Shubhashaya News

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಪತನ : ಮಾಜಿ ಪ್ರಧಾನಿ HD ದೇವೇಗೌಡ ಭವಿಷ್ಯ

ಈ ಬಾರಿ ಲೋಕಸಭೆ ಚುನಾವಣೆಯ ನಂತರ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾಗಿರುವ ಎಚ್ ಡಿ ದೇವೇಗೌಡ ಅವರು ಭವಿಷ್ಯ ನುಡಿದರು.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದಲ್ಲಿ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಚುನಾವಣೆ ದೇಶದ ಚುನಾವಣೆಯಾಗಿದ್ದು ದೇಶದ ಅಳಿವು ಉಳಿವುಗಳ ಬಗ್ಗೆ ಮತ್ತು ಅಂತರಾಷ್ಟ್ರೀಯ ಬಗ್ಗೆ ಹಾಗೂ ದೇಶದ ಸುಭದ್ರತೆ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಆದರೆ, ಕಾಂಗ್ರೆಸ್ ಬರೀ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಇದರಿಂದ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂದರು.

ದೇಶದ ಪ್ರಧಾನಮಂತ್ರಿಯಾಗುವ ಯೋಗ್ಯತೆ ಐಎನ್‌ಡಿಐಎ ನಲ್ಲಿ ಯಾರಿಗೂ ಇಲ್ಲ ಎಂಬುದು ನನಗೆ ಗೊತ್ತಿರೋ ವಿಚಾರ. ಅದಕ್ಕಾಗಿ ಎಲ್ಲರ ಬಳಿಯೂ ಹೋಗಿ ಬರಿಗೈಲಿ ವಾಪಸ್ಸು ಬರುತ್ತಿದ್ದೆ. ಇಡೀ ದೇಶದಲ್ಲಿ ಸತ್ಯ ಹೇಳೋದಾದ್ರೆ ಕರ್ನಾಟಕ ಸೇರಿದಂತೆ 3 ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು ಉಳಿದೆಲ್ಲ ಕಡೆ ಚೆಲ್ಲಾಪಿಲ್ಲಿಯಾಗಿ ದಿನೇ ದಿನೇ ಕಾಂಗ್ರೆಸ್ ಕುಸಿಯುತ್ತಿದೆ. ಇದನ್ನ ಮೇಲೆತ್ತಲು ಯಾರಿಂದಲೂ ಸಾಧ್ಯವಿಲ್ಲ. ಈ ಲೋಕಸಭಾ ಚುನಾವಣೆ ಕಳೆದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದರು.

Comments are closed.

Don`t copy text!