ಆಳಂದ: ನರೋಣಾ ನರೋಣಾ ಗ್ರಾಮದ ಭೀಮ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಂಸ್ಥೆಯ ಖಜಾಂಚಿ ಶಿಲ್ಪಾ ಶಿರೂರಕರ್ ಸಮವಸ್ತç ವಿತರಿಸಿದರು.
ಆಳಂದ: ತಾಲೂಕಿನ ನರೋಣಾ ಗ್ರಾಮದ ಭೀಮ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧ರಿಂದ ೭ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಎರಡು ಜೋಡಿ ಸಮವಸ್ತ್ರ ಹಾಗೂ ಟಿ-ಶರ್ಟ್ಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.
ಶಾಲೆಯ ಆಡಳಿತ ಸಂಸ್ಥೆಯ ಖಜಾಂಚಿ ಶಿಲ್ಪಾ ಪ್ರಭು ಶಿರೂರಕರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ನಾಗಪ್ಪ ದೇವಂತಗಿ, ಶಿಕ್ಷಕ ವೃಂದ, ಅಡುಗೆ ಸಹಾಯಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಟಿ-ಶರ್ಟ್ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ನಾಗಪ್ಪ ದೇವಂತಗಿ, “ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುವುದು ಕೇವಲ ಉಡುಪು ನೀಡುವ ಕಾರ್ಯಕ್ರಮವಲ್ಲ; ಶಿಕ್ಷಣದ ಬಗ್ಗೆ ಸಮಾನತೆ ಮತ್ತು ಆತ್ಮವಿಶ್ವಾಸ ಬೆಳೆಸುವ ಮಹತ್ವದ ಹೆಜ್ಜೆಯಾಗಿದೆ. ಎಲ್ಲ ವಿದ್ಯಾರ್ಥಿಗಳು ಒಂದೇ ರೀತಿಯ ಸಮವಸ್ತ್ರ ಧರಿಸುವುದರಿಂದ ಸಮಾನತೆಯ ಭಾವನೆ ಮೂಡುತ್ತದೆ. ವಿದ್ಯಾರ್ಥಿಗಳು ಈ ಸೌಲಭ್ಯದ ಸದ್ಬಳಕೆ ಮಾಡಿಕೊಂಡು ಶಿಸ್ತು, ಸ್ವಚ್ಛತೆ ಮತ್ತು ಗುಣಮಟ್ಟದ ಶಿಕ್ಷಣದ ಕಡೆ ಹೆಚ್ಚಿನ ಗಮನಹರಿಸಿ ಉತ್ತಮ ನಾಗರಿಕರಾಗಿ ಬೆಳೆಯಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೋಷಕರ ಸಹಕಾರವೂ ಅತ್ಯಂತ ಅಗತ್ಯವಾಗಿದೆ,” ಎಂದು ಹೇಳಿದರು.
ಖಜಾಂಚಿ ಶಿಲ್ಪಾ ಪ್ರಭು ಶಿರೂರಕರ್ ಅವರು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಆಡಳಿತ ಮಂಡಳಿ ಸದಾ ಬದ್ಧವಾಗಿದ್ದು, ಮುಂದೆಯೂ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಸಿಬ್ಬಂದಿ, ಅಡುಗೆ ಸಹಾಯಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.