ಆಳಂದ ಪಟ್ಟಣದಲ್ಲಿ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಪತ್ರಿಕಾಗೋಷ್ಟಿ ನಡೆಸಿದರು. ಶ್ರೀಶೈಲ ಪಾಟೀಲ, ಸೋಮಶೇಖರ ಹತ್ತರಕಿ, ಶ್ರೀಶೈಲ ಖಜೂರೆ, ಧೋಂಡಿಬಾ ಸಾಳುಂಕೆ, ಶಿವಪುತ್ರ ನಡಗೇರಿ, ಪ್ರಭಾಕರ ಘನಾತೆ ಉಪಸ್ಥಿತರಿದ್ದರು.
ಆಳಂದ ಪಟ್ಟಣದ ಪುರಸಭೆಯಲ್ಲಿ ಸಾಮಾನ್ಯ ಸಭೆ ಕರೆಯದೇ ಕೋಟ್ಯಾಂತರ ರೂ. ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಆರೋಪಿಸಿದ್ದಾರೆ.
ಮಂಗಳವಾರ ಆಳಂದ ಪಟ್ಟಣದ ಸ್ವಗೃಹದಲ್ಲಿ ಕರೆದ ಸುದ್ದಿಗೋಷ್ಟೀಯಲ್ಲಿ ಮಾತನಾಡಿದ ಅವರು, ಆಳಂದ ಪುರಸಭೆಯಲ್ಲಿ 2023-24ನೇ ಸಾಲಿನ 15ನೇ ಹಣಕಾಸು ಆಯೋಗದ 2.9 ಕೋ. ವೆಚ್ಚದ, ಎಸ್‍ಎಫ್‍ಸಿಯ 90 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಸಾಮಾನ್ಯ ಸಭೆ ಕರೆಯದೆ ಪುರಸಭೆಯ ಮುಖ್ಯಾಧಿಕಾರಿ ಆಡಳಿತಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಅನುಮೋದನೆ ಪಡೆದಿದ್ದಾರೆ ಎಂದು ದೂರಿದ್ದಾರೆ.
ಮೇ 2023ರಿಂದ ಇಲ್ಲಿಯವರೆಗೆ ಆಳಂದ ಪುರಸಭೆಯಲ್ಲಿ ಸಾಮಾನ್ಯ ಸಭೆ ಕರೆದಿಲ್ಲ ಅಲ್ಲದೇ ಸದಸ್ಯರಿಗೆ ಸಾಮಾನ್ಯ ಸಭೆಯ ನೋಟಿಸ್ ಸಹ ನೀಡಿರುವುದಿಲ್ಲ ಆದ್ದರಿಂದ ಈಗ ಅನುಮೋದನೆ ನೀಡಿರುವ ಕ್ರಿಯಾಯೋಜನೆ ತಡೆ ಹಿಡಿದು ಮತ್ತೊಮ್ಮೆ ಪುರಸಭೆಯ ಸದಸ್ಯರ ಸಾಮಾನ್ಯ ಸಭೆ ಕರೆದು ಪಟ್ಟಣದ ಎಲ್ಲ ವಾರ್ಡಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಿ ಕ್ರಿಯಯೋಜನೆ ತಯಾರಿಸಿ ಅನುಮೋದನೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಶಾಸಕ ಬಿ ಆರ್ ಪಾಟೀಲರ ಒತ್ತಡಕ್ಕೆ ಒಳಗಾಗಿ ಮುಖ್ಯಾಧಿಕಾರಿಗಳು ಆಯ್ದ ಕೆಲವು ಕಾಂಗ್ರೆಸ್ ಪಕ್ಷದ ಸದಸ್ಯರ ವಾರ್ಡಗಳಿಗೆ ಮಾತ್ರ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ ಇದರಿಂದ ಉಳಿದ ಸದಸ್ಯರಿಗೆ ತೊಂದರೆಯಾಗುತ್ತಿದೆ ಅಲ್ಲದೇ ಆಳಂದ ತಾಲೂಕಿನಲ್ಲಿ ಶಾಸಕ ಬಿ ಆರ್ ಪಾಟೀಲ ಹೆಸರಿಗಷ್ಟೆ ನಾಮಕವಾಸ್ತೆ ಶಾಸಕರಾಗಿದ್ದಾರೆ ಎಲ್ಲ ಕೆಲಸ ಕಾರ್ಯಗಳಲ್ಲಿ ಆರ್ ಕೆ ಪಾಟೀಲ ಹಸ್ತಕ್ಷೇಪ ಮಾಡುತ್ತಿದ್ದಾರೆ. ಆಳಂದನಲ್ಲಿ ಶಾಸಕರು ಕೇವಲ ಸಭೆ, ಸಮಾರಂಭಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ವಾರದೊಳಗಾಗಿ ಕ್ರಿಯಾಯೋಜನೆ ವಾಪಸ್ ಪಡೆದು, ಹೊಸದಾಗಿ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆಯಬೇಕು ಮತ್ತು ಸುಳ್ಳು ಮಾಹಿತಿ ನೀಡಿ ಹಿರಿಯ ಅಧಿಕಾರಿಗಳ ದಾರಿ ತಪ್ಪಿಸಿರುವ ಮುಖ್ಯಾಧಿಕಾರಿ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಇಲ್ಲದಿದ್ದರೇ ಫೆ. 12 ರಂದು ಸಹಾಯಕ ಆಯುಕ್ತರ ಕಚೇರಿಯ ಮುಂದೆ ಪುರಸಭೆ ಸದಸ್ಯರೊಂದಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಈಗಾಗಲೇ 11 ಜನ ಪುರಸಭೆ ಸದಸ್ಯರ ಸಹಿಯುಳ್ಳ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ಶ್ರೀಶೈಲ ಪಾಟೀಲ, ಸೋಮಶೇಖರ ಹತ್ತರಕಿ, ಶ್ರೀಶೈಲ ಖಜೂರೆ, ಧೋಂಡಿಬಾ ಸಾಳುಂಕೆ, ಶಿವಪುತ್ರ ನಡಗೇರಿ, ಪ್ರಭಾಕರ ಘನಾತೆ ಸೇರಿದಂತೆ ಇತರರು ಇದ್ದರು.
Comments are closed.