ಕಲಬುರಗಿ: ನವಜಾತ ಶಿಶುಗಳ ಜೀವನಪೂರ್ತಿ ಶಾರೀರಿಕ ಬೆಳವಣಿಗೆಗೆ ಆರಂಭಿಕ ವರ್ಷಗಳಲ್ಲಿನ ಸರಿಯಾದ ಪೋಷಣೆ ಹಾಗೂ ಸೂಕ್ತ ಸ್ತನ್ಯಪಾನ ಅತ್ಯಂತ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಕ್ಕಳ ಚಿಕಿತ್ಸಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ 2026ರ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿಯ ಸಪ್ತಾಹವನ್ನು “ಜೀವನದ ಸುಸ್ಥಿರ ಆರಂಭಕ್ಕಾಗಿ ಸ್ತನ್ಯಪಾನ ಪರಿಣಾಮಕಾರಿಯಾದುದನ್ನು ಬಲಪಡಿಸಿ” ಎಂಬ ಅರ್ಥಪೂರ್ಣ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಮಗುವಿನ ಆರಂಭಿಕ ಹಂತದಲ್ಲೇ ಪೌಷ್ಟಿಕ ಆಹಾರ ಮತ್ತು ಸರಿಯಾದ ಆರೈಕೆ ನೀಡುವುದು ಬಹಳ ಮುಖ್ಯ. ಹೊಸ ತಾಯಂದಿರಲ್ಲಿ ಕಂಡುಬರುವ ಭಯ ಹಾಗೂ ಗೊಂದಲಗಳನ್ನು ನಿವಾರಿಸಬೇಕು. ಸಮಾಜದಲ್ಲಿರುವ ಅಪಾಯಕಾರಿ ಮತ್ತು ಅವೈಜ್ಞಾನಿಕ ಆಚರಣೆಗಳು ‘ಬೊಟುಲಿಸಮ್’ ನಂತಹ ತೀವ್ರ ತರದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರವಹಿಸಬೇಕು.
ತಾಯಂದಿರಿಗೆ ಮಗುವಿಗೆ ಹಾಲುಣಿಸುವ ಸರಿಯಾದ ತಾಂತ್ರಿಕ ವಿಧಾನಗಳ ಅರಿವಿರಬೇಕು. ಜತೆಗೆ, ಮಗುವಿನ ಅಳು ಕೇವಲ ಹಸಿವಿನಿಂದ ಮಾತ್ರವಲ್ಲ ಎಂಬುದನ್ನೂ ಅರ್ಥೈಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಶಿಶು ಆರೈಕೆ ಜಾಗೃತಿ ಅಭಿಯಾನವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಪಿಎಚ್ಸಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಸೂಪರ್ವೈಸರ್ಗಳು, ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು. ಈ ಕಾರ್ಯಾಗಾರಗಳನ್ನು ಆನ್ಲೈನ್ ಮತ್ತು ನೇರ ಪ್ರಸಾರ ಮಾಡುವ ಮೂಲಕ ಜಿಲ್ಲೆಯಾದ್ಯಂತ ವಿಸ್ತರಿಸಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಹಿಳೆಯರಿಗೆ ನಿರಂತರ ಜಾಗೃತಿ ಮೂಡಿಸಲು ಸಮಗ್ರ ಯೋಜನೆ ರೂಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸ್ತ್ರೀರೋಗತಜ್ಞೆ ಡಾ. ನಂದಿನಿ ಬೋಸ್ಗೆ ಅವರು ನವಜಾತ ಶಿಶುವಿನ ಆರೈಕೆ ಮತ್ತು ಸ್ತನ್ಯಪಾನದ ಮಹತ್ವದ ಕುರಿತು ಸಂವಾದ ನಡೆಸಿಕೊಟ್ಟರು.
ಜಿಮ್ಸ್ ಆಸ್ಪತ್ರೆಯ ಶಿಶು ತಜ್ಞ ವಿಭಾಗದ ಮುಖ್ಯಸ್ಥ ಡಾ. ರೇವಣಸಿದ್ದಪ್ಪ ಭೋಸ್ಗಿ ಸ್ವಾಗತಿಸಿದರು.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್ಒ) ಶರಣಪ್ಪ ಖ್ಯಾತನಾಳ, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಪಿಎಚ್ಸಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.