Shubhashaya News

ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ : ಶಾಸಕ ಪ್ರಮಾಣ ಪತ್ರ ಸ್ವೀಕರಿಸಿದ ಬಿಜೆಪಿಯ ಡಿ.ಎನ್‌ ಜೀವರಾಜ್

ತೀವ್ರ ಗೊಂದಲ, ಹೈಡ್ರಾಮಾ ನಡುವೆ ಹೈಕೋರ್ಟ್‌ ಆದೇಶದಂತೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಶನಿವಾರ ತಡರಾತ್ರಿ ವೇಳೆಗೆ ಮುಕ್ತಾಯಗೊಂಡಿದ್ದು, 2023ರಲ್ಲಿ ಹಾಲಿ ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡರು ಪಡೆದ ಮತಗಳ ಪೈಕಿ ಬರೋಬ್ಬರಿ 255 ಮತಗಳನ್ನು ಅಸಿಂಧು ಎಂದು ಪರಿಗಣಿಸಲಾಗಿದೆ. ಹೀಗಾಗಿ, ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಎನ್‌. ಜೀವರಾಜ್‌ ಗೆ ಇದೀಗ 52 ಮತಗಳ ಮುನ್ನಡೆ ಸಿಕ್ಕಿದೆ. ಇಂದು ಡಿ.ಎನ್.ಜೀವರಾಜ್‌ ಅವರಿಗೆ ಚುನಾವಣಾ ಅಧಿಕಾರಿ ಶಾಸಕ ಪ್ರಮಾಣ ಪತ್ರ ಹಸ್ತಾಂತರಿಸಿದರು.

ಕಳೆದ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಬಿಜೆಪಿಯ ಡಿ.ಎನ್.ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಲ್ಪ ಅಂತರದಿಂದ ಜಯಗಳಿಸಿದ್ದರು. ಅಂದು ರಾಜೇಗೌಡರು ಇವಿಎಂ ಮತಗಳ ಎಣಿಕೆ ವೇಳೆ 324 ಮತಗಳ ಮುನ್ನಡೆ ಸಾಧಿಸಿದ್ದರು.ಆದರೆ, ಅಂಚೆ ಮತ ಪತ್ರದಲ್ಲಿ ಜೀವರಾಜ್‌ಗಿಂತ 123 ಮತಗಳ ಹಿನ್ನಡೆ ಉಂಟಾಗಿದ್ದರೂ ಒಟ್ಟಾರೆ 201 ಮತಗಳಿಂದ ಗೆಲುವು ಸಾಧಿಸಿದ್ದರು. ಇದನ್ನು ಪ್ರಶ್ನಿಸಿ ಜೀವರಾಜ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಏ.6 ರಂದು ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಿತ್ತು.

Comments are closed.

Don`t copy text!