Shubhashaya News

ಆಳAದದಲ್ಲಿ ಬರದ ಬಿಸಿಲು: ಮರುಕಳಿಸಿದ ೧೯೭೨ರ ಭೀಕರ ಬರದ ಕರಾಳ ಛಾಯೆ!

ವಿಶೇಷ ವರದಿ | ಹಿಂಗಾರು ಮಳೆಯ ನಿರೀಕ್ಷೆಯಲ್ಲಿ ರೈತರು; ಒಣಗಿದ ಕೆರೆ, ಜಲಚರಗಳ ಸಾವು, ಬಾಡಿದ ಬೆಳೆ, ಕುಸಿದ ಅಂತರ್ಜಲದಿAದ ಆತಂಕ

ಆಳಂದ: ಉಮರಗಾ ಹೆದ್ದಾರಿ ಬದಿಯಲ್ಲಿರುವ ಕೆರೆ ಸಂಪೂರ್ಣ ಒಣಗಿ ಬಿರುಕುಬಿಟ್ಟಿರುವ ದೃಶ್ಯ. ನೀರಿನ ಕೊರತೆಯಿಂದ ಜಲಚರಗಳು ನಾಶವಾಗಿರುವುದು ಬರದ ತೀವ್ರತೆಯನ್ನು ಬಿಂಬಿಸುತ್ತಿದೆ.

ಆಳಂದ: ತಾಲೂಕಿನ ಗ್ರಾಮೀಣ ಬದುಕಿನ ಜೀವನಾಡಿಯಾಗಿದ್ದ ಕೆರೆ-ಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಹೊಲಗಳಲ್ಲಿ ಬಿತ್ತನೆಯಾಗಿ ನಿಂತಿದ್ದ ಬೆಳೆಗಳು ಮಳೆಯ ಕೊರತೆಯಿಂದ ಬಾಡಿ ಬೆಂಡಾಗುತ್ತಿವೆ. ಬಾವಿ, ಕೊಳವೆಬಾವಿಗಳ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ರೈತರು ಹಾಗೂ ಗ್ರಾಮೀಣ ಜನರು ಮುಂಬರುವ ಬೇಸಿಗೆಯನ್ನು ಹೇಗೆ ಎದುರಿಸಬೇಕು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಒಂದು ಕಡೆ ಜಲಮೂಲಗಳ ಒಣಗುವಿಕೆ, ಮತ್ತೊಂದೆಡೆ ಕೃಷಿ ಬೆಳೆಗಳ ನಾಶ ಹಾಗೂ ಜಲಚರಗಳ ಸಾಮೂಹಿಕ ಸಾವು—ಇವೆಲ್ಲವೂ ಆಳಂದದಲ್ಲಿ ಬರದ ಗಂಭೀರತೆಯನ್ನು ತೆರೆದಿಡುತ್ತಿವೆ. ೧೯೭೨ರ ಭೀಕರ ಬರದ ನೆನಪುಗಳನ್ನು ಮರುಕಳಿಸುವಂತೆ ಮಾಡಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ, ಇದೀಗ ತಾಲೂಕಿನ ಎಲ್ಲರ ಚಿತ್ತ ಹಿಂಗಾರು ಮಳೆಯತ್ತ ನೆಟ್ಟಿದೆ.
೩೬ ಕೆರೆಗಳಲ್ಲಿ ೨೫ ಸಂಪೂರ್ಣ ಖಾಲಿ:
ಉಳಿದ ೧೧ ಕೆರೆಗಳಲ್ಲೂ ನೀರು ಅಲ್ಪ!
ತಾಲೂಕಿನ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ೩೬ ಕೆರೆಗಳ ಪೈಕಿ ೨೫ ಕೆರೆಗಳು ಸಂಪೂರ್ಣ ಒಣಗಿವೆ. ಉಳಿದ ೧೧ ಕೆರೆಗಳಲ್ಲಿ ಶೇ.೧೫ರಿಂದ ೨೦ರಷ್ಟು ಮಾತ್ರ ನೀರು ಲಭ್ಯವಿದ್ದು, ಮಳೆಯಾಗದಿದ್ದರೆ ಇವುಗಳೂ ಕೆಲವೇ ದಿನಗಳಲ್ಲಿ ಬತ್ತಿಹೋಗುವ ಆತಂಕ ಎದುರಾಗಿದೆ. ಕೆರೆಗಳ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದು ಕೃಷಿ, ಜಾನುವಾರುಗಳ ನೀರಿನ ಅಗತ್ಯ ಹಾಗೂ ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ಹೆಚ್ಚಿಸಿದೆ.
