Shubhashaya News

ಸಾಲೇಗಾಂವದಲ್ಲಿ ಮಳೆಗಾಗಿ ಗೊಂಬೆಗಳ ಮದುವೆ

ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಗೊಂಬೆಗಳಿಗೆ ತಾಳಿ ಕಟ್ಟಿದ ಗ್ರಾಮಸ್ಥರು – ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಲಿ ಎಂದು ಪ್ರಾರ್ಥನೆ

ಆಳಂದ: ಸಾಲೇಗಾಂವದಲ್ಲಿ ರೈತರು ಮಳೆಗಾಗಿ ಪ್ರಾರ್ಥಿಸಿ ಗೋಂಬೆಗಳ ಮದುವೆ ಕೈಗೊಂಡು ಕುಂಬ, ಕಳಸದೊಂದಿಗೆ ಮೆರವಣಿಗೆ ನಡೆಸಿದರು.

ಆಳಂದ: ನಿರಂತರ ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರು ಉತ್ತಮ ಮಳೆಯಾಗಲೆಂದು ತಾಲೂಕಿನ ಸಾಲೇಗಾಂವ ಗ್ರಾಮದಲ್ಲಿ ಸಂಪ್ರದಾಯಬದ್ಧವಾಗಿ ಗೊಂಬೆಗಳ ಮದುವೆ ನೆರವೇರಿಸಿ ಭಗವಂತನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಗ್ರಾಮದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಜನಪದ ಆಚರಣೆಯನ್ನು ಈ ವರ್ಷವೂ ಈ ಬಾರಿ ಮಳೆಯಾಗದಿದ್ದಕ್ಕೆ ಭಕ್ತಿಭಾವದಿಂದ ಆಚರಿಸಲಾಯಿತು.
ಗ್ರಾಮ ದೇವತ ಶ್ರೀ ಮಹಾದೇವಲಿಂಗ ದೇವಸ್ಥಾನದಲ್ಲಿ ಮದುವೆಯ ಎಲ್ಲ ವಿಧಿವಿಧಾನಗಳನ್ನು ನೈಜ ಮದುವೆಯಂತೆಯೇ ಅತ್ಯಂತ ಸಂಭ್ರಮ ಹಾಗೂ ಸಂಪ್ರದಾಯದAತೆ ನೆರವೇರಿಸಲಾಯಿತು. ಮೊದಲು ಎರಡೂ ಗೊಂಬೆಗಳ ಕುಟುಂಬಗಳ ಪ್ರತಿನಿಧಿಗಳಾಗಿ ಗ್ರಾಮಸ್ಥರು ಬೀಗರಾಗಿ ಪರಸ್ಪರ ಭೇಟಿಯಾಗಿ ಬಾಯಿಗೆ ಸಕ್ಕರೆ ಹಾಕಿ ಸ್ವಾಗತಿಸಿಕೊಂಡರು. ಬಳಿಕ ಶುಭ ಮುಹೂರ್ತದಲ್ಲಿ ಸುರೆಗೆ ಸುತ್ತಿ, ವಧು-ವರರಂತೆ ಗೊಂಬೆಗಳನ್ನು ಅಲಂಕರಿಸಿ, ಮದುವೆ ಮಂಟಪದಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಿ ತಾಳಿ ಕಟ್ಟಲಾಯಿತು. ನಂತರ ಗ್ರಾಮಸ್ಥರು ಅಕ್ಷತೆ ಹಾಕಿ ನವ ದಂಪತಿಗಳಿಗೆ ಶುಭ ಹಾರೈಸಿದರು.
ಮದುವೆ ಸಮಾರಂಭದ ಬಳಿಕ ಬೆಂಡು, ಬಾಜಾ ಹಾಗೂ ಭಜನಾ ತಂಡಗಳೊAದಿಗೆ ದೇವರ ನಾಮಸ್ಮರಣೆ ಮಾಡುತ್ತಾ ಕುಂಬ ಕಳಸದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮೆರವಣಿಗೆಯುದ್ದಕ್ಕೂ ಮಹಿಳೆಯರು ಮಂಗಳಗೀತೆಗಳನ್ನು ಹಾಡಿ ಸಂಭ್ರಮ ಹೆಚ್ಚಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಮಳೆಗಾಗಿ ಭಗವಂತನಲ್ಲಿ ಪ್ರಾರ್ಥಿಸಿ, “ಸಕಾಲಕ್ಕೆ ಉತ್ತಮ ಮಳೆಯಾಗಿ ರೈತರ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ, ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ದೂರವಾಗಲಿ” ಎಂದು ಬೇಡಿಕೊಂಡರು.
ಗ್ರಾಮದ ಹಿರಿಯರ ಪ್ರಕಾರ, ಮಳೆ ಕೊರತೆಯ ಸಂದರ್ಭದಲ್ಲಿ ಗೊಂಬೆಗಳ ಮದುವೆ ಮಾಡುವ ಈ ಆಚರಣೆ ಜನಪದ ನಂಬಿಕೆಯ ಸಂಕೇತವಾಗಿದ್ದು, ಪ್ರಕೃತಿಯ ಅನುಗ್ರಹಕ್ಕಾಗಿ ಸಮೂಹವಾಗಿ ಪ್ರಾರ್ಥಿಸುವ ಸಂಪ್ರದಾಯವಾಗಿದೆ. ಈ ಬಾರಿ ಕೂಡ ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ಗ್ರಾಮಸ್ಥರು ಒಗ್ಗಟ್ಟಿನಿಂದ ಈ ಕಾರ್ಯಕ್ರಮವನ್ನು ನಡೆಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಹಿರಿಯ ಶಿವುಪುತ್ರ ವಡಗಾಂವ, ರಾಜೇಂದ್ರ ವಾಡೆ, ಮಹಾಂತಯ್ಯ ಸ್ವಾಮಿ, ಶಿವಯ್ಯಾ ಸ್ವಾಮಿ, ಕುಪ್ಪಣ್ಣಾ ವಡಗಾಂವ, ಶ್ರೀಕಾಂತ ಸಫಳೆ, ರಾಜೇಂದ್ರ ಬಿ. ವಡಗಾಂವ, ಗುರುಪಾದಯ್ಯಾ ಸ್ವಾಮಿ, ಕರಬಸಯ್ಯಾ ಸ್ವಾಮಿ, ಚಂದುರಾವ್ ಕಂಟೇಕೂರೆ, ಕಲ್ಯಾಣಿ ಐಹೊಳೆ ಸೇರಿದಂತೆ ಗ್ರಾಮದ ಮಹಿಳೆಯರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

Leave A Reply

Your email address will not be published.