Shubhashaya News

ಶಾಲಾ ಶಿಕ್ಷಣದ ಗುಣಮಟ್ಟಕ್ಕೆ ಒತ್ತು: ಆಳಂದ ಶಾಲೆಗಳಿಗೆ ಡಿಡಿಪಿಐ ಶಂಕರಮ್ಮ ಡವಳಗಿ ಭೇಟಿ

ಆಳಂದ: ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಡಿಡಿಪಿಐ ಶಂಕರಮ್ಮ ಡವಳಗಿ ಮಾತನಾಡಿದರು. ಕ್ಷೇತ್ರಶಿಕ್ಷಣಾಧಿಕಾರಿ ಜಗದೇವಿ, ಸಮನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ ಇತರರು ಇದ್ದರು.

ಆಳಂದ: ಶಿಕ್ಷಣ ಇಲಾಖೆಯ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ (ಆಡಳಿತ) ಶಂಕರಮ್ಮ ಡವಳಗಿ ಅವರು ಆಳಂದ ತಾಲೂಕಿನ ವಿವಿಧ ಶಾಲೆಗಳು ಹಾಗೂ ಶಿಕ್ಷಣ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ಪರಿಶೀಲಿಸಿದರು.
ತಾಲೂಕಿನ ಕಡಿಗಂಚಿ ಹಾಗೂ ಕೊಡಲಹಂಗರಗಾ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿದ ಅವರು, ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳು, ಮಕ್ಕಳ ಕಲಿಕಾ ಪ್ರಗತಿ ಹಾಗೂ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ೧ರಿಂದ ೫ನೇ ತರಗತಿವರೆಗೆ ಕಳೆದ ವರ್ಷದಿಂದ ಜಾರಿಯಲ್ಲಿರುವ ದ್ವಿಭಾಷಾ ಬೋಧನಾ ಪದ್ಧತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಶಿಕ್ಷಕರಿಗೆ ಸೂಚಿಸಿದರು. ಮಕ್ಕಳಲ್ಲಿ ಭಾಷಾ ಕೌಶಲ್ಯ ಮತ್ತು ಕಲಿಕಾ ಸಾಮರ್ಥ್ಯ ವೃದ್ಧಿಗೆ ಈ ಪದ್ಧತಿ ಸಹಕಾರಿಯಾಗಿದ್ದು, ಅದರ ಯಶಸ್ವಿ ಅನುಷ್ಠಾನಕ್ಕೆ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು.