ಕೆರೆಗಳಲ್ಲಿ ನೀರು ಉಳಿಯದಿರುವುದು ಕೇವಲ ಪ್ರಸ್ತುತ ಜಲಕೊರತೆಯ ಸಮಸ್ಯೆಯಲ್ಲ. ಮುಂದಿನ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಹಾಗೂ ಜಾನುವಾರುಗಳು ಎದುರಿಸಬಹುದಾದ ನೀರಿನ ಗಂಡಾAತರದ ಮುನ್ಸೂಚನೆಯೂ ಆಗಿದೆ.
ಐದು ದಶಕಗಳಲ್ಲಿ ಕಂಡಿರದ ದೃಶ್ಯ:
ಒಣಗಿದ ಕೆರೆ, ನಾಶವಾದ ಜಲಜೀವಿಗಳು!
ಆಳಂದ ಪಟ್ಟಣದ ಉತ್ತರ ದಿಕ್ಕಿನಲ್ಲಿ ಉಮರಗಾ ಹೆದ್ದಾರಿ ಬದಿಯಲ್ಲಿರುವ ಕೆರೆ ಬರದ ತೀವ್ರತೆಗೆ ಸಾಕ್ಷಿಯಾಗಿದೆ. ಸುಮಾರು ೫೦ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೆರೆ ಸಂಪೂರ್ಣವಾಗಿ ಒಣಗಿದೆ ಎಂದು ಸ್ಥಳೀಯವಾಗಿ ಹೇಳಲಾಗುತ್ತಿದ್ದು, ಕೆರೆಯ ಆವರಣದಲ್ಲಿನ ಭೂಮಿ ಬಿರುಕು ಬಿಟ್ಟು ಬಾಯಿ ತೆರೆದಿದೆ. ನೀರಿನ ಕೊರತೆಯಿಂದ ಮೀನು ಸೇರಿದಂತೆ ಜಲಚರಗಳು ನಾಶವಾಗಿದ್ದು, ಅವುಗಳ ಅವಶೇಷಗಳು ಕೆರೆಯ ಒಡಲಿನಲ್ಲಿ ಹರಡಿಕೊಂಡಿವೆ.
ಒಮ್ಮೆ ನೀರಿನಿಂದ ತುಂಬಿ ಪರಿಸರಕ್ಕೆ ಜೀವ ತುಂಬುತ್ತಿದ್ದ ಕೆರೆ ಇಂದು ಒಣಮಣ್ಣಿನ ಪ್ರದೇಶವಾಗಿ ಮಾರ್ಪಟ್ಟಿರುವುದು ನೋಡುಗರ ಮನಕಲಕುವಂತಿದೆ. ಜಲಮೂಲ ಒಣಗಿದಾಗ ಅದರೊಂದಿಗೆ ಜಲಜೀವಿಗಳ ಬದುಕೂ ಹೇಗೆ ಅಳಿದುಹೋಗುತ್ತದೆ ಎಂಬುದಕ್ಕೆ ಈ ಕೆರೆ ಜೀವಂತ ಸಾಕ್ಷಿಯಾಗಿದೆ.
ಬಿತ್ತಿದ ಬೆಳೆಗಳಿಗೆ ಮಳೆ ಕೊರತೆಯ ಹೊಡೆತ
ಕಳೆದ ಸಾಲಿನಲ್ಲಿ ಉತ್ತಮ ಮಳೆಯಾಶ್ರಯ ದೊರೆತಿದ್ದರೂ, ಆ ನೀರನ್ನು ದೀರ್ಘಕಾಲ ಸಂಗ್ರಹಿಸಿ ಕೃಷಿಗೆ ಬಳಸಿಕೊಳ್ಳುವ ಸಮರ್ಪಕ ವ್ಯವಸ್ಥೆ ನಿರ್ಮಾಣವಾಗದಿರುವುದು ಈ ಬಾರಿ ಎದ್ದು ಕಾಣುತ್ತಿದೆ. ಪ್ರಸಕ್ತ ವರ್ಷದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಪರಿಣಾಮ ಹಳ್ಳ-ಕೊಳ್ಳಗಳಿಗೆ ನೀರು ಹರಿಯಲಿಲ್ಲ. ಪರಿಣಾಮವಾಗಿ ಕೆರೆ-ಕಟ್ಟೆಗಳು ತುಂಬದೆ, ಅಂತರ್ಜಲ ಮರುಪೂರಣಕ್ಕೂ ತೀವ್ರ ಹಿನ್ನಡೆಯಾಗಿದೆ.
