Shubhashaya News

BIG NEWS : ರಾಜ್ಯದ ಡಿಪ್ಲೋಮಾ, ITI ವಿದ್ಯಾರ್ಥಿಗಳೂ `LLB’ ಪ್ರವೇಶ ಪಡೆಯಬಹುದು : ಹೈಕೋರ್ಟ್ ಮಹತ್ವದ ತೀರ್ಪು!

ಉನ್ನತ ಶಿಕ್ಷಣದ ಕನಸು ಕಾಣುತ್ತಿದ್ದ ಡಿಪ್ಲೊಮಾ, ಐಟಿಐ ಮತ್ತು ಜೆಓಸಿ (JOC) ವಿದ್ಯಾರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪೊಂದನ್ನು ನೀಡಿದೆ. ಇಷ್ಟು ದಿನ “ಪಿಯುಸಿ ಮಾಡಿಲ್ಲ” ಎಂಬ ಕಾರಣಕ್ಕೆ ಕಾನೂನು ಪದವಿ (LLB) ಪ್ರವೇಶದಿಂದ ವಂಚಿತರಾಗಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಈಗ ನ್ಯಾಯ ಸಿಕ್ಕಂತಾಗಿದೆ.

ಹೋರಾಟಕ್ಕೆ ಸಿಕ್ಕ ಜಯ

ಕಳೆದ 2023ರಿಂದ ಆರಂಭವಾದ ಸುದೀರ್ಘ ಕಾನೂನು ಹೋರಾಟಕ್ಕೆ ಈಗ ತಾರ್ಕಿಕ ಅಂತ್ಯ ಸಿಕ್ಕಿದೆ. ಐಟಿಐ ಮುಗಿಸಿ ನಂತರ ಪದವಿ ಪಡೆದಿದ್ದ ನರೇಂದ್ರ ಎಂಬ ವಿದ್ಯಾರ್ಥಿ ಸೇರಿದಂತೆ ಹಲವರು ಕಾನೂನು ಪದವಿ ಪಡೆಯಲು ಮುಂದಾದಾಗ, ಕಾಲೇಜು ಆಡಳಿತ ಮಂಡಳಿಗಳು “ಪಿಯುಸಿ ಮಾಡಿಲ್ಲ” ಎಂಬ ತಾಂತ್ರಿಕ ಕಾರಣವೊಡ್ಡಿ ಪ್ರವೇಶ ನಿರಾಕರಿಸಿದ್ದವು. ಕೆಲವರ ಅಡ್ಮಿಷನ್ ಕೂಡ ಕ್ಯಾನ್ಸಲ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.

ಹೈಕೋರ್ಟ್ ನೀಡಿದ ಪ್ರಮುಖ ತೀರ್ಪುಗಳು:

ಪಿಯುಸಿಗೆ ತತ್ಸಮಾನ: ಐಟಿಐ, ಡಿಪ್ಲೊಮಾ ಮತ್ತು ಜೆಓಸಿ ಕೋರ್ಸ್‌ಗಳನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಬೇಕು.

ಪ್ರವೇಶ ನಿರಾಕರಿಸುವಂತಿಲ್ಲ: ವಿದ್ಯಾರ್ಥಿಗಳು ಪಿಯುಸಿ ಮಾಡಿಲ್ಲ ಎಂಬ ಒಂದೇ ಕಾರಣಕ್ಕೆ ಎಲ್‌ಎಲ್‌ಬಿ (LLB) ಸೀಟು ನೀಡಲು ನಿರಾಕರಿಸುವಂತಿಲ್ಲ.

ತಾಂತ್ರಿಕ ಶಿಕ್ಷಣಕ್ಕೂ ಮಾನ್ಯತೆ: ಯಾವುದೇ ತಾಂತ್ರಿಕ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಕಾನೂನು ಪದವಿ ಪಡೆಯಲು ಅರ್ಹರು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಇದು ಕೇವಲ ನನ್ನೊಬ್ಬನ ಗೆಲುವಲ್ಲ, ನನ್ನಂತೆ ಕನಸು ಕಂಡಿದ್ದ ಸಾವಿರಾರು ವಿದ್ಯಾರ್ಥಿಗಳ ಗೆಲುವು. ಕಾನೂನು ಪದವಿ ಪಡೆಯಲಾಗದೆ ಎಷ್ಟೋ ಯುವಕರ ಕನಸುಗಳು ಅರ್ಧಕ್ಕೆ ನಿಂತಿದ್ದವು. ಇಂದು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಹೆಚ್ಚಾಗಿದೆ. ನಮ್ಮ ಹೋರಾಟಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ಅರ್ಜಿದಾರ ವಿದ್ಯಾರ್ಥಿ ನರೇಂದ್ರ ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ

ಮಾರ್ಚ್ 27, 2026ರಂದು ಹೊರಬಿದ್ದ ಈ ಮಹತ್ವದ ತೀರ್ಪಿನಿಂದಾಗಿ, ವಕೀಲರಾಗಬೇಕೆಂದು ಕನಸು ಹೊತ್ತಿದ್ದ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಈ ತೀರ್ಪಿನಿಂದಾಗಿ ಇನ್ಮುಂದೆ ರಾಜ್ಯದ ಯಾವುದೇ ಕಾನೂನು ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳು ಮುಕ್ತವಾಗಿ ಪ್ರವೇಶ ಪಡೆಯಲು ಹಾದಿ ಸುಗಮವಾಗಿದೆ.

Comments are closed.

Don`t copy text!