ಬಳಿಕ ಆಳಂದ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಅವರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳೊAದಿಗೆ ಸಭೆ ನಡೆಸಿ ಇಲಾಖೆಯ ಆಡಳಿತ ಕಾರ್ಯಗಳನ್ನು ಇನ್ನಷ್ಟು ಚುರುಕುಗೊಳಿಸುವಂತೆ ಸೂಚಿಸಿದರು. ವಿವಿಧ ಕಡತಗಳನ್ನು ಪರಿಶೀಲಿಸಿದ ಅವರು, ಶೈಕ್ಷಣಿಕ ಅಂಕಿಅAಶಗಳು, ಶಾಲಾ ಕಟ್ಟಡಗಳ ಗುಣಮಟ್ಟ, ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆಯ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡರು.
ಮಧ್ಯಾಹ್ನದ ಬಿಸಿಯೂಟ ಯೋಜನೆ ಎಲ್ಲ ಅರ್ಹ ಮಕ್ಕಳಿಗೆ ನಿಯಮಾನುಸಾರ ತಲುಪುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ ಅವರು, ತಾಂತ್ರಿಕ ಅಡೆತಡೆಗಳು ಅಥವಾ ಆಡಳಿತಾತ್ಮಕ ಸಮಸ್ಯೆಗಳಿದ್ದಲ್ಲಿ ಸಂಬAಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ತ್ವರಿತವಾಗಿ ಪರಿಹರಿಸುವಂತೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಜಗದೇವಿ ಅವರಿಗೆ ನಿರ್ದೇಶನ ನೀಡಿದರು.
ಐದು ಪ್ರಮುಖ ಅಂಶಗಳ ಅನುಷ್ಠಾನಕ್ಕೆ ಒತ್ತು:
ಬಿಆರ್‌ಸಿ ಕೇಂದ್ರದಲ್ಲಿ ಬಿಆರ್‌ಪಿ, ಸಿಆರ್‌ಪಿ ಹಾಗೂ ಇಸಿಒ ಸಿಬ್ಬಂದಿಗಳ ಸಭೆ ನಡೆಸಿದ ಡಿಡಿಪಿಐ ಶಂಕರಮ್ಮ ಡವಳಗಿ ಅವರು ಇಲಾಖೆಯ ಐದು ಪ್ರಮುಖ ಆದ್ಯತಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ವಿಶೇಷ ಒತ್ತು ನೀಡಿದರು. ಎಸ್‌ಎಟಿಎಸ್ ಮತ್ತು ಯುಡೈಸ್ ಪ್ಲಸ್ ಮಾಹಿತಿಯ ನಿಖರ ನಿರ್ವಹಣೆ, ವಿದ್ಯಾರ್ಥಿಗಳ ಆಧಾರ್ ವ್ಯಾಲಿಡೇಶನ್ ಹಾಗೂ ಅಪಾರ್ ಐಡಿ ಸೃಜನೆ ಕಾರ್ಯಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.
ಈ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ತರಗತಿ ದಾಖಲಾತಿಯನ್ನು ಕನಿಷ್ಠ ಶೇ.೪೦ರಷ್ಟು ಹೆಚ್ಚಿಸುವ ಗುರಿ ಸಾಧಿಸಲು ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಜೊತೆಗೆ ಕರ್ತವ್ಯ ಆ್ಯಪ್‌ನಲ್ಲ್ಲಿ ಎಲ್ಲ ಸಿಬ್ಬಂದಿಗಳ ನೋಂದಣಿ ಹಾಗೂ ನಿರಂತರ ಆ್ಯಪ್‌ನಲ್ಲ್ಲಿ ಮಕ್ಕಳ ಹಾಜರಾತಿ ದಾಖಲಾತಿಯನ್ನು ಕಡ್ಡಾಯವಾಗಿ ನಿರ್ವಹಿಸುವಂತೆ ಸೂಚಿಸಿದರು. ಮಕ್ಕಳ ಮುಖಚಹರೆ ಆಧಾರಿತ ನೋಂದಣಿಯನ್ನೂ ಪೂರ್ಣಗೊಳಿಸಲು ಕ್ರಮವಹಿಸುವಂತೆ ನಿರ್ದೇಶನ ನೀಡಿದರು.
ಸಭೆsೆಯಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಗದೇವಿ, ಇಲಾಖೆಯ ವಿವಿಧ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕೆ ಎಲ್ಲಾ ಸಿಬ್ಬಂದಿಗಳು ಕೈಜೋಡಿಸಿ ತಾಲೂಕಿನ ಶೈಕ್ಷಣಿಕ ಸಾಧನೆಯನ್ನು ಮತ್ತಷ್ಟು ಉತ್ತಮಗೊಳಿಸಬೇಕು ಎಂದು ಕರೆ ನೀಡಿದರು.
ಸನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ ಅವರು ಇಲಾಖೆಯ ಪ್ರಗತಿ ಹಾಗೂ ಇದುವರೆಗೆ ನಡೆದ ವಿವಿಧ ತರಬೇತಿ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಇಸಿಒ ಪಂಕಜ ಪಾಟೀಲ ಹಾಗೂ ಪುಸ್ತಕ ನೋಡಲ್ ಅಧಿಕಾರಿ ಶ್ರೀಮಂತ ಪಾಟೀಲ ಅವರು ಪ್ರಸಕ್ತ ಸಾಲಿನ ಪಠ್ಯಪುಸ್ತಕ ವಿತರಣೆಯ ಮಾಹಿತಿ ನೀಡಿದರು.
ಸಭೆಯಲ್ಲಿ ಬಿಐಆರ್‌ಟಿ, ಸಿಆರ್‌ಪಿಗಳು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave A Reply

Your email address will not be published.