Shubhashaya News

ಕೋಡಿಹಳ್ಳಿ ಚಂದ್ರಶೇಖರ್ ಬಿಡುಗಡೆಗೆ ರೈತ ಸಂಘ–ಹಸಿರು ಸೇನೆ ಆಗ್ರಹ

ಅಫಜಲಪುರ: 2013ರ ಮಹದಾಯಿ ನೀರಾವರಿ ಹೋರಾಟಕ್ಕೆ ಸಂಬಂಧಿಸಿದ ಹಳೆಯ ಪ್ರಕರಣದಲ್ಲಿ ಬಂಧಿತರಾಗಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಫಜಲಪುರ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ನಾಯ್ಕೋಡಿ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ಮಹದಾಯಿ ಹಾಗೂ ಕಳಸಾ-ಬಂಡೂರಿ ನೀರಿಗಾಗಿ ನಡೆದ ಹೋರಾಟವು ಉತ್ತರ ಕರ್ನಾಟಕದ ರೈತರ ಬಹುದಿನಗಳ ಬೇಡಿಕೆಯಾಗಿದ್ದು, ಹೋರಾಟದ ಸಂದರ್ಭದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಮಾನವೀಯ ಹಾಗೂ ರೈತಪರ ದೃಷ್ಟಿಕೋನದಿಂದ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಮಹದಾಯಿ ಹೋರಾಟ ಸೇರಿದಂತೆ ವಿವಿಧ ರೈತ ಚಳುವಳಿಗಳಿಗೆ ಸಂಬಂಧಿಸಿದ ಹಳೆಯ ಪ್ರಕರಣಗಳನ್ನು ಹಿಂಪಡೆಯಬೇಕು. ರೈತ ಹೋರಾಟಗಾರರ ಮೇಲಿರುವ ಪ್ರಕರಣಗಳನ್ನು ಮರುಪರಿಶೀಲಿಸಿ, ರೈತರ ನ್ಯಾಯಯುತ ಬೇಡಿಕೆಗಳಿಗಾಗಿ ನಡೆಯುವ ಶಾಂತಿಯುತ ಹೋರಾಟಗಳಿಗೆ ಸರ್ಕಾರ ಗೌರವ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ರೈತರ ಸಮಸ್ಯೆಗಳನ್ನು ಸಂವಾದದ ಮೂಲಕ ಬಗೆಹರಿಸಲು ಸರ್ಕಾರ ಮುಂದಾಗಬೇಕು. ರೈತ ಹೋರಾಟಗಾರರ ಮೇಲಿರುವ ಸೂಕ್ತ ಪ್ರಕರಣಗಳನ್ನು ಹಿಂಪಡೆಯಲು ಅಗತ್ಯ ಕಾನೂನು ಹಾಗೂ ಆಡಳಿತಾತ್ಮಕ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಮಂಜುನಾಥ ನಾಯ್ಕೋಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದತ್ತು ಪೂಜಾರಿ, ಶ್ರೀಶೈಲ ಗೋಳೆ, ಪ್ರಕಾಶ ಹಳಗೋಧಿ, ಸಿದ್ದರಾಮ ಸುಲ್ತಾನಾಪುರ, ಉಮೇಶ ಅಂದೋಡಗಿ, ಸೋಮನಾಥ ನಾಯ್ಕೋಡಿ, ಅಬ್ದುಲ್ ಗುತ್ತೇದಾರ, ಶ್ರೀಶೈಲ ಕುಂಬಾರ, ವಿಜಯಕುಮಾರ ಬೋರುಟಿ, ಸೈಬಣ್ಣ ನಿಲೆಗಾಂವ, ಗಜಾನನ ನರಗೋದಿ, ಶರಣು ನಾಯ್ಕೋಡಿ, ಹಣಮಂತ, ಮಾರುತಿ ಭೋವಿ, ಪ್ರಮೋದ ಭೋವಿ, ಅರ್ಜುನ ಇಟಗಾ, ಸೈಫನ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply

Your email address will not be published.