Shubhashaya News

ಚನ್ನಮ್ಮ ದೇವೇಗೌಡ ನಿಧನಕ್ಕೆ ಜೆಡಿಎಸ್ ಸೇರಿ ಗಣ್ಯರ ಶೋಕ

ಆಳಂದ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಹಾಗೂ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ತಾಯಿ ಚನ್ನಮ್ಮ ದೇವೇಗೌಡ ಅವರ ನಿಧನಕ್ಕೆ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇವೇಗೌಡ ಅವರ ರಾಜಕೀಯ ಪಯಣದಲ್ಲಿ ಚನ್ನಮ್ಮ ದೇವೇಗೌಡ ಅವರು ಹೆಗಲಿಗೆ ಹೆಗಲು ಕೊಟ್ಟು ನಿಂತ ತ್ಯಾಗಮಯಿ ವ್ಯಕ್ತಿತ್ವವಾಗಿದ್ದರು. ಅನೇಕ ಸವಾಲುಗಳ ನಡುವೆಯೂ ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸಿದ ಅವರು ಸರಳತೆ, ಪ್ರೀತಿ, ವಾತ್ಸಲ್ಯ ಹಾಗೂ ಆತ್ಮೀಯತೆಯ ಪ್ರತಿರೂಪರಾಗಿದ್ದರು ಎಂದು ಸ್ಮರಿಸಿದರು.
ಚನ್ನಮ್ಮ ದೇವೇಗೌಡ ಅವರ ಅಗಲಿಕೆ ದೇವೇಗೌಡ ಕುಟುಂಬಕ್ಕಷ್ಟೇ ಅಲ್ಲ, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ನೀಡಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಹೇಶ್ವರಿ ವಾಲಿ ಪ್ರಾರ್ಥಿಸಿದ್ದಾರೆ.
ಇದೇ ವೇಳೆ ಶಾಸಕ ಬಿ.ಆರ್. ಪಾಟೀಲ, ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ, ರಮೇಶ್ ಲೋಹಾರ, ಕಿಸಾನ್ ಸಭಾ ಅಧ್ಯಕ್ಷ ಮೌಲಾ ಮುಲ್ಲಾ ಸೇರಿದಂತೆ ವಿವಿಧ ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಚನ್ನಮ್ಮ ದೇವೇಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸಿ, ದೇವೇಗೌಡ ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.