ಚಿತ್ತಾಪುರ: ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಘೋಷಿಸಿರುವ ಸಂಪೂರ್ಣ ಲಾಕ್‍ಡೌನ್‍ಗೆ ಮೂರನೇ ದಿನವು ಸಾರ್ವಜನಿಕರ ಸ್ಪಂದನೆ ಉತ್ತಮವಾಗಿ ದೊರಕಿದೆ.
ಬೆಳಗ್ಗೆ 6 ಗಂಟೆಯಿಂದಲೇ ರಸ್ತೆಗಳಿದ ಪುರಸಭೆ ಅಧಿಕಾರಿಗಳು, ಪೊಲೀಸರು, ಕಂದಾಯ ಇಲಾಲೆ ಅಧಿಕಾರಿಗಳು ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಅನಾವಶ್ಯಕವಾಗಿ ತಿರುಗಾಡದಂತೆ ಎಚ್ಚರಿಕೆ ನೀಡುವ ಜೊತೆಗೆ ದಂಡ ಹಾಕಿ ಬೈಕ್, ಕಾರ್‍ಗಳನ್ನು ಸೀಜ್ ಮಾಡಿದರು.
ಪಟ್ಟಣದ ಪ್ರಮುಖ ವೃತಗಳಾದ ಜನತಾ ಚೌಕ್, ನಾಗಾವಿ ವೃತ್ತ, ಚಿತ್ತಾವಲಿ ವೃತ್ತ, ಭುವನೇಶ್ವರಿ ವೃತ್ತ, ಲಾಡ್ಜೀಂಗ್ ಕ್ರಾಸ್, ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಕಡೆ ಪೊಲೀಸರು ಬ್ಯಾರಿಕೇಡ್ ಹಾಕಿ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದರು.
ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನವನ್ನು ಪೊಲೀಸರು ತಪಾಸಣೆ ನಡೆಸಿ ದಾಖಲಾತಿ ಪಡೆದು ಸಂಚಾರಕ್ಕೆ ಬಿಡುತ್ತಿದ್ದರು. ಕಾರುಗಳಲ್ಲಿ ಬಂದವರನ್ನು ವಿಚಾರಿಸಿಯೇ ನಂತರ ಬಿಡುತ್ತಿದ್ದರು.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಾಲು, ಔಷಧಿ, ಆಸ್ಪತ್ರೆಗಳು, ಪೇಟ್ರೋಲ್ ಬಂಕ್ ಮಾತ್ರ ತೆಗೆದಿದ್ದವು. ಆದರೂ ಕೆಲವರು ಅನಗತ್ಯವಾಗಿ ತಿರುಗಾಡಲು ಹೊರಗೆ ಬಂದಿದ್ದರಿಂದ ಅವರ ವಾಹನಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದರು.
ಬಿಕೋ ಎಂದ ರಸ್ತೆಗಳು: ಸಂಪೂರ್ಣ ಲಾಕ್‍ಡೌನ್ ಕಾರಣದಿಂದ ಪಟ್ಟಣದ ಪ್ರಮುಖ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು. ಅಲ್ಲೊಂದು, ಇಲ್ಲೊಂದು ವಾಹನ ಸಂಚಾರ ಮಾಡುತ್ತಿರುವುದು ಕಂಡು ಬಂತು. ಪಿಎಸ್‍ಐ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ಪಟ್ಟಣಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಊಟಕ್ಕಾಗಿ ಪರದಾಡುತ್ತಿದ್ದ ಮಹಿಳೆಗೆ ಹೇಡ್ ಕಾನ್ಸ್‍ಟೇಬಲ್ ಚಂದ್ರಶೇಖರ, ಸಿಬ್ಬಂದಿ ಮಹ್ಮದ್ ರಸೂಲ್ ಊಟದ ಪ್ಯಾಕೇಟ್ ಹಾಗೂ ನೀರಿನ ಬಾಟಲ್ ಕೊಡುವ ಮೂಲಕ ಮಾನವಿಯತೆ ಮೆರೆದರು.
ಸೀಲ್‍ಡೌನ್ ಮಾಡಿದ ಪುರಸಭೆ ಅಧಿಕಾರಿಗಳು: ಜಿಲ್ಲಾಧಿಕಾರಿಗಳು ವಾರದ ಮೂರು ದಿನಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ಕೆಲ ಕಾಲೋನಿಗಳಲ್ಲಿ ಬೈಕ್ ಹಾಗೂ ಕಾರುಗಳು ಸಂಚರಿಸುತ್ತಿರುವುದನ್ನು ಗಮನಿಸಿದ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಕೂಡಲೇ ಪ್ರಮುಖ ರಸ್ತೆ ಹಾಗೂ ಕಾಲೋನಿಗಳಿಗೆ ತೆರಳಿ ಸೀಲ್ ಡೌನ ಮಾಡುವ ಮೂಲಕ ಜನರು ಕಾಲೋನಿಗಳಿಂದ ಹೊರಗಡೆ ಬರದಂತೆ ನೋಡಿಕೊಂಡರು.