ಬಿತ್ತನೆಯಾಗಿ ನಿಂತಿದ್ದ ಬೆಳೆಗಳಿಗೆ ಅಗತ್ಯ ತೇವಾಂಶ ದೊರೆಯದೆ ಹೊಲಗಳಲ್ಲೇ ಒಣಗುವ ಸ್ಥಿತಿ ನಿರ್ಮಾಣವಾಗಿದೆ. ಫಲವತ್ತಾದ ಭೂಮಿಯಲ್ಲಿ ರೈತರು ಬೆವರು ಸುರಿಸಿ ಬೆಳೆದ ಬೆಳೆಗಳು ಮಳೆಯ ಕೊರತೆಯಿಂದ ಬಾಡಿ ಬೆಂಡಾಗುತ್ತಿದ್ದು, ಬೆಳೆ ಹಾನಿಯ ಜತೆಗೆ ಮುಂದಿನ ಕೃಷಿ ಚಟುವಟಿಕೆಗಳ ಮೇಲೂ ಅನಿಶ್ಚಿತತೆ ಆವರಿಸಿದೆ.
ಪಾತಾಳಕ್ಕೆ ಕುಸಿದ ಅಂತರ್ಜಲ: ಬೇಸಿಗೆ ಎದುರಿಸುವುದೇ ಸವಾಲು!
ಮುಂಗಾರು ಮಳೆ ಕೊರತೆಯಿಂದ ಹಳ್ಳ-ಕೊಳ್ಳಗಳಿಗೆ ನೀರು ಹರಿಯದೆ ಇರುವುದರ ಪರಿಣಾಮ ಬಾವಿ ಹಾಗೂ ಕೊಳವೆಬಾವಿಗಳಲ್ಲಿನ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಮಳೆಯ ನೀರು ಭೂಮಿಗೆ ಇಂಗಿ ಅಂತರ್ಜಲ ಮರುಪೂರಣವಾಗುವ ಪ್ರಮಾಣ ಕಡಿಮೆಯಾಗಿರುವುದರಿಂದ, ಗ್ರಾಮೀಣ ಭಾಗದಲ್ಲಿ ನೀರಿನ ಮೂಲಗಳ ಮೇಲೆ ಒತ್ತಡ ಹೆಚ್ಚುತ್ತಿದೆ.
ಈ ಪರಿಸ್ಥಿತಿಯಲ್ಲಿ ಗ್ರಾಮಸ್ಥರಲ್ಲಿ ‘ಬರುವ ಬೇಸಿಗೆಯನ್ನು ಹೇಗೆ ಕಳೆಯುವುದು?’ ಎಂಬ ಆತಂಕ ಮೂಡಿದೆ. ಕುಡಿಯುವ ನೀರು, ಕೃಷಿ ಹಾಗೂ ಜಾನುವಾರುಗಳ ನೀರಿನ ಅಗತ್ಯಗಳನ್ನು ಒಂದೇ ಸಮಯದಲ್ಲಿ ನಿಭಾಯಿಸಬೇಕಾದ ಸವಾಲು ಎದುರಾಗಬಹುದಾಗಿದೆ.
ಅಮರ್ಜಾ ಅಣೆಕಟ್ಟಿಗೆ ಭೀಮಾ ನೀರು:
ನೆಮ್ಮದಿಯ ನಡುವೆ ಮುಂದುವರಿದ ಆತಂಕ
ಆಳAದ ಕೇಂದ್ರ ವಿಶ್ವವಿದ್ಯಾಲಯ ಸೇರಿದಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಡುವ ಹಲವು ಗ್ರಾಮಗಳಿಗೆ ನೀರಿನ ಮೂಲವಾಗಿರುವ ಅಮರ್ಜಾ ಅಣೆಕಟ್ಟಿನಲ್ಲಿ ಪ್ರಸ್ತುತ ಸುಮಾರು ಶೇ.೫೦ರಷ್ಟು ನೀರು ಉಳಿದಿದೆ ಎಂದು ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಬರುವ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುವ ಮುನ್ನ ಭೀಮಾನದಿಯಿಂದ ಅಮರ್ಜಾ ಅಣೆಕಟ್ಟಿಗೆ ನೀರು ಹರಿಸುವ ಕ್ರಮಕ್ಕೆ ಮುಂದಾಗಿರುವುದು ಮುಂಜಾಗ್ರತಾ ಕ್ರಮವಾಗಿ ಕಾಣುತ್ತಿದೆ.
