Shubhashaya News

ಸ್ಟಿಂಗ್ ಆಪರೇಷನ್ ಕೇಸ್ : ಕೋರ್ಟ್ ಗೆ ಪೆನ್ ಡ್ರೈವ್ ಸೇರಿದಂತೆ ಡಿಜಿಟಲ್ ದಾಖಲೆ ಸಲ್ಲಿಸಿದ ಖಾಸಗಿ ವಾಹಿನಿ ಮುಖ್ಯಸ್ಥ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಬಹುಚರ್ಚಿತ ಸ್ಟಿಂಗ್ ಆಪರೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥ ಹಾಗೂ ಮತ್ತೊಬ್ಬ ವ್ಯಕ್ತಿ ಪೆನ್ ಡ್ರೈವ್ ಸೇರಿದಂತೆ ಹಲವು ಡಿಜಿಟಲ್ ದಾಖಲೆಗಳನ್ನು ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಎಲ್ಲ ಸಾಕ್ಷ್ಯಾಧಾರಗಳನ್ನು ಅತ್ಯಂತ ಸುರಕ್ಷಿತವಾಗಿಡಬೇಕೆಂದು ಕೋರಿ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಪ್ರಕರಣದ ಮುಖ್ಯ ಅರ್ಜಿದಾರರಾಗಿರುವ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥರು ಪೆನ್‌ಡ್ರೈವ್ ಸೇರಿದಂತೆ ಒಟ್ಟು 18 ಆನ್‌ಲೈನ್ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ. ಇದರ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಬ್ಬ ಖಾಸಗಿ ವ್ಯಕ್ತಿಯೂ ಸಹ 11 ಪ್ರಮುಖ ಡಿಜಿಟಲ್ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಸಲ್ಲಿಕೆಯಾಗಿರುವ ಎಲ್ಲಾ ಸಾಕ್ಷ್ಯಗಳನ್ನು ಭದ್ರವಾಗಿ ಮತ್ತು ಸುರಕ್ಷಿತವಾಗಿರಿಸುವಂತೆ ತನ್ನ ಕಚೇರಿಯ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಿದೆ.

ಇದೇ ವೇಳೆ, ತಮಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ಕೋರಿ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥರು ಪ್ರತ್ಯೇಕ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಆದರೆ ಈ ಕೋರಿಕೆಗೆ ಸೈಬರ್ ಪೊಲೀಸರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅರ್ಜಿದಾರರು ಈ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸಕ್ರಿಯವಾಗಿ ತನಿಖೆ ಮತ್ತು ಕಾರ್ಯಾಚರಣೆ ನಡೆಸಿದವರಾಗಿದ್ದಾರೆ. ಹಾಗಾಗಿ ಅವರು ಕಾನೂನಾತ್ಮಕವಾಗಿ ‘ಸಾಕ್ಷಿ ರಕ್ಷಣೆ’ಯ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ ಎಂದು ಪೊಲೀಸರು ವಾದಿಸಿದ್ದಾರೆ.

ಅರ್ಜಿದಾರರು ಸಾಕ್ಷಿದಾರರಲ್ಲದೇ ಸ್ವತಃ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವುದರಿಂದ ಅವರ ಪೊಲೀಸ್ ರಕ್ಷಣೆಯ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಸೈಬರ್ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಕೋರಿದ್ದಾರೆ. ಎರಡೂ ಕಡೆಯ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ.

 

Leave A Reply

Your email address will not be published.