Shubhashaya News

ವಿಮೋಚನಾ ಚಳುವಳಿಯಲ್ಲಿ ಆಳಂದ ತಾಲೂಕಿನ ಪಾತ್ರ ಮಹತ್ವದ್ದು- ಸುಭಾಷ್ ಆರ್. ಗುತ್ತೇದಾರ

ಆಳಂದ ಪಟ್ಟಣದ ಎಸ್‌ಆರ್‌ಜಿ ಫೌಂಡೇಶನ್‌ನ ಕೇಂದ್ರ ಕಚೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನದ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಸುಭಾಷ್ ಆರ್ ಗುತ್ತೇದಾರ ನೇರವೇರಿಸಿದರು.

ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ರಕ್ತಸಿಕ್ತ ಇತಿಹಾಸ, ಹೋರಾಟಗಾರರ ತ್ಯಾಗ–ಬಲಿದಾನ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪವನ್ನು ಸ್ಮರಿಸುವ ಮೂಲಕ ಆಳಂದ ಪಟ್ಟಣದ ಎಸ್‌ಆರ್‌ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಶಾಲಾ–ಕಾಲೇಜುಗಳ ಆವರಣದಲ್ಲಿ ಗುರುವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಸುಭಾಷ್ ಆರ್. ಗುತ್ತೇದಾರ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹೈದರಾಬಾದ್ ಕರ್ನಾಟಕ ಪ್ರದೇಶವು ನಿಜಾಮರ ಆಳ್ವಿಕೆಯಿಂದ ಮುಕ್ತವಾಗಲು ನಡೆದ ಹೋರಾಟವು ಈ ಭಾಗದ ಜನರ ಸ್ವಾಭಿಮಾನ, ಸ್ವಾತಂತ್ರ‍್ಯ ಹಾಗೂ ಪ್ರಜಾಸತ್ತಾತ್ಮಕ ಬದುಕಿನ ಹಕ್ಕಿಗಾಗಿ ನಡೆದ ಮಹತ್ವದ ಚಳುವಳಿಯಾಗಿದೆ ಎಂದು ಅವರು ಸ್ಮರಿಸಿದರು. ಆಳಂದ ತಾಲೂಕಿನ ವಿವಿಧ ಭಾಗಗಳಲ್ಲಿ ಕ್ಯಾಂಪ್, ಶಿಬಿರಗಳನ್ನು ಆಯೋಜಿಸಿ ಇಲ್ಲಿಯ ಜನರನ್ನು ರಜಾಕರ ವಿರುದ್ಧ ಹೋರಾಡಲು ಸಿದ್ಧಗೊಳಿಸಲಾಗಿತ್ತು ಎಂದು ಹೇಳಿದರು.

ಸೆಪ್ಟೆಂಬರ್ ೧೭, ೧೯೪೮ರಂದು ಹೈದರಾಬಾದ್ ಸಂಸ್ಥಾನವು ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಯಾದ ಐತಿಹಾಸಿಕ ಘಟನೆಯ ಹಿನ್ನೆಲೆಯಲ್ಲಿ ಆಚರಿಸಲಾಗುವ ಈ ದಿನವು ಕಲ್ಯಾಣ ಕರ್ನಾಟಕದ ಜನರಿಗೆ ವಿಶೇಷ ಮಹತ್ವವನ್ನು ಹೊಂದಿದೆ. ಸ್ವಾತಂತ್ರ‍್ಯಾನAತರವೂ ನಿಜಾಮರ ಆಳ್ವಿಕೆಯಲ್ಲಿದ್ದ ಈ ಪ್ರದೇಶವನ್ನು ವಿಮೋಚನೆಗೊಳಿಸಲು ಹೋರಾಡಿದ ಸ್ವಾತಂತ್ರ‍್ಯ ಹೋರಾಟಗಾರರ ಧೈರ್ಯ, ತ್ಯಾಗ ಹಾಗೂ ಜನಪರ ಹೋರಾಟಗಳನ್ನು ಇಂದಿನ ಯುವಜನತೆ ಅರಿತುಕೊಳ್ಳಬೇಕು ಎಂದಯ ನುಡಿದರು.
ವಿಮೋಚನಾ ಚಳುವಳಿಯು ಕೇವಲ ಇತಿಹಾಸದ ಒಂದು ಅಧ್ಯಾಯವಲ್ಲ. ಅದು ಸಾಮಾಜಿಕ ನ್ಯಾಯ, ಶಿಕ್ಷಣ, ಅಭಿವೃದ್ಧಿ ಮತ್ತು ಸಮಾನ ಅವಕಾಶಗಳಿಗಾಗಿ ಮುಂದುವರಿಯಬೇಕಾದ ಜವಾಬ್ದಾರಿಯನ್ನು ನೆನಪಿಸುವ ದಿನವಾಗಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕಿದ್ದು, ವಿದ್ಯಾರ್ಥಿಗಳಲ್ಲಿ ನಾಡಿನ ಇತಿಹಾಸ, ಸಂಸ್ಕೃತಿ ಹಾಗೂ ರಾಷ್ಟ್ರಪ್ರೇಮದ ಅರಿವು ಮೂಡಿಸುವ ಅಗತ್ಯವಿದೆ ಎಂದು ಕಾರ್ಯಕ್ರಮದ ಸಂದರ್ಭದಲ್ಲಿ ತಿಳಿಸಲಾಯಿತು.
ಪ್ರಾಚಾರ್ಯ ಕಲ್ಯಾಣಿ ಸಾವಳಗಿ ಮಾತನಾಡಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಪಥದಲ್ಲಿ ಶಿಕ್ಷಣವು ನಿರ್ಣಾಯಕ ಶಕ್ತಿಯಾಗಿದೆ. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉನ್ನತ ಶಿಕ್ಷಣದ ಅವಕಾಶಗಳನ್ನು ಒದಗಿಸುವ ಮೂಲಕ ಈ ಭಾಗದ ಭವಿಷ್ಯವನ್ನು ರೂಪಿಸಬೇಕಾಗಿದೆ. ವಿಮೋಚನಾ ಹೋರಾಟಗಾರರ ಆಶಯಗಳಿಗೆ ತಕ್ಕಂತೆ ಜ್ಞಾನ, ಸಂಸ್ಕಾರ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಕಾರ್ಯದಲ್ಲಿ ಶಿಕ್ಷಣ ಸಂಸ್ಥೆಗಳು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಡಾ. ಅಪ್ಪಾಸಾಬ ಬಿರಾದಾರ, ಅಶೋಕರೆಡ್ಡಿ, ಜ್ಯೋತಿ ವಿಶಾಖ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಂಸ್ಥೆಯ ವಿವಿಧ ಶಾಲಾ–ಕಾಲೇಜುಗಳ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.