ಅಮರ್ಜಾ ಅಣೆಕಟ್ಟಿಗೆ ನೀರು ಪೂರೈಸುವ ಪ್ರಯತ್ನ ಕೆಲವು ಗ್ರಾಮಗಳಿಗೆ ಕುಡಿಯುವ ನೀರಿನ ಭರವಸೆ ಮೂಡಿಸಿದರೂ, ತಾಲೂಕಿನ ನೂರಕ್ಕೂ ಅಧಿಕ ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಗಂಡಾAತರ ಎದುರಾಗುವ ಸಾಧ್ಯತೆ ಕುರಿತು ಆತಂಕ ಮುಂದುವರಿದಿದೆ. ಆದ್ದರಿಂದ ಅಣೆಕಟ್ಟಿನ ನೀರಿನ ಲಭ್ಯತೆ, ಗ್ರಾಮವಾರು ಬೇಡಿಕೆ ಹಾಗೂ ಬೇಸಿಗೆ ಮುನ್ನ ಕೈಗೊಳ್ಳಬೇಕಾದ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಆಡಳಿತವು ಗಮನಹರಿಸುವ ಅಗತ್ಯವಿದೆ.
ಅಂತರ್ಜಲ ಸಂರಕ್ಷಣೆ, ನೀರು ಇಂಗಿಸುವ
ಕಾಮಗಾರಿಗಳಿಗೆ ವೇಗ ಯಾವಾಗ?
ಸ್ವಾತಂತ್ರ‍್ಯಾನAತರ ಹಲವು ದಶಕಗಳು ಕಳೆದರೂ ಅಂತರ್ಜಲ ಸಂರಕ್ಷಣೆ ಹಾಗೂ ಮಳೆನೀರು ಇಂಗಿಸುವ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯದಿರುವುದು ತಾಲೂಕಿನ ಜಲಸಂಕಷ್ಟದ ಸಂದರ್ಭದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಳೆ ಬಂದಾಗ ನೀರನ್ನು ಕೆರೆ, ಕಟ್ಟೆಗಳಲ್ಲಿ ಹಿಡಿದಿಡುವುದು, ಭೂಮಿಗೆ ನೀರು ಇಂಗಿಸುವ ವ್ಯವಸ್ಥೆ ರೂಪಿಸುವುದು ಹಾಗೂ ಹಳೆಯ ಜಲಮೂಲಗಳನ್ನು ಪುನಶ್ಚೇತನಗೊಳಿಸುವ ಕ್ರಮಗಳು ಸಮರ್ಪಕವಾಗಿ ನಡೆದರೆ ಬರದ ಪರಿಣಾಮವನ್ನು ತಗ್ಗಿಸಲು ನೆರವಾಗಬಹುದು.
ಮಳೆಯ ಕೊರತೆಯ ಸಂದರ್ಭದಲ್ಲಿ ಮಾತ್ರ ಪರಿಹಾರ ಕ್ರಮ ಕೈಗೊಳ್ಳುವುದಕ್ಕಿಂತ, ಮಳೆಗಾಲದಲ್ಲಿಯೇ ನೀರಿನ ಸಂಗ್ರಹ, ಅಂತರ್ಜಲ ಮರುಪೂರಣ ಹಾಗೂ ಜಲಮೂಲಗಳ ನಿರ್ವಹಣೆಗೆ ದೀರ್ಘಕಾಲೀನ ಯೋಜನೆ ರೂಪಿಸುವ ಅಗತ್ಯವಿದೆ. ಇಲ್ಲವಾದರೆ ಪ್ರತಿವರ್ಷ ಮಳೆ ಕೊರತೆಯಾದಾಗ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಆತಂಕ ಮರುಕಳಿಸುವ ಪರಿಸ್ಥಿತಿ ಮುಂದುವರಿಯಬಹುದು.
