ಆಳಂದ: ನಿಂಬರಗಾ ಸಣ್ಣ ನೀರಾವರಿ ಇಲಾಖೆ ಕೆರೆ ಕಾಮಗಾರಿ ಐದು ವರ್ಷದಿಂದ ನಡೆಯದೆ ಅರ್ಧಕ್ಕೆ ನಿಂತುಕೊಂಡಿದೆ.

ಆಳಂದ: ನಿಂಬರಗಾ ಕೆರೆಯ ಕಾಲುವೆ ಮುಂದುವರೆದ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಕಳಪೆ ನಿರ್ಮಾಣ ಆರೋಪಕ್ಕೆ ರೈತರ ಆಕ್ರೋಶ; ನೀರಿಗಾಗಿ ಪರದಾಡುತ್ತಿರುವ ಕೃಷಿಕರು
ಆಳಂದ: ರೈತರ ಹೊಲಗಳಿಗೆ ನೀರು ಒದಗಿಸಿ ಕೃಷಿಗೆ ಜೀವನಾಡಿಯಾಗಬೇಕಿದ್ದ ನಿಂಬರಗಾ ಗ್ರಾಮದ ತಾಂಡಾ ಸಮೀಪ ನಿರ್ಮಾಣಗೊಳ್ಳುತ್ತಿರುವ ಸಣ್ಣ ನೀರಾವರಿ ಇಲಾಖೆಯ ಕೆರೆ ಕಾಮಗಾರಿ ಐದು ವರ್ಷ ಕಳೆದರೂ ಅಪೂರ್ಣವಾಗಿಯೇ ಉಳಿದಿರುವುದು ಸ್ಥಳೀಯ ರೈತರು ಮತ್ತು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಆರಂಭಗೊಂಡ ಯೋಜನೆ ಅರ್ಧದಲ್ಲೇ ನಿಂತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಣ್ಣ ನೀರಾವರಿ ಇಲಾಖೆಯು ಸುಮಾರು 2.54 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 2021ರ ಸೆಪ್ಟೆಂಬರ್ ತಿಂಗಳಲ್ಲಿ ಕೆರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿತ್ತು. ಮೂಲತಃ ಒಳವಂಡವಾಡಿ ಗ್ರಾಮದ ಕೆರೆ ಕಾಮಗಾರಿಗೆ ಮಂಜೂರಾಗಿದ್ದ ಅನುದಾನವನ್ನು ತಾಂತ್ರಿಕ ಕಾರಣಗಳಿಂದ “ಚೇಂಜ್ ಆಫ್ ವರ್ಕ್” ಮೂಲಕ ನಿಂಬರಗಾ ಕೆರೆಗೆ ವರ್ಗಾಯಿಸಿ ಕಾಮಗಾರಿ ಆರಂಭಿಸಲಾಗಿತ್ತು. ಆರಂಭದಲ್ಲಿ ವೇಗವಾಗಿ ನಡೆದ ಕಾಮಗಾರಿ ಬಳಿಕ ನಿಧಾನಗೊಂಡು, ಈಗ ಸಂಪೂರ್ಣ ಸ್ಥಗಿತಗೊಂಡಂತಾಗಿದೆ.
