ವಸತಿ ಶಾಲೆಯ ಮಕ್ಕಳೊಂದಿಗೆ ಡಿ.ಸಿ ಗೂಗಲ್ ಮೀಟ್:
ಗುಣಮಟ್ಟದ ಆಹಾರ ಪೂರೈಕೆ ಕುರಿತು ಮಕ್ಕಳಿಂದಲೆ ಫೀಡ್ ಬ್ಯಾಕ್ ಪಡೆದ ಡಿ.ಸಿ ಇಕ್ರಮ್ ಶರೀಫ್
ಕಲಬುರಗಿ: ಜಿಲ್ಲೆಯ ವಸತಿ ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುವ ಊಟದ ಗುಣಮಟ್ಟ, ಶಾಲೆಯಲ್ಲಿನ ಮೂಲಸೌಕರ್ಯ ಕುರಿತು ಖುದ್ದು ಶಾಲಾ ಮಕ್ಕಳಿಂದಲೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಫೀಡ್ ಬ್ಯಾಕ್ ಪಡೆದರು.
ಮಂಗಳವಾರ ಜಿಲ್ಲೆಯ ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯ್ದ ಸುಮಾರು 15 ವಸತಿ ಶಾಲೆಯ 6-10 ತರಗತಿ ಮಕ್ಕಳೊಂದಿಗೆ ಗೂಗಲ್ ಮೀಟ್ ಮೂಲಕ ಮಕ್ಕಳೊಂದಿಗೆ ನೇರವಾಗಿ ಮಾತನಾಡಿದ ಜಿಲ್ಲಾಧಿಕಾರಿಗಳು ಅವರ ಸಮಸ್ಯೆಗಳನ್ನು ಆಲಿಸಿದಲ್ಲದೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ-ರಾತ್ರಿ ಊಟ ಸರಿಯಾಗಿ ನೀಡಲಾಗುತ್ತಿದಿಯೇ ಎಂದು ಮಕ್ಕಳಿಂದನೆ ತಿಳಿದುಕೊಂಡರು.
ಸೋಲಾರ್ ಕೆಟ್ಟು ಹೋಗಿದ್ದು, ಹೊಸದಾಗಿ ಅಳವಡಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆಯೆ ಆರ್.ಓ. ಪ್ಲ್ಯಾಂಟ್ ಅಳವಡಿಸಬೇಕು. ಶಾಲೆಗೆ ಕಂಪೌಂಡ್ ಇಲ್ಲದ ಕಾರಣ ಅಭದ್ರತೆ ಉಂಟಾಗುತ್ತಿದೆ. ವಲತಿ ನಿಲಯದಲ್ಲಿಯೂ ಗ್ರಂಥಾಲಯ ವ್ಯವಸ್ಥೆ ಮಾಡಬೇಕೆಂದು ಹೀಗೇ ಇತ್ಯಾದಿ ಬೇಡಿಕೆ ಪಟ್ಟಿ ಡಿ.ಸಿ. ಮುಂದೆ ಮಕ್ಕಳು ಇಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಸಿ. ಇಕ್ರಂ ಶರೀಫ್ ಶಾಲೆಯ ಅವರಣ ಮತ್ತು ಸುತ್ತಮುತ್ತ ಸ್ವಚ್ಚತೆಗೆ ಗಮನ ಹರಿಸಲಾಗುತ್ತದೆ. ನಿಮಗೆ ಗುಣಮಟ್ಟದ ಆಹಾರ ಪೂರೈಕೆ ಜವಾಬ್ದಾರಿ ನಮ್ಮದು ಅದರ ಬಗ್ಗೆ ಚಿಂತೆ ಬೇಡ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ನೀವು ಬಂದಿದ್ಧೀರಿ. ನಿಮ್ಮ ಮುಂದಿನ ಭವಿಷ್ಯ ಚೆನ್ನಾಗಿರಲು ಕಠಿಣ ಅಭ್ಯಾಸ ಮತ್ತು ಓದಿನತ್ತ ಹೆಚ್ಚು ಸಮಯ ನೀಡಬೇಕು. ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಸರ್ವ ಪ್ರಯತ್ನ ಮುಂದುವರೆಸಲು ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಂತೆ ಮಕ್ಕಳಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು.
ಮೂಲಸೌಕರ್ಯದ ಪಟ್ಟಿ ಕೊಡಿ:
ವಸತಿ ಶಾಲೆಯಲ್ಲಿ ಬೆಂಚ್, ವಿದ್ಯುತ್ ದುರಸ್ತಿ, ಕಟ್ಟಡ ದುರಸ್ತಿ, ಆರ್.ಓ. ಪ್ಲ್ಯಾಂಟ್ ಸೇರಿದಂತೆ ಮಕ್ಕಳ ಬೆಡಿಕೆಯಂತೆ ಶಾಲೆಗಳಿಗೆ ಬೇಕಾದ ಮೂಲ ಸೌಕರ್ಯಗಳ ಕುರಿತು ಕೂಡಲೆ ಪಟ್ಟಿ ನೀಡಿದಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿ ಅನುದಾನ ಅಥವಾ ಇಲಾಖೆಯ ಅನುದಾನದಿಂದ ಅದೆಲ್ಲವನ್ನು ಪೂರೈಸಲಾಗುವುದು ಎಂದು ಡಿ.ಸಿ ಇಕ್ರಂ ಶರೀಫ್ ಸಂವಾದದಲ್ಲಿ ಭಾಗವಹಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಗೂಗಲ್ ಮೀಟ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಮತ್ತು ಪ್ರಭಾರಿ ಬಿ.ಸಿ.ಎಂ. ಅಧಿಕಾರಿ ಸಂಗಮೇಶ ಇದ್ದರು.