Shubhashaya News

ಎಸ್‌ಆರ್‌ಜಿ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

೧೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗಿ; ಮಕ್ಕಳಿಗಾಗಿ ಶಿಕ್ಷಕರಿಂದ ಮನರಂಜನಾ ಕಾರ್ಯಕ್ರಮ – ಹ್ಯಾಟ್ರಿಕ್ ತುಂಟ ಪ್ರಶಸ್ತಿ ಪಡೆದ ಕಾರ್ತಿಕ ವಿಶಾಖ್

ಆಳಂದ: ಪಟ್ಟಣದ ಎಸ್‌ಆರ್‌ಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಆವರಣ ಮಕ್ಕಳ ನಗು, ಚಪ್ಪಾಳೆ, ಸಂಭ್ರಮ ಮತ್ತು ಉತ್ಸಾಹದಿಂದ ಕಂಗೊಳಿಸಿತು. ಸುಮಾರು ೧೫೦೦ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಕ್ಕಳ ದಿನಾಚರಣೆಗೆ ವಿಶೇಷ ಮೆರುಗು ತಂದರು.

ಮಕ್ಕಳ ಪ್ರತಿಭೆ, ಸೃಜನಶೀಲತೆ ಹಾಗೂ ಆತ್ಮವಿಶ್ವಾಸವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನರ್ಸರಿಯಿಂದ ಎಸ್‌ಎಸ್‌ಎಲ್‌ಸಿವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸಂಸ್ಥೆಯ ಆಡಳಿತಾಧಿಕಾರಿ ಹಣಮಂತ ಶೇರಿ ಹಾಗೂ ಶಾಲೆಯ ಪ್ರಾಚಾರ್ಯೆ ಜ್ಯೋತಿ ವಿಶಾಖ್ ಅವರು ಬಹುಮಾನ ವಿತರಿಸಿ ಅಭಿನಂದಿಸಿದರು.

ಈ ಬಾರಿಯ ಮಕ್ಕಳ ದಿನಾಚರಣೆಯ ವಿಶೇಷ ಆಕರ್ಷಣೆಯಾಗಿ ನರ್ಸರಿಯಿಂದ ಎಸ್‌ಎಸ್‌ಎಲ್‌ಸಿವರೆಗಿನ ಪ್ರತಿ ತರಗತಿಯಲ್ಲಿ ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿರುವ ಜಾಣ ವಿದ್ಯಾರ್ಥಿ ಹಾಗೂ ತಮ್ಮ ತುಂಟಾಟ, ಚುರುಕುತನ ಮತ್ತು ಹಾಸ್ಯಪ್ರಜ್ಞೆಯಿಂದ ಎಲ್ಲರ ಗಮನ ಸೆಳೆಯುವ ತುಂಟ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿಶೇಷವಾಗಿ ಸನ್ಮಾನಿಸಲಾಯಿತು. ಸತತ ಮೂರು ಬಾರಿ ತುಂಟ ಪ್ರಶಸ್ತಿಗೆ ಭಾಜನರಾದ ಕಾರ್ತಿಕ ವಿಶಾಖ್ ಅವರು ಈ ಬಾರಿಯ ‘ಹ್ಯಾಟ್ರಿಕ್ ತುಂಟ ಪ್ರಶಸ್ತಿ’ ಪಡೆದು ಎಲ್ಲರ ಗಮನ ಸೆಳೆದರು. ಈ ವಿಶೇಷ ಗೌರವ ಮಕ್ಕಳಲ್ಲಿ ಸಂತಸ ಮತ್ತು ಕುತೂಹಲ ಮೂಡಿಸಿತು.

ಮಕ್ಕಳಿಗೆ ಕೇವಲ ಪಾಠ-ಪ್ರವಚನಗಳಷ್ಟೇ ಅಲ್ಲದೆ, ಮನರಂಜನೆ ಮತ್ತು ಸಂತೋಷವೂ ಶಿಕ್ಷಣದ ಅವಿಭಾಜ್ಯ ಅಂಗ ಎಂಬುದನ್ನು ಸಾರುವಂತೆ ಶಿಕ್ಷಕರು ಮಕ್ಕಳಿಗಾಗಿ ವಿಶೇಷ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಿಕ್ಷಕರೇ ನೃತ್ಯ, ಗಾಯನ ಹಾಗೂ ಮಿಮಿಕ್ರಿ ಪ್ರದರ್ಶಿಸಿ ಮಕ್ಕಳನ್ನು ನಗೆಗಡಲಲ್ಲಿ ತೇಲಿಸಿದರು. ಸದಾ ಪಾಠ ಬೋಧಿಸುವ ಶಿಕ್ಷಕರು ವೇದಿಕೆಯ ಮೇಲೆ ಕಲಾವಿದರಾಗಿ ಕಾಣಿಸಿಕೊಂಡಾಗ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಬಣ್ಣಬಣ್ಣದ ಆಕರ್ಷಕ ಉಡುಪುಗಳನ್ನು ಧರಿಸಿ ಶಾಲೆಗೆ ಆಗಮಿಸಿದ್ದ ಮಕ್ಕಳು ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದರು. ಬಹುಮಾನ ವಿತರಣೆ, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶಿಕ್ಷಕರ ಮನರಂಜನಾ ಪ್ರದರ್ಶನಗಳು ಇಡೀ ದಿನದ ಸಂಭ್ರಮಕ್ಕೆ ವಿಶೇಷ ಕಳೆ ತಂದವು.

ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಅವರ ಬಾಲ್ಯವನ್ನು ಸಂತೋಷ, ಪ್ರೀತಿ ಮತ್ತು ಸೃಜನಶೀಲತೆಯಿಂದ ತುಂಬಿಸುವುದು ಮಕ್ಕಳ ದಿನಾಚರಣೆಯ ನಿಜವಾದ ಆಶಯವಾಗಿದೆ. ಎಸ್‌ಆರ್‌ಜಿ ಶಾಲೆಯ ಈ ವಿನೂತನ ಆಚರಣೆ ಮಕ್ಕಳ ಮನದಲ್ಲಿ ಸ್ಮರಣೀಯ ಅನುಭವವಾಗಿ ಉಳಿಯಿತು.

Leave A Reply

Your email address will not be published.