ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರ ಹಾಜರಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಯೋಜನೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಲು ಈಗ ‘ಎನ್‌ಎಂಎಂಎಸ್’ (NMMS) ಆಪ್ ಮೂಲಕ ‘ಮುಖ ಗುರುತಿಸುವಿಕೆ’ (Face Authentication) ಹಾಜರಾತಿಯನ್ನು ಸರ್ಕಾರ ಕಡ್ಡಾಯಗೊಳಿಸಿದೆ.
ಇ-ಕೆವೈಸಿ ಕಡ್ಡಾಯ:
ಹಾಜರಾತಿ ದಾಖಲಿಸುವ ಮುನ್ನ ಪ್ರತಿಯೊಬ್ಬ ಕಾರ್ಮಿಕರ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಂಡಿರುವುದು ಅತ್ಯಗತ್ಯ. ಇದರಿಂದ ಅರ್ಹ ಫಲಾನುಭವಿಗಳಿಗೆ ನೇರವಾಗಿ ಮತ್ತು ಸುಗಮವಾಗಿ ವೇತನ ಪಾವತಿಯಾಗಲು ಅನುಕೂಲವಾಗಲಿದೆ.
ಆಪ್ ಬಳಕೆಯ ಪ್ರಯೋಜನಗಳು:
ರಿಯಲ್ ಟೈಮ್ ಹಾಜರಾತಿ: ಕೆಲಸದ ಸ್ಥಳದಲ್ಲಿಯೇ ಕಾರ್ಮಿಕರ ಹಾಜರಾತಿಯನ್ನು ನೈಜ ಸಮಯದಲ್ಲಿ ದಾಖಲಿಸಬಹುದು.
ಅಕ್ರಮ ತಡೆ: ನಕಲಿ ಹಾಜರಾತಿ ಮತ್ತು ಭ್ರಷ್ಟಾಚಾರಕ್ಕೆ ಈ ತಂತ್ರಜ್ಞಾನದಿಂದ ಬ್ರೇಕ್ ಬೀಳಲಿದೆ.
ತ್ವರಿತ ವೇತನ: ಹಾಜರಾತಿ ವಿವರಗಳು ತಕ್ಷಣವೇ ಅಪ್‌ಲೋಡ್ ಆಗುವುದರಿಂದ ಕೂಲಿಕಾರರ ಬ್ಯಾಂಕ್ ಖಾತೆಗೆ ವೇತನ ಪಾವತಿ ಪ್ರಕ್ರಿಯೆ ವೇಗವಾಗಲಿದೆ.
ಡಿಜಿಟಲೀಕರಣ: ಕಾಗದ ರಹಿತ ದಾಖಲಾತಿ ನಿರ್ವಹಣೆಯಿಂದ ಸಮಯ ಉಳಿತಾಯವಾಗಲಿದ್ದು, ಉತ್ತರದಾಯಿತ್ವ ಹೆಚ್ಚಲಿದೆ.
ಫೋಟೋ ತೆಗೆಯುವಾಗ ಪಾಲಿಸಬೇಕಾದ ನಿಯಮಗಳು:
ಮುಖ ಗುರುತಿಸುವಿಕೆ ಯಶಸ್ವಿಯಾಗಲು ಕೆಲವು ಪ್ರಮುಖ ನಿಯಮಗಳನ್ನು ಅನುಸರಿಸಬೇಕೆಂದು ಇಲಾಖೆ ತಿಳಿಸಿದೆ:
ಮುಖವು ಸ್ಪಷ್ಟವಾಗಿ ಕಾಣುವಂತೆ ಸಾಕಷ್ಟು ಬೆಳಕಿರಬೇಕು.
ಮಾಸ್ಕ್, ಕನ್ನಡಕ ಅಥವಾ ಮುಖಗವಸು ಧರಿಸಿರಬಾರದು.
ಫೋಟೋದಲ್ಲಿ ಒಬ್ಬ ಕಾರ್ಮಿಕರ ಮುಖ ಮಾತ್ರ ಇರಬೇಕು.
ಸ್ಕ್ರೀನ್ ಮೇಲೆ ವೃತ್ತವು ಹಸಿರು ಬಣ್ಣಕ್ಕೆ ತಿರುಗಿದಾಗ ಮಾತ್ರ ಕಣ್ಣು ಮಿಟುಕಿಸಬೇಕು.
ತಾಂತ್ರಿಕ ದೋಷಗಳಿಗೆ ಪರಿಹಾರ:
ಒಂದು ವೇಳೆ ಆಧಾರ ಕೇಂದ್ರದಲ್ಲಿ ಫೋಟೋ ಅಪ್‌ಡೇಟ್ ಆಗದಿದ್ದರೆ (Error K 100), ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಫೋಟೋ ಸರಿಪಡಿಸಿಕೊಳ್ಳಬೇಕು. ಸಂಪರ್ಕದ ಸಮಸ್ಯೆ ಎದುರಾದಲ್ಲಿ (Error K 54), ಸ್ವಲ್ಪ ಸಮಯದ ನಂತರ ಪುನಃ ಪ್ರಯತ್ನಿಸಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ದೂರುಗಳಿಗಾಗಿ ಸಾರ್ವಜನಿಕರು ಪಂಚಮಿತ್ರ ಸಹಾಯವಾಣಿ: 8277506000 ಅನ್ನು ಸಂಪರ್ಕಿಸಬಹುದಾಗಿದೆ.
Comments are closed.