Shubhashaya News

ಮಟಕಿ ಸರ್ಕಾರಿ ಪ್ರೌಢಶಾಲೆ ಭಾವಭರಿತ ಗುರುವಂದನೆ ಸಲ್ಲಿಕೆ

ಗುರುಗಳ ಋಣ ತೀರಿಸಿದ ಹಳೆಯ ವಿದ್ಯಾರ್ಥಿಗಳು

ಆಳಂದ: ಮಟಕಿ ಸರ್ಕಾರಿ ಪ್ರೌಢಶಾಲೆಯ ೨೦೦೮-೯ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಆಳಂದ: ಶಾಲೆಯ ಅಂಗಳದಲ್ಲಿ ಕಳೆದ ಬಾಲ್ಯದ ದಿನಗಳು, ಗುರುಗಳ ಬೆತ್ತದ ಮೊಟಕು, ಪ್ರೀತಿಯ ಪಾಠ, ಜೀವನ ರೂಪಿಸಿದ ಮಾತುಗಳು ಇವೆಲ್ಲವೂ ಒಂದೇ ದಿನ ತಾಲೂಕಿನ ಮಟಕಿ ಸರ್ಕಾರಿ ಪ್ರೌಢಶಾಲೆಯ ೨೦೦೮-೦೯ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಬಳಗದ ಆಶ್ರಯದಲ್ಲಿ ನ್ಯೂ ಝುರಿಚ್ ಕ್ಲಬ್ ರೇಸಾರ್ಟ್ ಬಳಿ ಆಯೋಜಿಸಿದ್ದ ಗುರುವಂದನಾ ಸಮಾರಂಭದಲ್ಲಿ ಮರುಕಳಿಸಿತು.
ಈ ಸುಮಾರು ಹದಿನಾರು ವರ್ಷಗಳ ಬಳಿಕ ಮತ್ತೆ ಒಂದೆಡೆ ಸೇರಿದ ಹಳೆಯ ಗೆಳೆಯರು, ಗೆಳತಿಯರು ಮತ್ತು ಗುರುಗಳ ನಡುವಿನ ಆ ಮಿಲನ ಸಂದರ್ಭ ಅಕ್ಷರಶಃ ಭಾವಪೂರ್ಣವಾ ಕಂಡುಕೊAಡಿದ್ದು ಜೀವನದ ವಿವಿಧ ಕ್ಷೇತ್ರಗಳಲ್ಲಿ ನೆಲೆಯೂರಿರುವ ಹಳೆಯ ವಿದ್ಯಾರ್ಥಿಗಳು ಈ ಶುಭ ಸಂದರ್ಭದಲ್ಲಿ ಒಂದೆಡೆ ಸೇರಿ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ ಘಟನೆ ಇನ್ನೊಬ್ಬರಿಗೆ ಪ್ರೇರಣೆ ನೀಡಿತು.
ಸಮಾರಂಭದಲ್ಲಿ ಶಾಲೆಯ ಮಾಜಿ ಶಿಕ್ಷಕರಾದ ಶ್ರೀಮಂತ ಜಿಡ್ಡೆ, ಅಸ್ಲಾಂಖಾನ್, ಅಬ್ದುಲ್ ಭಾಷಾ, ಕಾಳಪ್ಪ ಹಾಗೂ ಶ್ರೀಮತಿ ಸವಿತಾ ಅವರನ್ನು ಶಾಲು, ಹಾರ ಮತ್ತು ಸ್ಮರಣಿಕೆಗಳಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕರು, ತಾವು ಕಲಿಸಿದ ವಿದ್ಯಾರ್ಥಿಗಳು ಇಂದು ಬೆಳೆದು ನಿಂತು ತಮ್ಮನ್ನು ಸ್ಮರಿಸಿದ್ದಕ್ಕೆ ಆನಂದ ಮತ್ತು ಭಾವುಕತೆ ವ್ಯಕ್ತಪಡಿಸಿದರು. “ನಿಮ್ಮ ಯಶಸ್ಸೇ ನಮ್ಮ ಸಂತೋಷ, ನಿಮ್ಮ ಸ್ಮರಣೆಯೇ ನಮ್ಮ ಸಂಭಾವನೆ” ಎಂಬ ಮಾತುಗಳು ಇಡೀ ಸಭಾಂಗಣದಲ್ಲಿ ಮೌನದ ಮಡುವು ಸೃಷ್ಟಿಸಿದ ಘಳಿಗೆ ಎದ್ದುಕಂಡಿತು.
ಕಾರ್ಯಕ್ರಮದ ಮುಖ್ಯ ಆಕರ್ಷಣೆ ಎಂದರೆ ಹಳೆಯ ವಿದ್ಯಾರ್ಥಿಗಳ ಅನುಭವ ಹಂಚಿಕೆ ಗೋಷ್ಠಿ. ಇಂಜಿನಿಯರ್, ಕೃಷಿಕ, ಶಿಕ್ಷಕ, ವ್ಯಾಪಾರಿ, ಸರ್ಕಾರಿ ನೌಕರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿರುವ ಮಾಜಿ ವಿದ್ಯಾರ್ಥಿಗಳು ಶಾಲಾ ದಿನಗಳ ನೆನಪುಗಳನ್ನು ಭಾವಪೂರ್ಣವಾಗಿ ಖಂಡೇರಾವ್ ಶಿರೂರೆ, ರಾಜಕುಮಾರ ಚಿಂಚೋಳೆ, ಕಾಂಚನಾ ಬಿರಾದಾರ, ಸುನಿತಾ ಚಿಂಚೋಳೆ, ರವಿ ಹಿರೇಪೂರೆ ಹಾಗೂ ಅಂಬಿಕಾ ವಡಗಾಂವ ಅವರು ಶಾಲೆಯ ದಿನಗಳಲ್ಲಿ ಗುರುಗಳು ತೋರಿದ ಕಾಳಜಿ, ಶಿಸ್ತು ಮತ್ತು ಪ್ರೋತ್ಸಾಹ ಇಂದು ತಮ್ಮ ಜೀವನದಲ್ಲಿ ಎಷ್ಟು ಉಪಕಾರಕ್ಕೆ ಬಂದಿದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದರು. ಕೆಲವರ ಕಣ್ಣಲ್ಲಿ ನೀರು ತುಂಬಿ ಬಂದಾಗ ಸಭೆಯಲ್ಲಿ ಭಾವನೆಗಳ ಅಲೆ ಎದ್ದಿತು.
ಕಾರ್ಯಕ್ರಮ ಸಿದ್ಧರಾಮ ಹತ್ತರಕಿ ನಿರೂಪಿಸಿದರು. ಪಲ್ಲವಿ ಹಿರೇಮಠ ಸ್ವಾಗತಿಸಿದರು. ಲಕ್ಷ್ಮೀ ಬಿರಾದಾರ ವಂದಿಸಿದರು.
ಇದು ಕಾರ್ಯಕ್ರಮವಾಗಿ ಉಳಿಯದೆ, ಗುರು-ಶಿಷ್ಯರ ಪವಿತ್ರ ಬಾಂಧವ್ಯಕ್ಕೆ ಸಾಕ್ಷಿಯಾದ ಒಂದು ಐತಿಹಾಸಿಕ ಸ್ಮರಣೀಯ ಸಂದರ್ಭವಾಗಿ ಎಲ್ಲರ ಮನದಲ್ಲಿ ಉಳಿಯಿತು.

Comments are closed.

Don`t copy text!