Shubhashaya News

ಜಾತಿ–ಆದಾಯ ಪ್ರಮಾಣ ಪತ್ರ ತಿದ್ದುಪಡಿಗೆ ಒತ್ತಾಯ

ಶಿಕ್ಷಕರ ನೇಮಕಾತಿಗೆ ದಾಖಲೆ ಗೊಂದಲ

ಆಳಂದ: ಜಾತಿ ಆದಾಯ ಪತ್ರದಲ್ಲಿ ಉದ್ಯೋಗಕ್ಕಾಗಿ ಎಂದು ನಮೂದಿಸಬೇಕು ಎಂದು ಶಿಕ್ಷಕ ಉದ್ಯೋಗ ಆಕಾಂಕ್ಷಿಗಳು ತಹಸೀಲ್ದಾರ ಅಣ್ಣಾರಾವ್ ಪಾಟೀಲರಿಗೆ ಮನವಿ ಸಲ್ಲಿಸಿದರು.

ಆಳಂದ: ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಉದ್ಯೋಗಾಕಾಂಕ್ಷಿಗಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿನ ಉದ್ದೇಶವನ್ನು “ಉದ್ಯೋಗಕ್ಕಾಗಿ” ಎಂದು ನಮೂದಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಉದ್ಯೋಗ ಆಕಾಂಕ್ಷಿ ಶಿಕ್ಷಕರು ಒತ್ತಾಯಿಸಿದರು.
ತಾಲೂಕು ಆಡಳಿತ ಕಚೇರಿಯಲ್ಲಿ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ ಉದ್ಯೋಗಾಕಾಂಕ್ಷಿಗಳು, ಕಳೆದ ಹತ್ತು ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆಯದೇ ಇದ್ದು, ಪ್ರಸಕ್ತ ಸಾಲಿನಲ್ಲಿ ನೇಮಕಾತಿಗೆ ಸರ್ಕಾರ ಆದೇಶ ಹೊರಡಿಸಿರುವುದರಿಂದ ಸಾವಿರಾರು ಅಭ್ಯರ್ಥಿಗಳು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ನೇಮಕಾತಿಗೆ ಅಗತ್ಯವಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ “ಉದ್ಯೋಗಕ್ಕಾಗಿ” ಎಂಬ ಉದ್ದೇಶ ನಮೂದಿಸಿರಬೇಕು ಎಂಬ ಷರತ್ತು ಅಭ್ಯರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ತಿಳಿಸಿದರು.
ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರೂ, ಪ್ರಮಾಣ ಪತ್ರದಲ್ಲಿ “ಶಿಕ್ಷಣಕ್ಕಾಗಿ” ಎಂದು ನಮೂದಾಗಿ ಬರುತ್ತಿರುವುದರಿಂದ ಗೊಂದಲ ಉಂಟಾಗಿದೆ. ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸಲು ಈಗಾಗಲೇ ಸಮಯಾವಕಾಶ ಕಡಿಮೆ ಇದ್ದು, ದಾಖಲೆಗಳ ತಿದ್ದುಪಡಿಗಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಈಗಾಗಲೇ ಪಡೆದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನೇಮಕಾತಿ ಉದ್ದೇಶಕ್ಕೆ ಮಾನ್ಯಗೊಳಿಸುವುದು ಅಥವಾ ಅವುಗಳಲ್ಲಿ ಅಗತ್ಯ ತಿದ್ದುಪಡಿ ಮಾಡಿ “ಉದ್ಯೋಗಕ್ಕಾಗಿ” ಎಂದು ನಮೂದಿಸುವ ವ್ಯವಸ್ಥೆ ಕಲ್ಪಿಸಬೇಕು. ದಾಖಲೆಗಳ ತಾಂತ್ರಿಕ ಸಮಸ್ಯೆಯಿಂದ ಯಾವುದೇ ಅರ್ಹ ಅಭ್ಯರ್ಥಿ ಶಿಕ್ಷಕರ ನೇಮಕಾತಿ ಅವಕಾಶದಿಂದ ವಂಚಿತನಾಗದAತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಕ ಉದ್ಯೋಗ ಆಕಾಂಕ್ಷಿ ಜಗದೀಶ್ ಕೋರೆ, ಸಂತೋಷ ಶೆಳಕೆ, ಲಕ್ಷ್ಮಿಕಾಂತ್ ಮೆಲೆಕೇರಿ, ಪ್ರಭಾಕರ್ ಹೊಸಮನಿ, ಶ್ರೀಶೈಲ್ ಮೂಲೆಗೆ ಸೇರಿದಂತೆ ಮತ್ತಿತರರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರರು ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Leave A Reply

Your email address will not be published.