Shubhashaya News

ಶಾಸಕರನ್ನು ಪ್ರಶ್ನಿಸುವುದು ಶತ್ರುತ್ವವಲ್ಲ, ಅದು ಪ್ರಜಾಪ್ರಭುತ್ವದ ಹಕ್ಕು!

ಕೋಲಿ ಸಮಾಜದ ಅಧ್ಯಕ್ಷ ಶಿವಲಿಂಗಪ್ಪ ಜಮಾದಾರ ಹೇಳಿಕೆಗೆ ಮಾಜಿ ಕಾರ್ಯದರ್ಶಿ ಅಶೋಕ ಜಮಾದಾರ ತೀಕ್ಷ್ಣ ತಿರುಗೇಟು

ಆಳಂದ, ನ. 17: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಶಾಸಕರನ್ನು ಪ್ರಶ್ನಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಜನರ ತೆರಿಗೆ ಹಣದಿಂದಲೇ ಶಾಸಕರ ವೇತನ, ಭತ್ಯೆ ಸೇರಿದಂತೆ ಆಡಳಿತಾತ್ಮಕ ಖರ್ಚು-ವೆಚ್ಚಗಳು ಭರಿಸಲ್ಪಡುತ್ತವೆ. ಹೀಗಿರುವಾಗ ಶಾಸಕರ ಕಾರ್ಯವೈಖರಿ, ಹೇಳಿಕೆಗಳು ಹಾಗೂ ಸಾರ್ವಜನಿಕ ವಿಚಾರಗಳ ಕುರಿತು ಪ್ರಶ್ನಿಸುವುದನ್ನು ಶತ್ರುತ್ವವೆಂದು ಬಿಂಬಿಸುವುದು ಸರಿಯಲ್ಲ ಎಂದು ಕೋಲಿ ಸಮಾಜದ ಮಾಜಿ ಕಾರ್ಯದರ್ಶಿ ಅಶೋಕ ಜಮಾದಾರ ಅವರು ಕೋಲಿ ಸಮಾಜದ ಅಧ್ಯಕ್ಷ ಶಿವಲಿಂಗಪ್ಪ ಜಮಾದಾರ ಅವರ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿದ್ದಾರೆ.

ಶಾಸಕ ಬಿ.ಆರ್. ಪಾಟೀಲರು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಎದ್ದಿವೆ. ಈ ಸಂದರ್ಭದಲ್ಲಿ ಮೂಲ ವಿಷಯದ ಬಗ್ಗೆ ಚರ್ಚೆ ನಡೆಸುವ ಬದಲು ವಿಷಯಾಂತರ ಮಾಡಿ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಯುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ವ್ಯಕ್ತಿಗಳ ಪರ-ವಿರೋಧದ ಚರ್ಚೆಗಿಂತ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಗಳಿಗೆ ಉತ್ತರ ನೀಡುವುದು ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜಕಾರಣದಲ್ಲಿ ಯಾರೂ ಯಾರಿಗೂ ಶತ್ರುಗಳಲ್ಲ:

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ರಾಜಕೀಯವಾಗಿ ಟೀಕೆ ಮಾಡುವುದು, ಪ್ರಶ್ನೆಗಳನ್ನು ಕೇಳುವುದು ಹಾಗೂ ಜನಪ್ರತಿನಿಧಿಗಳಿಂದ ಉತ್ತರ ನಿರೀಕ್ಷಿಸುವುದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣಗಳು. ರಾಜಕಾರಣದಲ್ಲಿ ಯಾರೂ ಯಾರಿಗೂ ಶಾಶ್ವತ ಶತ್ರುಗಳಲ್ಲ. ಆದರೆ ಯಾರಾದರೂ ಪ್ರಶ್ನೆ ಕೇಳುವುದನ್ನೇ ಶತ್ರುತ್ವವೆಂದು ಭಾವಿಸಿದರೆ ಅದಕ್ಕೆ ಬೇರೆಯವರು ಏನು ಮಾಡಲು ಸಾಧ್ಯ? ಎಂದು ಅಶೋಕ ಜಮಾದಾರ ಖಾರವಾಗಿ ಪ್ರಶ್ನಿಸಿದ್ದಾರೆ.

ಜನರ ತೆರಿಗೆ ಹಣಕ್ಕೆ ಜನಪ್ರತಿನಿಧಿಗಳು ಉತ್ತರದಾಯಕರಾಗಬೇಕು:

ಶಾಸಕರು ಜನರ ಪ್ರತಿನಿಧಿಗಳಾಗಿದ್ದು, ಅವರ ಪ್ರತಿಯೊಂದು ಸಾರ್ವಜನಿಕ ನಡೆಯೂ ಜನರ ಗಮನದಲ್ಲಿರುತ್ತದೆ. ಶಾಸಕರಿಗೆ ದೊರೆಯುವ ಸೌಲಭ್ಯಗಳು ಹಾಗೂ ಆಡಳಿತಾತ್ಮಕ ವೆಚ್ಚಗಳು ಜನಸಾಮಾನ್ಯರ ತೆರಿಗೆ ಹಣದಿಂದಲೇ ಭರಿಸಲ್ಪಡುತ್ತವೆ. ಆದ್ದರಿಂದ ಜನರು ಪ್ರಶ್ನಿಸುವುದು ಯಾರ ಮೇಲಿನ ವೈಯಕ್ತಿಕ ದ್ವೇಷವಲ್ಲ; ಅದು ತಮ್ಮ ಹಕ್ಕು ಮತ್ತು ಕರ್ತವ್ಯವಾಗಿದೆ. ಜನಪ್ರತಿನಿಧಿಗಳು ಪ್ರಶ್ನೆಗಳಿಗೆ ಉತ್ತರಿಸುವ ಮನೋಭಾವ ಬೆಳೆಸಿಕೊಳ್ಳಬೇಕೇ ಹೊರತು ಪ್ರಶ್ನಿಸುವವರನ್ನೇ ವಿರೋಧಿಗಳೆಂದು ಬಿಂಬಿಸಬಾರದು ಎಂದು ಹೇಳಿದ್ದಾರೆ.

ಕ್ಷಮೆಯಾಚನೆಗೆ ಒತ್ತಾಯ:

ಶಾಸಕ ಬಿ.ಆರ್. ಪಾಟೀಲರು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿ, ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಸಮಾಜದ ಹೆಸರಿನಲ್ಲಿ ರಾಜಕೀಯ ಪ್ರಶ್ನೆಗಳನ್ನು ಬೇರೆ ದಿಕ್ಕಿಗೆ ತಿರುಗಿಸುವ ಪ್ರಯತ್ನ ಮಾಡಬಾರದು. ವ್ಯಕ್ತಿ ಅಥವಾ ಪಕ್ಷದ ಪರವಾಗಿ ನಿಲ್ಲುವುದಕ್ಕಿಂತ ಸತ್ಯ, ನ್ಯಾಯ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಪರವಾಗಿ ನಿಲ್ಲುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಅಶೋಕ ಜಮಾದಾರ ಒತ್ತಾಯಿಸಿದ್ದಾರೆ.

ಒಟ್ಟಾರೆ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಟೀಕೆಗೆ ಟೀಕೆಯಿಂದಲ್ಲ, ಸಮರ್ಥ ಉತ್ತರದಿಂದ ಪ್ರತಿಕ್ರಿಯಿಸಬೇಕು. ಜನರ ಪ್ರಶ್ನೆಗಳಿಗೆ ಉತ್ತರ ನೀಡುವುದೇ ನಿಜವಾದ ಜನಸೇವೆಯಾಗಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.