂದಾಯ ಇಲಾಖೆಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಟಿಪ್ಪಣಿ ಪತ್ರಗಳ ಹಿನ್ನೆಲೆಯಲ್ಲಿ ಈಗ ಕಂದಾಯ ಆಯುಕ್ತರಾದ ಮುಲೈ ಮುಹಿಲನ್ ಎಂ. ಪೂರನಂ ಅವರು ಈ ಮಹತ್ವದ ಆದೇಶವನ್ನು ಜಾರಿಗೊಳಿಸಿದ್ದಾರೆ.
Comments are closed.