ಸುಮಾರು 79 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಕೆರೆ ಕಾಮಗಾರಿಯು ಶೇ.50ರಷ್ಟು ಕೂಡ ಪೂರ್ಣಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಿರ್ಮಾಣಗೊಂಡಿರುವ ಭಾಗದಲ್ಲಿಯೇ ಕಳಪೆ ಕಾಮಗಾರಿ ನಡೆದಿರುವುದು ಸ್ಪಷ್ಟವಾಗುತ್ತಿದೆ ಎಂದು ರೈತರು ದೂರಿದ್ದಾರೆ. ಕೆರೆಯ ಎಡ ಹಾಗೂ ಬಲ ದಂಡೆ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಕೆಲವೆಡೆ ಗೋಡೆಗಳು ಉದುರಿ ಬೀಳುತ್ತಿರುವ ದೃಶ್ಯ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಕಾಲುವೆ ಕಾಮಗಾರಿ ಪೂರ್ಣವಾಗದೇ ಇರುವುದರಿಂದ ಯೋಜನೆಯ ಉದ್ದೇಶವೇ ವಿಫಲವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೆರೆ ನಿರ್ಮಾಣ ಪೂರ್ಣಗೊಂಡರೆ ಅಂತರ್ಜಲ ಮಟ್ಟ ಹೆಚ್ಚಾಗಿ ಸುತ್ತಮುತ್ತಲಿನ ರೈತರಿಗೆ ಕೃಷಿಗೆ ಅಗತ್ಯವಾದ ನೀರು ದೊರೆಯಲಿದೆ ಎಂಬ ನಿರೀಕ್ಷೆ ರೈತರಲ್ಲಿತ್ತು. ಆದರೆ ಕಾಮಗಾರಿ ವಿಳಂಬದಿಂದ ರೈತರು ನೀರಿನ ತೀವ್ರ ಅಭಾವ ಎದುರಿಸುತ್ತಿದ್ದಾರೆ. ಬಾವಿ ಹಾಗೂ ಬೋರ್‍ವೆಲ್‍ಗಳು ಒಣಗಿ ಹೋಗಿರುವ ಪರಿಣಾಮ ಬೆಳೆ ಉತ್ಪಾದನೆ ಕುಸಿದಿದ್ದು, ಅನೇಕ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆರೆ ನಿರ್ಮಾಣವಾದರೆ ವಾಣಿಜ್ಯ ಬೆಳೆ ಬೆಳೆಯಲು ಅನುಕೂಲವಾಗುವುದರ ಜೊತೆಗೆ ಹೈನುಗಾರಿಕೆಗೆ ಸಹ ಉತ್ತೇಜನ ಸಿಗಲಿದೆ ಎಂಬ ಆಶಾಭಾವನೆ ಈಗ ಕುಸಿಯತೊಡಗಿದೆ.
ತಕ್ಷಣ ಕಾಮಗಾರಿ ಆರಂಭಕ್ಕೆ ಒತ್ತಾಯ:
“ಉನ್ನತ ಅಧಿಕಾರಿಗಳು ತಕ್ಷಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಮಗಾರಿಗೆ ವೇಗ ನೀಡಿ ಶೀಘ್ರ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ರೈತರು ಮತ್ತು ಸಾರ್ವಜನಿಕರೊಂದಿಗೆ ಹೋರಾಟ ಕೈಗೊಳ್ಳಲಾಗುವುದು” ಎಂದು ಕರವೇ ನಿಂಬರಗಾ ಶಾಖೆಯ ಅಧ್ಯಕ್ಷ ಬಸವರಾಜ ಯಳಸಂಗಿ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳ ಸ್ಪಷ್ಟನೆ:
ಈ ಕುರಿತು ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆಯ ಎಇಇ ಶಾಂತಪ್ಪ ಜಾಧವ ಅವರು, “ಒಳವಂಡವಾಡಿ ಗ್ರಾಮದ ಕೆರೆ ಕಾಮಗಾರಿಗೆ ಮಂಜೂರಾಗಿದ್ದ ಸುಮಾರು 2.5 ಕೋಟಿ ರೂಪಾಯಿ ಅನುದಾನವನ್ನು ‘ಚೇಂಜ್ ಆಫ್ ವರ್ಕ್’ ಮೂಲಕ ನಿಂಬರಗಾ ಕೆರೆಗೆ ವರ್ಗಾಯಿಸಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಒಳವಂಡವಾಡಿ ಕೆರೆ ವ್ಯಾಪ್ತಿಯ ರೈತರು ಪಿಐಎಲ್ ಸಲ್ಲಿಸಿರುವ ಹಿನ್ನೆಲೆ ಅನುದಾನ ಹೋಲ್ಡ್ ಆಗಿದೆ. ತಾಂತ್ರಿಕ ತೊಂದರೆಯಿಂದ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದೆ” ಎಂದು ತಿಳಿಸಿದ್ದಾರೆ.
Comments are closed.