Shubhashaya News

ಮೇ.20ರಿಂದ ರಾಜ್ಯಾಧ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಫಿಕ್ಸ್, ಸಾಧನಾ ಸಮಾವೇಶಕ್ಕೂ ಕಪ್ಪು ಪಟ್ಟಿ ಬಿಸಿ!

ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ವೇತನ ಹೆಚ್ಚಳದ ಬಿಕ್ಕಟ್ಟು ಮತ್ತಷ್ಟು ತಾರಕಕ್ಕೇರಿದೆ. ಸರ್ಕಾರದ ಸಂಧಾನ ಸೂತ್ರಗಳಿಗೆ ಬಗ್ಗದ ಸಾರಿಗೆ ನೌಕರರ ಒಕ್ಕೂಟಗಳು ಮೇ 20 ರಿಂದ ಅನಿರ್ದಿಷ್ಟಾವಧಿ ಬಸ್ ಮುಷ್ಕರಕ್ಕೆ ಅಧಿಕೃತವಾಗಿ ಸಜ್ಜಾಗಿವೆ. ಇದರ ನಡುವೆ, ಮೇ 19 ರಂದು ತುಮಕೂರಿನಲ್ಲಿ ನಡೆಯಲಿರುವ ಸರ್ಕಾರದ ಮೂರು ವರ್ಷಗಳ ‘ಸಾಧನಾ ಸಮಾವೇಶ’ಕ್ಕೂ ಕಪ್ಪು ಬಟ್ಟೆ ಪ್ರದರ್ಶಿಸುವ ಮೂಲಕ ಹೋರಾಟದ ಬಿಸಿ ಮುಟ್ಟಿಸಲು ನೌಕರರು ನಿರ್ಧರಿಸಿದ್ದು, ಸರ್ಕಾರಕ್ಕೆ ಭಾರಿ ತಲೆನೋವಾಗಿ ಪರಿಣಮಿಸಿದೆ.

12.5% ವೇತನ ಏರಿಕೆ ಆದೇಶ ತಿರಸ್ಕರಿಸಿದ ನೌಕರರು

ವೇತನ ಪರಿಷ್ಕರಣೆಗಾಗಿ ಕಳೆದ ಹಲವು ದಿನಗಳಿಂದ ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ. ನೌಕರರನ್ನು ಸಮಾಧಾನಪಡಿಸಲು ಸರ್ಕಾರವು ಆರಂಭದಲ್ಲಿ 7% ವೇತನ ಹೆಚ್ಚಳದ ಪ್ರಸ್ತಾಪ ಇಟ್ಟಿತ್ತು. ಅದಕ್ಕೆ ನೌಕರರು ಒಪ್ಪದಿದ್ದಾಗ ಸಾರಿಗೆ ಸಚಿವರು ನಡೆಸಿದ ಸಂಧಾನ ಸಭೆಯೂ ವಿಫಲವಾಗಿತ್ತು. ಅಂತಿಮವಾಗಿ ಮುಖ್ಯಮಂತ್ರಿಗಳ ಅಂಗಳ ತಲುಪಿದ ಈ ಬಿಕ್ಕಟ್ಟಿಗೆ ಪರಿಹಾರವಾಗಿ, 2025ರ ಮಾರ್ಚ್‌ನಿಂದ ಅನ್ವಯವಾಗುವಂತೆ 12.5% ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, “ನಮಗೆ 2024ರ ಜನವರಿಯಿಂದಲೇ ಅನ್ವಯವಾಗುವಂತೆ 25% ವೇತನ ಹೆಚ್ಚಳ ಮಾಡಲೇಬೇಕು” ಎಂದು ಪಟ್ಟು ಹಿಡಿದಿರುವ ನೌಕರರ ಸಂಘಟನೆಗಳು ಸರ್ಕಾರದ ಹೊಸ ಆದೇಶವನ್ನು ಕಡಾಖಂಡಿತವಾಗಿ ತಿರಸ್ಕರಿಸಿವೆ.

ಮೇ 19 ರ ಸಾಧನಾ ಸಮಾವೇಶದಲ್ಲಿ ಪ್ರತಿಭಟನೆ

ಮುಷ್ಕರಕ್ಕೂ ಮುನ್ನವೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾರಿಗೆ ಸಂಘಟನೆಗಳು ತಂತ್ರ ರೂಪಿಸಿವೆ. ಮೇ 19 ರಂದು ತುಮಕೂರಿನಲ್ಲಿ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶ ಆಯೋಜನೆಗೊಂಡಿದ್ದು, ಅದೇ ದಿನ ತುಮಕೂರಿನ ಟೌನ್‌ಹಾಲ್ ಬಳಿ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ನೂರಾರು ಚಾಲಕರು ಮತ್ತು ನಿರ್ವಾಹಕರು ನಿರ್ಧರಿಸಿದ್ದಾರೆ.

ಮೇ 19 ರ ರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತ?

ಮೇ 20 ರಿಂದ ಅಧಿಕೃತವಾಗಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಲಿದ್ದರೂ, ಮೇ 19 ರ ರಾತ್ರಿಯಿಂದಲೇ ರಾಜ್ಯಾದ್ಯಂತ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ನೌಕರರು ಮುಂದಾಗಿದ್ದಾರೆ. ಇದರಿಂದಾಗಿ ಮೇ 19 ರ ರಾತ್ರಿ ಮತ್ತು ಮೇ 20 ರ ಮುಂಜಾನೆಯಿಂದಲೇ ಸಾರ್ವಜನಿಕ ಪ್ರಯಾಣಿಕರಿಗೆ ಭಾರಿ ತೊಂದರೆಯಾಗುವ ಆತಂಕ ಎದುರಾಗಿದೆ.

‘ಎಸ್ಮಾ’ (ESMA) ಎಚ್ಚರಿಕೆಗೂ ಕ್ಯಾರೆ ಎನ್ನದ ಸಿಬ್ಬಂದಿ

ಸಾರ್ವಜನಿಕ ಸಾರಿಗೆಗೆ ಧಕ್ಕೆಯಾಗದಂತೆ ತಡೆಯಲು ಸರ್ಕಾರವು ಮುಷ್ಕರ ನಿರತ ನೌಕರರ ವಿರುದ್ಧ ‘ಎಸ್ಮಾ’ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಜಾರಿಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ, ಸರ್ಕಾರದ ಈ ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂದು ಸಾರಿಗೆ ಮುಖಂಡರು ಸ್ಪಷ್ಟಪಡಿಸಿದ್ದಾರೆ. “ಎಸ್ಮಾ ಜಾರಿಯಾದರೂ ಸರಿ, ನಮ್ಮ ನ್ಯಾಯಸಮ್ಮತ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದು ನೌಕರರು ಪಟ್ಟು ಹಿಡಿದಿರುವುದರಿಂದ ಸಾರಿಗೆ ಸಮರ ರೋಚಕ ಹಂತ ತಲುಪಿದೆ.

Comments are closed.

Don`t copy text!