Shubhashaya News

ನೀಟ್ ಪತ್ರಿಕೆ ಸೋರಿಕೆ ಹೋರಾಟ: ವಾಂಗಚುಕ್ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ

ಆಳಂದ: ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣ ಕುರಿತು ದೆಹಲಿಯ ಜಂತರ್ ಮಂತರ್‌ನಲ್ಲಿ ಎರಡು ವಾರಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಶಿಕ್ಷಣ ವಿಜ್ಞಾನಿ, ಪರಿಸರವಾದಿ ಸೊನಮ್ ವಾಂಗಚುಕ್ ಅವರು ತಮ್ಮ ಹೋರಾಟ ಕೈಬಿಡುವುದು ಸೂಕ್ತ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರಕಾರ ಇದುವರೆಗೂ ಈ ವಿಷಯದ ಬಗ್ಗೆ ಯಾವುದೇ ರೀತಿ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ಯಾವುದೇ ಮೂಲೆಯಲ್ಲಿಯೂ ಈ ಬಗ್ಗೆ ಹೋರಾಟ, ಧರಣಿ, ಸತ್ಯಾಗ್ರಹಗಳು ನಡೆಯುತ್ತಿಲ್ಲ. ಇದರಿಂದಾಗಿ ಸರಕಾರಕ್ಕೆ ಯಾವುದೇ ಬಿಸಿ ಮುಟ್ಟಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಮಾಧ್ಯಮಗಳು ಸಹ ಈ ವಿಷಯದ ಬಗ್ಗೆ ಸೂಕ್ತ ಪ್ರಚಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಂದ, ಶಿಕ್ಷಣಪ್ರೇಮಿಗಳಿಂದ, ವಿದ್ಯಾರ್ಥಿಗಳಿಂದ ಹಾಗೂ ಪಾಲಕರಿಂದಲೂ ಈ ಹೋರಾಟಕ್ಕೆ ಬೆಂಬಲ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಒಬ್ಬ ವಿಜ್ಞಾನಿ ಉಪವಾಸ ಸತ್ಯಾಗ್ರಹ ಮಾಡಿ ಪ್ರಾಣ ತ್ಯಜಿಸಿದರೂ ಅವರ ಬಲಿದಾನ ವ್ಯರ್ಥವಾಗುವ ಆತಂಕವಿದೆ ಎಂದು ಶ್ರೀಮತಿ ಲೋಹಾರ ಅಭಿಪ್ರಾಯಪಟ್ಟಿದ್ದಾರೆ.
ದೇಶ ನೀರವ ಮೌನಕ್ಕೆ ಶರಣಾಗಿದೆ, ಹೋರಾಟಗಾರರು ಮಾರಾಟವಾಗಿದ್ದಾರೆ. ಹೋರಾಟ, ಚಳುವಳಿ ಎಂಬ ಪದಗಳು ಇಂದು ಕೇವಲ ವಾಹನಗಳ ಮತ್ತು ಗೋಡೆಗಳ ಮೇಲಿನ ಬರವಣಿಗೆಗೆ ಸೀಮಿತವಾಗಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಸೊನಮ್ ವಾಂಗಚುಕ್ ಒಬ್ಬ ದೊಡ್ಡ ವಿಜ್ಞಾನಿ, ಪರಿಸರವಾದಿ ಹಾಗೂ ಹೋರಾಟಗಾರರಾಗಿದ್ದು, ಅವರ ವಿಚಾರಗಳು ಈ ದೇಶದ ಜನತೆಗೆ ಸರಿಯಾಗಿ ಅರ್ಥವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ಬಲಿದಾನ ವ್ಯರ್ಥವಾಗಬಾರದು ಎಂಬ ಕಾರಣಕ್ಕಾಗಿ ಅವರು ಈ ವಿಷಯದ ಮೇಲಿನ ಸತ್ಯಾಗ್ರಹವನ್ನು ಹಿಂಪಡೆಯಬೇಕೆAದು ಪೂಜಾ ರಮೇಶ ಲೋಹಾರ ಮನವಿ ಮಾಡಿದ್ದಾರೆ.

Leave A Reply

Your email address will not be published.