Shubhashaya News

ಖರ್ಗೆ ಕಾರ್ಯಕ್ರಮ ಸ್ಥಳ ಶುದ್ಧೀಕರಣ: ಕರ್ನಾಟಕ ಭೀಮಸೇನೆ ಖಂಡನೆ

ಆಳಂದ: ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಆ. ೮ರಂದು ಕಾಂಗ್ರೆಸ್ ಸಾರ್ವಜನಿಕ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ಬಳಿಕ, ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಕಾರ್ಯಕ್ರಮ ನಡೆದ ಸ್ಥಳವನ್ನು ಶುದ್ಧೀಕರಣ ಯಾಗದ ಮೂಲಕ ಸ್ವಚ್ಛಗೊಳಿಸಲಾಗಿದೆ ಎನ್ನಲಾದ ಘಟನೆ ಖಂಡನೀಯ ಎಂದು ಕರ್ನಾಟಕ ಭೀಮಸೇನೆ ಕಲ್ಯಾಣ ಕರ್ನಾಟಕ ಪ್ರದೇಶ ಅಧ್ಯಕ್ಷ ಬಾಬುರಾವ್ ಅರುಣೋದಯ ಹಾಗೂ ಜಿಲ್ಲಾಧ್ಯಕ್ಷ ಸಂಜಯ್ ಭೋಸಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಂಟಿ ಹೇಳಿಕೆ ನೀಡಿರುವ ಅವರು, ಭಾರತ ಚಂದ್ರನ ದಕ್ಷಿಣ ಧ್ರುವ ತಲುಪಿ ವಿಶ್ವದಾಖಲೆ ನಿರ್ಮಿಸಿರುವ ಸಂದರ್ಭದಲ್ಲಿ ಜಾತಿ ಹಾಗೂ ಅಸ್ಪೃಶ್ಯತೆಯ ಮನೋಭಾವ ಇನ್ನೂ ಜೀವಂತವಾಗಿರುವುದು ವಿಷಾದಕರ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಜಾತಿ ಹೆಸರಿನಲ್ಲಿ ನಡೆದಿರುವ ಅವಮಾನಕರ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಿಗೇ ಇಂತಹ ಪರಿಸ್ಥಿತಿ ಎದುರಾದರೆ ಸಾಮಾನ್ಯ ದಲಿತರ ಸ್ಥಿತಿ ಹೇಗಿರಬಹುದು ಎಂಬ ಆತಂಕವಿದೆ. ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಆಚರಣೆಗಳಿಗೆ ಕಾನೂನಿನ ಮೂಲಕ ಅಂತ್ಯ ಹಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ಸಮಾನತೆ ಮತ್ತು ಘನತೆಯ ಬದುಕಿನ ಹಕ್ಕು ನೀಡಿದ್ದಾರೆ. ಆದರೂ ಜಾತಿ ಪದ್ಧತಿ, ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಗಳನ್ನು ಜೀವಂತವಾಗಿಡುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಅಗತ್ಯ ಎಂದು ಅವರು ಹೇಳಿದ್ದಾರೆ.
ಶುದ್ಧೀಕರಣದ ನೆಪದಲ್ಲಿ ಅಸ್ಪೃಶ್ಯತೆಯನ್ನು ಆಚರಿಸಿ ಖರ್ಗೆ ಅವರ ಘನತೆಗೆ ಧಕ್ಕೆ ತಂದವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

Leave A Reply

Your email address will not be published.