ಕೆಪಿಎಸ್‌ಸಿ (KPSC) ಅಕ್ರಮ ಪ್ರಕರಣದ ಮುಖ್ಯ ಆರೋಪಿ ಶಿವಶಂಕರಪ್ಪ ಸಾಹುಕಾರ್‌ನ ಅಕ್ರಮ ಆಸ್ತಿಯ ಮೂಲ ಹಾಗೂ ಬಂಡವಾಳದ ಸ್ಫೋಟಕ ಮಾಹಿತಿ ಇದೀಗ ತನಿಖೆಯ ವೇಳೆ ಬಯಲಾಗಿದೆ. ಈತನ ನಿವಾಸದ ಮೇಲೆ ದಾಳಿ ನಡೆಸಿದ್ದ ಇಡಿ (ಅನುಷ್ಠಾನ ನಿರ್ದೇಶನಾಲಯ) ಅಧಿಕಾರಿಗಳ ಶೋಧ ಕಾರ್ಯದಲ್ಲಿ ಮಹತ್ವದ ದಾಖಲೆಗಳು ಲಭ್ಯವಾಗಿವೆ. ಯಾದಗಿರಿ ಜಿಲ್ಲೆಯ ಮಾದರ್ಕಿ ಗ್ರಾಮದಲ್ಲಿ ಸುಮಾರು 8 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಶಾಲಾ-ಕಾಲೇಜು, ಸುಸಜ್ಜಿತ ಆಸ್ಪತ್ರೆ ಹಾಗೂ ರೆಸ್ಟೋರೆಂಟ್ ನಿರ್ಮಿಸಲು ಈತ ನೀಲನಕ್ಷೆ (ಬ್ಲೂಪ್ರಿಂಟ್) ಸಿದ್ಧಪಡಿಸಿಕೊಂಡಿದ್ದ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬೃಹತ್ ಯೋಜನೆಯನ್ನು ಜಾರಿಗೊಳಿಸಲು ಶಿವಶಂಕರಪ್ಪ ಪ್ಲಾನ್ ಮಾಡಿದ್ದಲ್ಲದೆ, ಅದಕ್ಕಾಗಿ ಪೂರ್ವ ತಯಾರಿಗಳನ್ನು ನಡೆಸಿದ್ದನು. ಈ ಯೋಜನೆಗಾಗಿ ₹40 ಕೋಟಿ ಹಣವನ್ನು ಹೊಂದಿಸುವ ಕಾಯಕದಲ್ಲಿದ್ದಾಗ ತನಿಖಾ ಸಂಸ್ಥೆಗಳ ಬಲೆಗೆ ಬಿದ್ದಿದ್ದಾನೆ. ಆರೋಪಿಯ ಮನೆಯಲ್ಲಿ ಸಿಕ್ಕಿರುವ ಪ್ರಾಜೆಕ್ಟ್‌ನ ಸಂಪೂರ್ಣ ರೇಖಾಚಿತ್ರ ಹಾಗೂ ಇತರೆ ಸ್ಫೋಟಕ ದಾಖಲೆಗಳನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದು, ಕೆಪಿಎಸ್‌ಸಿ ಅಕ್ರಮದ ಕಪ್ಪು ಹಣವನ್ನೇ ಈ ಬೃಹತ್ ಯೋಜನೆಗೆ ಹೂಡಿಕೆ ಮಾಡಲು ಯೋಜನೆ ರೂಪಿಸಲಾಗಿತ್ತೇ ಎಂಬ ಕೋನದಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.