ಆಳಂದ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕೈಗೊಂಡಿರುವ ರೈತರು ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ತಿಪ್ಪೆಸ್ವಾಮಿ .ವಿ ತಿಳಿಸಿದ್ದಾರೆ.
ಮಳೆ ಅಭಾವ, ಹೆಚ್ಚಿನ ಮಳೆ, ಬರ, ಪ್ರವಾಹ, ಭೂಕುಸಿತ, ಬೆಳೆ ಮುಳುಗಡೆ ಸೇರಿ ಇತರೆ ಪ್ರಾಕೃತಿಕ ವಿಕೋಪಗಳಿಂದ ಬೆಳೆಗೆ ಹಾನಿಯಾದರೆ ರೈತರಿಗೆ ವಿಮಾ ಪರಿಹಾರ ದೊರೆಯಲಿದೆ.
ಮಳೆಯಾಶ್ರಿತ ಬೆಳೆಗಳಾದ ತೊಗರಿ ಮಳೆ ಆಶ್ರಿತ ಪ್ರತಿ ಎಕರೆಗೆ ೪೬೬ ರೂ., ಸೊಯಬೀನ್ ಮಳೆ ಆಶ್ರಿತ ೩೭೮, ಉದ್ದು ಪ್ರತಿ ಎಕರೆಗೆ ೩೧೪ ರೂ., ಹಾಗೂ ಹತ್ತಿ ಪ್ರತಿ ಎಕರೆಗೆ ೧೨೦೮ ರೂ. ಪಾವತಿಸಬೇಕು. ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಜುಲೈ ೩೧ ಕೊನೆಯ ದಿನವಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸಿಕೊಂಡು ನಷ್ಟದ ಸಂದರ್ಭದಲ್ಲಿ ರಕ್ಷಣೆ ಪಡೆಯುವಂತೆ ತಿಳಿಸಿದ್ದಾರೆ.
ನೋಂದಣಿಗಾಗಿ ತಮ್ಮ ಹತ್ತಿರದ ಬ್ಯಾಂಕ್ಗಳು, ನಾಗರಿಕ ಸೇವಾ ಕೇಂದ್ರ, ಗ್ರಾಮ ಒನ್ ಸೇವಾ ಕೇಂದ್ರ, ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಂಪರ್ಕಿಸಬಹುದು ಹಾಗೂ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಲು ಕೋರಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.