ಹಿAಗಾರು ಮಳೆಯೇ ಈಗ ಜೀವನಾಡಿ:
ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರೈತರು ಹಿಂಗಾರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಉತ್ತಮ ಮಳೆ ಸುರಿದರೆ ಒಣಗುತ್ತಿರುವ ಭೂಮಿಗೆ ತೇವಾಂಶ, ಕೆರೆ-ಕಟ್ಟೆಗಳಿಗೆ ನೀರು ಹಾಗೂ ಅಂತರ್ಜಲ ಮರುಪೂರಣಕ್ಕೆ ಅವಕಾಶ ದೊರೆಯಬಹುದು. ಆದರೆ ಹಿಂಗಾರು ಮಳೆಯೂ ಕೈಕೊಟ್ಟರೆ ಕೃಷಿ, ಕುಡಿಯುವ ನೀರು ಹಾಗೂ ಜಾನುವಾರುಗಳ ನೀರಿನ ಅಗತ್ಯತೆಗಳ ಮೇಲೆ ಒತ್ತಡ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕೆರೆಗಳು ಬರಿದಾಗಿವೆ, ಹೊಲಗಳು ಬಾಡಿವೆ, ಅಂತರ್ಜಲ ಕುಸಿದಿದೆ. ಹೀಗಾಗಿ ಆಳಂದದ ಪಾಲಿಗೆ ಹಿಂಗಾರು ಮಳೆ ಕೇವಲ ಹವಾಮಾನದ ನಿರೀಕ್ಷೆಯಲ್ಲ; ಮುಂದಿನ ದಿನಗಳ ಬದುಕು ಮತ್ತು ಕೃಷಿಯ ಭರವಸೆಯಾಗಿದೆ.
ಒಣಗಿದ ೨೫ ಕೆರೆಗಳ ಪಟ್ಟಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿ ೨೫ ಕೆರೆಗಳು ಸಂಪೂರ್ಣ ಒಣಗಿವೆ ಎಂದು ನೀಡಲಾದ ಕೆರೆಗಳ ಆಳಂದ, ನಿಂಬಾಳ, ಕೆರೂರ, ಹೊನ್ನಳ್ಳಿ, ಧಂಗಾಪುರ, ಮಾದನಹಿಪ್ಪರಗಾ, ಸರಸಂಬಾ, ಮದಗುಣಕಿ, ಖಜೂರಿ, ಕವಲಗಾ, ನಿಂಗದಳ್ಳಿ, ನಿಂಬಾಳ ಪಿಟಿ, ಕಡಗಂಚಿ, ಝಳಕಿ, ಮಾಡಿಯಾಳ, ಗೋಳಾ ಬಿ., ತಡೋಳಾ, ಬಬಲೇಶ್ವರ, ವಾಗ್ದರಿ, ದಣ್ಣೂರ, ಕರಹರಿ, ಹಡಲಗಿ ಸೇರಿದಂತೆ ಒಟ್ಟು ೨೫ ಕೆರೆಗಳು.
ಉಳಿದ ಕೆರೆಗಳಲ್ಲಿ ನೀರಿನ ಲಭ್ಯತೆ ಮಟಕಿ ಮತ್ತು ಸಾಲೇಗಾಂವ
ಶೇ.೧೫ ವೈಜಾಪುರ ಶೇ.೨೦, ಬೆಳಮಗಿ, ಶೇ.೫ ನೀರಿವೆ ಎನ್ನಲಾಗಿದೆ.
ಅಧಿಕಾರಿಗಳ ಸೂಚನೆ:
ಒಣಗಿದ ಕೆರೆಗಳಲ್ಲಿ ಹೂಳೆತ್ತುವ ರೈತರಿಗೆ ರಾಜ್ಯ ಸರ್ಕಾರದ ಅನುದಾನದಲ್ಲಿ ಮಣ್ಣು ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೀರೇಶ ಮಾಮನೆ ತಿಳಿಸಿದ್ದಾರೆ.
ಅಧಿಕಾರಿಗಳು ಗುರುತಿಸಿದ ಸ್ಥಳದಿಂದ ಮಾತ್ರ ಮಣ್ಣು ತೆಗೆದುಕೊಂಡು ಹೋಗಬೇಕು. ಕೆರೆಯ ಬದುಗಳು ಹಾಗೂ ಕೆರೆಯ ಅವಶೇಷಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ರೈತರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕೆರೆಗಳ ದುರಸ್ತಿ ಹಾಗೂ ಜಂಗಲ್ ಕಡಿಯುವ ಕಾಮಗಾರಿಗಳಿಗೆ ಸಂಬAಧಿಸಿದAತೆ ವಿಬಿಜಿ-ರಾಮಜಿ ಅಡಿಯಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ, ಸಂಬAಧಿತ ಗ್ರಾಮ ಪಂಚಾಯಿತಿಗಳ ಮೂಲಕ ಅನುಮೋದನೆಗಾಗಿ ತಾಲೂಕು ಪಂಚಾಯಿತಿಗೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವೀರೇಶ ಮಾಮನೆ
ಎಇಇ ಸಣ್ಣ ನೀರಾವರಿ ಇಲಾಖೆ, ಅಫಜಲಪುರ.

Leave A Reply

Your email address will not be published.