Shubhashaya News

ಬಿ ಆರ್ ಪಾಟೀಲ ಶಿಷ್ಠಾಚಾರ ತಾವು ಪಾಲಿಸಿ ಇನ್ನೊಬ್ಬರಿಗೆ ಬೋಧಿಸಲಿ-ಮುತ್ತಣ್ಣ ಬೀಳಗಿ

ಸಾರ್ವಜನಿಕ ಜೀವನದಲ್ಲಿ ಇರುವವರು ಶಿಷ್ಟಾಚಾರ, ಸಂಸ್ಕಾರ ಹಾಗೂ ಗೌರವಯುತ ನಡೆ-ನುಡಿಗಳನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ಶಾಸಕ ಬಿ ಆರ್ ಪಾಟೀಲ ಮೊದಲು ತಾವು ಪಾಲಿಸಿ ಇತರರಿಗೆ ಮಾದರಿಯಾಗಲಿ ಎಂದು ಭೂಸನೂರ ಗ್ರಾಮ ಪಂಚಾಯತ ಅಧ್ಯಕ್ಷ ಮುತ್ತಣ್ಣ ಬೀಳಗಿ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಶಾಸಕ ಬಿ ಆರ್ ಪಾಟೀಲ ಸಾರ್ವಜನಿಕ ವೇದಿಕೆಗಳಲ್ಲಿ ಬಳಸುತ್ತಿರುವ ಪದಪ್ರಯೋಗಗಳು ಹಾಗೂ ಹೇಳಿಕೆಗಳು ಸಮಾಜದಲ್ಲಿ ಅಸಮಾಧಾನ ಉಂಟುಮಾಡುತ್ತಿವೆ. ಶಾಸಕ ಬಿ ಆರ್ ಪಾಟೀಲ ಜಾತಿವಾದಿ ರಾಜಕಾರಣಿಯಾಗಿದ್ದು. ತಾವು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರುವುದರಿಂದ ಉದ್ದೇಶಪೂರ್ವಕವಾಗಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ತಮ್ಮ ಹೆಸರು ಕೈ ಬಿಟ್ಟಿದ್ದಾರೆ ಎಂದು ಆಪಾದಿಸಿದ್ದಾರೆ.

ಇತ್ತೀಚಿಗೆ ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಭೂಸನೂರ ಗ್ರಾಮದವರೆಗಿನ ಹಾಗೂ ಭೂಸನೂರ ಬಸವೇಶ್ವರ ಚೌಕದಿಂದ ಭೂಸನೂರ ತಾಂಡಾದವರೆಗಿನ ರಸ್ತೆ ಸುಧಾರಣೆ ಕಾಮಗಾರಿ ಶಂಕುಸ್ಥಾಪನೆಯಲ್ಲಿ ಶಿಷ್ಟಾಚಾರಕ್ಕಾಗಿಯಾದರೂ ಹೆಸರು ಹಾಕಿಲ್ಲ ಮತ್ತು ಕಾರ್ಯಕ್ರಮಕ್ಕೆ ಕರೆದಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಆಳಂದ ತಾಲೂಕಿನಲ್ಲಿ ಶಿಷ್ಟಾಚಾರ ಎನ್ನುವುದು ಕಳೆದು ಹೋಗಿದೆ. ತಾಲೂಕಿನಲ್ಲಿ ಸರ್ಕಾರದ ಪ್ರತಿಯೊಂದು ಕಾಮಗಾರಿಗಳನ್ನು ಜನರಿಂದ ನೇರವಾಗಿ ಚುನಾಯಿತರಲ್ಲದ ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ ಗುದ್ದಲಿ ಪೂಜೆ ಮಾಡಿದ್ದಾರೆ ಇದಕ್ಕೆ ಶಾಸಕರು ಮೊದಲು ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.

