ವೈವಾಹಿಕ ವ್ಯಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪತಿಯ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ವಿನಾಕಾರಣ ಸಿಲುಕಿಸಿ, ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡುವ ಪತ್ನಿಯರ ಪ್ರವೃತ್ತಿ ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೌಟುಂಬಿಕ ಕ್ರೌರ್ಯ, ವರದಕ್ಷಿಣೆ ಕಿರುಕುಳ ಹಾಗೂ ಬಲವಂತದ ಗರ್ಭಪಾತದ ಆರೋಪದಡಿ ಪತ್ನಿ ದಾಖಲಿಸಿದ್ದ ದೂರಿನ ಅನ್ವಯ ಪೊಲೀಸರು ಸಲ್ಲಿಸಿದ್ದ ದೋಷಾರೋಪಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಪತಿ, ಆತನ ತಾಯಿ ಮತ್ತು ಸಹೋದರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ವೈವಾಹಿಕ ಕಲಹಗಳ ಹಿನ್ನೆಲೆಯಲ್ಲಿ ದಾಖಲಾಗುವ ದೂರುಗಳಲ್ಲಿ ಕ್ರಿಮಿನಲ್ ಕ್ರೌರ್ಯವನ್ನು ಸಾಬೀತುಪಡಿಸುವಂತಹ ನಿರ್ದಿಷ್ಟ ಕೃತ್ಯಗಳ ಉಲ್ಲೇಖವಿರಬೇಕು ಮತ್ತು ತನಿಖೆಯ ಬಳಿಕ ಸಲ್ಲಿಸುವ ದೋಷಾರೋಪಪಟ್ಟಿಯೂ ಅದಕ್ಕೆ ಪೂರಕವಾಗಿರಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ದೂರುದಾರ ಪತ್ನಿ ಮಾಡಿರುವ ಆರೋಪಗಳಿಗೆ ಯಾವುದೇ ಪೂರಕ ಸಾಕ್ಷ್ಯಾಧಾರಗಳೇ ಇಲ್ಲದಿರುವಾಗ, ಕುಟುಂಬದ ಎಲ್ಲಾ ಸದಸ್ಯರನ್ನು ಕಾನೂನಿನ ಅಗ್ನಿಪರೀಕ್ಷೆಗೆ ಒಳಪಡಿಸುವುದು ಸಮರ್ಥನೀಯವಲ್ಲ ಎಂದು ತಿಳಿಸಿರುವ ಪೀಠ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ.