“ನಾಲ್ಕು ಬಾರಿ ಶಾಸಕನಾದರೂ ಅಭಿವೃದ್ಧಿ ಶೂನ್ಯ; ಸಚಿವ ಸ್ಥಾನ ಕೇಳುವ ನೈತಿಕತೆ ಎಲ್ಲಿದೆ?”
ಶಾಸಕ ಬಿ.ಆರ್. ಪಾಟೀಲ್ ವಿರುದ್ಧ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ತೀವ್ರ ವಾಗ್ದಾಳಿ; ನೀರು, ರಸ್ತೆ, ಶೌಚಾಲಯ, ಭ್ರಷ್ಟಾಚಾರ ಸೇರಿ ಹಲವು ವಿಚಾರಗಳಲ್ಲಿ ಆರೋಪ
ಆಳಂದ: ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಮಾತನಾಡಿದರು.
ಆಳಂದ: ಮೂರು ಬಾರಿ ಶಾಸಕರಾಗಿ, ಈಗ ನಾಲ್ಕನೇ ಬಾರಿ ಶಾಸಕರಾಗಿರುವ ಬಿ.ಆರ್. ಪಾಟೀಲ್ ಅವರು ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಮಹತ್ವದ ಕೊಡುಗೆ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಸಾರ್ವಜನಿಕರ ಹಿತಾಸಕ್ತಿಯಿಂದಲ್ಲ, ಕೆಲವೇ ಹಿಂಬಾಲಕರು ಹಾಗೂ ಲಾಭ ಪಡೆಯುವ ಗುತ್ತಿಗೆದಾರರ ಸ್ವಾರ್ಥಕ್ಕಾಗಿ ಮಾತ್ರ ನಡೆಯುತ್ತಿದೆ ಎಂದು ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ತೀವ್ರ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರ ಮೂಲಭೂತ ಸಮಸ್ಯೆಗಳು ಬಗೆಹರಿಯದೆ ಉಳಿದಿರುವಾಗ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಮುಂದೆ ಮನವಿ ಮಾಡುವುದು ಹಾಸ್ಯಾಸ್ಪದ ಬೆಳವಣಿಗೆಯಾಗಿದೆ. ಬೆಂಬಲಿಗರು ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸ ಹಾಗೂ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎಂದು ಟೀಕಿಸಿದರು.
ಶಾಸಕರು ಚುನಾವಣೆಯಲ್ಲಿ ಗೆಲ್ಲಲು ದುಡಿದ ಹಿರಿಯ ಕಾರ್ಯಕರ್ತರನ್ನೇ ಸಂಪೂರ್ಣವಾಗಿ ಮರೆತಿದ್ದಾರೆ. ಕೆಲಸಕ್ಕಾಗಿ ಮನೆಗೆ ಹೋದರೆ ಚಿಕ್ಕಪ್ಪನ ಬಳಿ ಹೋಗಿ, ಮಗನ ಬಳಿ ಹೋಗಿ ಎಂದು ಒಬ್ಬರ ಮೇಲೆ ಮತ್ತೊಬ್ಬರ ಹೊಣೆ ಹಾಕಲಾಗುತ್ತಿದೆ. ಸಾಮಾನ್ಯ ಕಾರ್ಯಕರ್ತರಿಗೆ ಗೌರವವಿಲ್ಲದ ವಾತಾವರಣ ನಿರ್ಮಾಣವಾಗಿದ್ದು, ಕೆಲವರಿಗೆ ಮಾತ್ರ ಅವಕಾಶಗಳು ಸಿಗುತ್ತಿವೆ ಎಂದು ಅವರು ದೂರಿದರು. ಜನಪ್ರತಿನಿಧಿ ಜನರ ಸಮಸ್ಯೆ ಆಲಿಸುವ ಬದಲು ಕುಟುಂಬದವರ ಮೂಲಕ ಆಡಳಿತ ನಡೆಸುತ್ತಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಚುನಾವಣೆಗೂ ಮುನ್ನ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈಗ ಪಟ್ಟಣದಲ್ಲಿ ಹತ್ತು ದಿನಕ್ಕೊಮ್ಮೆ ಮಾತ್ರ ನೀರು ಬರುತ್ತಿದ್ದು, ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು.
ಚುನಾವಣೆಯಲ್ಲಿ ಮತ ನೀಡಿದ ಅನೇಕ ಹಿರಿಯ ಕಾರ್ಯಕರ್ತರನ್ನೇ ಮರೆತಿರುವ ಶಾಸಕರು, ಯಾವುದೇ ಕೆಲಸಕ್ಕೆ ಮನೆಗೆ ಬಂದರೆ ಚಿಕ್ಕಪ್ಪನ ಮೇಲೆ ಮಗನ, ಮಗನ ಮೇಲೆ ಚಿಕ್ಕಪ್ಪ ( ಸಹೋದರ ಪುತ್ರ ಆರ್.ಕೆ.ಪಾಟೀಲ್) ಹೊಣೆ ಹಾಕುತ್ತಿದ್ದಾರೆ ಎಂದು ಮಹೇಶ್ವರಿ ವಾಲಿ ದೂರಿದರು. ಅನೇಕ ಕಾರ್ಯಕರ್ತರನ್ನು ನಾಯಿಗಿಂತ ಕಡೆಯಾಗಿ ನೋಡಲಾಗುತ್ತಿದೆ, ಸಾಮಾನ್ಯ ಜನರಿಗೆ ಯಾವುದೇ ಲಾಭವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸಲಾಗಿದ್ದು, ಪ್ರಮುಖ ರಸ್ತೆಗಳು ಕೆಸರು, ಧೂಳು ಹಾಗೂ ಕೊಳಚೆಯಿಂದ ಕೂಡಿವೆ. ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡ ಪರಿಣಾಮ ಸಾರ್ವಜನಿಕರು ಹಾಗೂ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಮಾಸ್ಟರ್ ಪ್ಲಾನ್ ಕೂಡ ಪೂರ್ಣಗೊಳ್ಳದೆ ಸ್ಥಗಿತಗೊಂಡಿದ್ದು, ಜನರ ಆರೋಗ್ಯ ಹಾಗೂ ನಗರಾಭಿವೃದ್ಧಿಯ ಬಗ್ಗೆ ಶಾಸಕರಿಗೆ ಯಾವುದೇ ಕಾಳಜಿ ಇಲ್ಲ. ಕ್ಷೇತ್ರದ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.
ಹಿಂದೆ ಮಹಿಳಾ ಶೌಚಾಲಯ ಹಾಗೂ ಸರಾಯಿ ಮುಕ್ತ ಕ್ಷೇತ್ರದ ಕುರಿತು ದೊಡ್ಡ ಮಟ್ಟದಲ್ಲಿ ಮಾತನಾಡುತ್ತಿದ್ದವರು, ಇಂದು ಮಹಿಳೆಯರಿಗೆ ಮೂಲಭೂತ ಶೌಚಾಲಯ ವ್ಯವಸ್ಥೆಯನ್ನೂ ಕಲ್ಪಿಸಲು ವಿಫಲರಾಗಿದ್ದಾರೆ. ಹಲವೆಡೆ ಮಹಿಳೆಯರು ಬಹಿರಂಗ ಸ್ಥಳಗಳಿಗೆ ತೆರಳುವ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮಹಿಳೆಯರ ಗೌರವ ಮತ್ತು ಸುರಕ್ಷತೆ ಕುರಿತು ಮಾತನಾಡುವವರು ಈ ಸಮಸ್ಯೆ ಕಡೆಗಣಿಸಿರುವುದು ವಿಷಾದನೀಯ ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ಹಾಗೂ ಅವ್ಯವಹಾರ ನಡೆಯುತ್ತಿರುವ ಕುರಿತು ವಿಡಿಯೊ ಸೇರಿದಂತೆ ಸಾಕ್ಷ್ಯಗಳನ್ನು ನೀಡಿದರೂ ಯಾವುದೇ ತನಿಖೆ ಅಥವಾ ಕ್ರಮ ಕೈಗೊಳ್ಳಲಾಗಿಲ್ಲ. ಭ್ರಷ್ಟಾಚಾರ ನಡೆಸುವವರಿಗೆ ರಾಜಕೀಯ ಬೆಂಬಲ ದೊರೆಯುತ್ತಿರುವ ಕಾರಣ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಶಾಸಕರಾಗಿದ್ದಾಗ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗದವರು ಸಚಿವರಾದರೆ ಏನು ಸಾಧಿಸುತ್ತಾರೆ ಎಂಬುದೇ ಜನರ ಪ್ರಶ್ನೆಯಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಉಪವಾಸ ಸತ್ಯಾಗ್ರಹ ಸೇರಿದಂತೆ ಹಂತ ಹಂತವಾಗಿ ತೀವ್ರ ಹೋರಾಟಗಳನ್ನು ಸಂಘಟಿಸಲಾಗುವುದು. ಈ ಹೋರಾಟಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಮಹೇಶ್ವರಿ ಎಸ್. ವಾಲಿ ತಿಳಿಸಿದರು.