Shubhashaya News

ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಹಾಲಿನಿಂದ ಬಸ್ ದರದವರೆಗೆ ಎಲ್ಲವೂ ದುಬಾರಿ : ಕಾಂಗ್ರೆಸ್ ಸರ್ಕಾರಕ್ಕೆ ಜನಾಕ್ರೋಶ!

ಬೆಂಗಳೂರು: ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ರಾಜ್ಯದ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು (Bus ticket fare hike) ನವೆಂಬರ್ 5ರಿಂದ ಜಾರಿಗೆ ಬರುವಂತೆ ಹೆಚ್ಚಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದ್ದು, ಈ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಬೈರತಿ ಸುರೇಶ್, ದರ ಏರಿಕೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಕಳೆದ ಒಂದು ವರ್ಷದ ಅವಧಿಯಲ್ಲಿ ಬರೊಬ್ಬರಿ ಐದು ಬಾರಿ ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಪರಿಣಾಮವಾಗಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ವಾರ್ಷಿಕವಾಗಿ ಸುಮಾರು 2,000 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿವೆ. ಈಗಾಗಲೇ ಸಾರಿಗೆ ಸಂಸ್ಥೆಗಳು ಒಟ್ಟಾರೆಯಾಗಿ 9,000 ಕೋಟಿ ರೂಪಾಯಿಗಳ ಬೃಹತ್ ನಷ್ಟದ ಸುಳಿಗೆ ಸಿಲುಕಿದ್ದು, ಸಂಸ್ಥೆಗಳನ್ನು ಉಳಿಸಿಕೊಳ್ಳಲು ಟಿಕೆಟ್ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ದರ ಏರಿಕೆಯ ಪ್ರಮಾಣ ಎಷ್ಟಿರಲಿದೆ ಎಂಬುದು ನವೆಂಬರ್ 4ರಂದು ನಡೆಯಲಿರುವ ಸಾರಿಗೆ ಇಲಾಖೆ ಹಾಗೂ ನಾಲ್ಕೂ ನಿಗಮಗಳ ಹಿರಿಯ ಅಧಿಕಾರಿಗಳ ಮಹತ್ವದ ಸಭೆಯಲ್ಲಿ ತೀರ್ಮಾನವಾಗಲಿದೆ. ಈ ಸಭೆಯಲ್ಲಿ ಬೆಲೆ ಏರಿಕೆಯ ಅಂತಿಮ ರೂಪುರೇಷೆ ಸಿದ್ಧಗೊಳ್ಳಲಿದ್ದು, ಅದರ ಮರುದಿನವೇ ಅಂದರೆ ನವೆಂಬರ್ 5ರಿಂದಲೇ ಪರಿಷ್ಕೃತ ದರಗಳು ಅಧಿಕೃತವಾಗಿ ಜಾರಿಗೆ ಬರಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ, ನಂದಿನಿ ಹಾಲು, ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಳವಾಗುತ್ತಿದ್ದಂತೆಯೇ ರಾಜ್ಯದ ಬಹುತೇಕ ಹೋಟೆಲ್‌ಗಳಲ್ಲಿ ಕಾಫಿ ಮತ್ತು ಟೀ ಬೆಲೆಯನ್ನು ತಕ್ಷಣವೇ 5 ರೂಪಾಯಿ ಹೆಚ್ಚಿಸಲಾಗಿದೆ. ಇದು ದಿನನಿತ್ಯ ಹೋಟೆಲ್ ಅವಲಂಬಿಸಿರುವ ಸಾರ್ವಜನಿಕರಿಗೆ ಹಾಗೂ ಉದ್ಯೋಗಿಗಳಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆಯೂ ಸತತವಾಗಿ ಏರಿಕೆಯಾಗುತ್ತಿರುವುದು ಗ್ರಾಹಕರ ಜೇಬನ್ನು ಸುಡುತ್ತಿದೆ.

ನಿರಂತರ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹಾಲಿನ ಬೆಲೆ ಏರಿಕೆಯಿಂದ ರೈತರಿಗೆ ಅನುಕೂಲವಾಗುವುದನ್ನು ಸ್ವಾಗತಿಸುತ್ತೇವೆ, ಆದರೆ ಗ್ರಾಹಕರ ಸಂಕಷ್ಟವನ್ನೂ ಸರ್ಕಾರ ಪರಿಗಣಿಸಬೇಕಿತ್ತು” ಎಂದು ಅನೇಕರು ಅಳಲು ತೋಡಿಕೊಂಡಿದ್ದಾರೆ. ಇನ್ನು ಕೆಲವರು ಸಾಂಕೇತಿಕವಾಗಿ, “ಇನ್ಮೇಲೆ ನಂದಿನಿ ಹಾಲನ್ನೇ ಬಳಸುವುದಿಲ್ಲ, ಹಾಲಿನ ಬದಲು ಗ್ರೀನ್ ಟೀ ಅಥವಾ ಲೆಮನ್ ಟೀ ಕುಡಿದು ದಿನ ದೂಡುತ್ತೇವೆ” ಎಂದು ಕಿಡಿಕಾರಿದ್ದಾರೆ.

 

Leave A Reply

Your email address will not be published.