ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿ ಶಿವಲಿಂಗ ಎನ್ನಲಾಗುತ್ತಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಮಾರ್ಚ್ 8 ರಂದು ಶಿವರಾತ್ರಿ ನಿಮಿತ್ತ ಪೂಜೆ ಸಲ್ಲಿಸಲು ಶರತ್ತು ಬದ್ಧ ಅನುಮತಿ ನೀಡಿ ಕಲಬುರಗಿ ಉಚ್ಚ ನ್ಯಾಯಾಲಯ ಪೀಠ ಆದೇಶ ಹೊರಡಿಸಿದೆ.
ದರ್ಗಾದ ಆವರಣದಲ್ಲಿ ಮಹಾಶಿವರಾತ್ರಿಯ ದಿನವಾದ ಶುಕ್ರವಾರದಂದು ಮಧ್ಯಾಹ್ನದ ನಂತರ ಪೂಜೆಗೆ 15ಜನ ಹಿಂದೂಗಳಿಗೆ ಅವಕಾಶ ಕೊಟ್ಟಿದೆ. ಪೂಜೆ ಸಲ್ಲಿಸುವ 15 ಜನರ ಪಟ್ಟಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಸೂಚಿಸಿದೆ. ಇಲ್ಲದಿದ್ದರೆ ಅನುಮತಿ ನೀಡಲಾಗುವುದಿಲ್ಲ ಎಂದು ಸೂಚಿಸಿದೆ.
ಕಳೆದ ಬಾರಿಯೂ ಸಹ ಇದೇ ರೀತಿಯಲ್ಲಿ ಉಚ್ಚ ನ್ಯಾಯಾಲಯವು ಅನುಮತಿ ಕೊಟ್ಟಿದ್ದು, ಆದಾಗ್ಯೂ, ಪೂಜೆಯ ನಂತರದಲ್ಲಿ ಹಿಂಸಾತ್ಮಕ ಘಟನೆಗಳು ಸಂಭವಿಸಿದ್ದವು. ಕೇಂದ್ರ ಸಚಿವ ಭಗವಂತ್ ಖೂಬಾ, ಶಾಸಕರಾಗಿದ್ದ ಬಸವರಾಜ್ ಮತ್ತಿಮೂಡ್, ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಾರುಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಬಾರಿ ಹಿಂದಿನ ಹಿಂಸಾತ್ಮಕ ಘಟನೆಗಳು ಸಂಭವಿಸದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕು ಎಂದು ನ್ಯಾಯಾಲಯವು ಜಿಲ್ಲಾಡಳಿತಕ್ಕೆ ಸೂಚಿಸಿದೆ.
Comments are closed.