ಶಾಸಕ ಬಿ ಆರ್ ಪಾಟೀಲರ ಅಣ್ಣನ ಮಗ ಆರ್ ಕೆ ಪಾಟೀಲ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರಲ್ಲದಿದ್ದರೂ ಸರ್ಕಾರದ ಯೋಜನೆಯ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಅಧಿಕಾರಿಗಳು ಇಲ್ಲಿ ಶಿಷ್ಠಾಚಾರ ಪಾಲಿಸುತ್ತಿಲ್ಲ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಮೂಲಕ ವಿತರಣೆ ಮಾಡುವ ಬೀಜಗಳನ್ನು ಮತ್ತು ಸ್ಪಿçಂಕ್ಲರ್ ಪೈಪುಗಳನ್ನು ವಿತರಿಸಿದ್ದಾರೆ ಇದರ ಬಗ್ಗೆ ಈ ಹಿಂದೆಯೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

ಬಿ.ಆರ್. ಪಾಟೀಲ ಅವರು ಇತರರಿಗೆ ಶಿಷ್ಠಾಚಾರದ ಬಗ್ಗೆ ಬೋಧನೆ ಮಾಡುವ ಮೊದಲು ತಾವು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾರ್ವಜನಿಕ ಪ್ರತಿನಿಧಿಗಳು ವೈಯಕ್ತಿಕ ಟೀಕೆಗಳನ್ನು ಬಿಟ್ಟು ಜನಪರ ಕೆಲಸಗಳು, ಅಭಿವೃದ್ಧಿ ಕಾರ್ಯಗಳು ಹಾಗೂ ಸಮಾಜದ ಒಗ್ಗಟ್ಟಿನ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮತಕ್ಷೇತ್ರದ ಶಾಂತಿ, ಸೌಹಾರ್ದತೆ ಮತ್ತು ಅಭಿವೃದ್ಧಿಯೇ ನಮ್ಮ ಮುಖ್ಯ ಉದ್ದೇಶ. ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ತಪ್ಪಿಸಿ ಪರಸ್ಪರ ಗೌರವದಿಂದ ನಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಇರುವ ನಾಯಕರು ಮಾತು ಮತ್ತು ಕೃತಿಗಳಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿ.ಆರ್. ಪಾಟೀಲ ಅವರ ಹೇಳಿಕೆಗಳು ಹಾಗೂ ಅವರ ನಡೆ-ನುಡಿಗಳ ನಡುವೆ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತಿರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಸಾರ್ವಜನಿಕ ವೇದಿಕೆಗಳಲ್ಲಿ ಮೌಲ್ಯಗಳು, ಶಿಷ್ಠಾಚಾರ ಮತ್ತು ಜನಪರ ಆಡಳಿತದ ಬಗ್ಗೆ ಮಾತನಾಡುವವರು ಮೊದಲು ತಮ್ಮ ಕಾರ್ಯಗಳಲ್ಲಿ ಅದನ್ನು ತೋರಿಸಬೇಕು. ಕೇವಲ ಭಾಷಣಗಳಲ್ಲಿ ಮಾತ್ರ ಆದರ್ಶಗಳನ್ನು ಹೇಳಿ, ಕಾರ್ಯಪ್ರವೃತ್ತಿಯಲ್ಲಿ ಬೇರೆ ರೀತಿಯಲ್ಲಿ ನಡೆದುಕೊಳ್ಳುವುದು ಜನರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜನಪ್ರತಿನಿಧಿಗಳು ವೈಯಕ್ತಿಕ ಟೀಕೆ, ರಾಜಕೀಯ ಪ್ರಚೋದನೆಗಳಿಗಿಂತ ಅಭಿವೃದ್ಧಿ, ಜನರ ಸಮಸ್ಯೆಗಳ ಪರಿಹಾರ ಮತ್ತು ಸಮಾಜದ ಸೌಹಾರ್ದತೆಗೆ ಆದ್ಯತೆ ನೀಡಬೇಕು. ಮಾತಿಗಿಂತ ಕೃತಿ ಮುಖ್ಯ ಎಂಬುದನ್ನು ಪ್ರತಿಯೊಬ್ಬ ನಾಯಕರು ಮನಗಾಣಬೇಕು. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ, ಜವಾಬ್ದಾರಿ ಹಾಗೂ ಶಿಸ್ತು ಉಳಿಯಬೇಕಾದರೆ ಎಲ್ಲರೂ ತಮ್ಮ ನಡೆ-ನುಡಿಯಲ್ಲಿ ಪ್ರಾಮಾಣಿಕತೆ ತೋರಬೇಕಾಗಿದೆ ಎಂದು ಹೇಳಿದ್ದಾರೆ.

 

Leave A Reply

Your email address will not be published.