ಕ್ರಿಕೆಟ್ ಫ್ಯಾನ್ಸ್ ಗೆ ಗುಡ್ ನ್ಯೂಸ್ : ಚಿನ್ನಸ್ವಾಮಿ ಕ್ರೀಡಾಂಗಣದ ಆಸನದ ಸಾಮರ್ಥ್ಯ 20 ಸಾವಿರಕ್ಕೆ ಹೆಚ್ಚಿಸಲು ‘KSCA’ ಚಿಂತನೆ!
ಕಳೆದ ವರ್ಷ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನ ಮೃತಪಟ್ಟಿದ್ದರು. ಈ ಒಂದು ಘಟನೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಾಗಾಗಿ ಕ್ರಿಕೆಟ್ ಪ್ರೇಮಿಗಳು ಚಿನ್ನಸ್ವಾಮಿ ಕ್ರೀಡಾಂಗಣ ಬಹಳ ಚಿಕ್ಕದಿದ್ದು ದೊಡ್ಡದಾಗಿ ನಿರ್ಮಾಣ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಅದರ ಬೆನ್ನಲ್ಲೆ, ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಕೆಎಸ್‌ಸಿಎ ಸಿಹಿ ಸುದ್ದಿ ಒಂದನ್ನು ನೀಡಿದೆ.
ಹೌದು ನಗರದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮರಳಿ ತಂದಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈಗ ಸ್ಟೇಡಿಯಂ ನವೀಕರಣಕ್ಕೆ ಮುಂದಾಗಿದೆ. ಕ್ರೀಡಾಂಗಣದ ಆಸನ ಸಾಮರ್ಥ್ಯವನ್ನು 20000ದಷ್ಟು ಹೆಚ್ಚಿಸಲು ಚಿಂತನೆ ನಡೆಸಿರುವ ಕೆಎಸ್‌ಸಿಎ, ಇದಕ್ಕಾಗಿ ಟೆಂಡರ್‌ನ ಆರಂಭಿಕ ಪ್ರಕ್ರಿಯೆಯನ್ನೂ ಆರಂಭಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವೆಂಕಟೇಶ್ ಪ್ರಸಾದ್, ‘ನವೀಕರಣ ಕಾರ್ಯ ಪೂರ್ಣಗೊಳಿಸಲು ನಾವು ಯಾವುದೇ ಸಮಯ ನಿಗದಿಪಡಿಸಿಲ್ಲ. ಏಕೆಂದರೆ ಇದು ದೀರ್ಘ ಪ್ರಕ್ರಿಯೆ. ಅನುಮೋದನೆ ಪಡೆಯಲು ನಾವು ಬಿಡ್ ಆಹ್ವಾನಿಸಬೇಕು ಮತ್ತು ಹಲವು ಸುತ್ತಿನ ಸಭೆ ನಡೆಸಬೇಕಿದೆ. ಅದಕ್ಕೆ ತುಂಬಾ ಸಮಯ ಬೇಕು. ಆದರೆ ನನ್ನ ಅಧಿಕಾರಾವಧಿಯಲ್ಲೇ ಕ್ರೀಡಾಂಗಣ ನವೀಕರಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದಿದ್ದಾರೆ.
ವೆಂಕಟೇಶ್ ಪ್ರಸಾದ್ ನೇತೃತ್ವದ ಅಧಿಕಾರಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವಾಕಾಂಕ್ಷೆಯ ನವೀಕರಣ ಯೋಜನೆ ಬಗ್ಗೆ ಚರ್ಚಿಸಿದ್ದಾರೆ. ಪ್ರಸ್ತುತ ಸುಮಾರು 34,000 ಇರುವ ಕ್ರೀಡಾಂಗಣದ ಆಸನ ಸಾಮರ್ಥ್ಯವನ್ನು ಹೆಚ್ಚುವರಿಯಾಗಿ 20,000 ಆಸನಗಳನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಕೆಎಸ್‌ಸಿಎ ಮುಂದಿಟ್ಟಿದೆ. ನವೀಕರಣದ ಮೊದಲ ಹೆಜ್ಜೆ ಎಂಬಂತೆ ಕೆಎಸ್‌ಸಿಎ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಈ ಯೋಜನೆಯು ಕ್ರೀಡಾಂಗಣದ ಮರುವಿನ್ಯಾಸ, ಪ್ರೇಕ್ಷಕರ ಸುಧಾರಿತ ಸೌಲಭ್ಯ, ಪಾರ್ಕಿಂಗ್, ಜನದಟ್ಟಣೆ ನಿರ್ವಹಣೆಯನ್ನೂ ಹೊಂದಿದೆ.
Comments are closed.