ಕಲಬುರಗಿ: ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿ ನಗರದ ಬ್ರಹ್ಮಪುರದ ಶ್ರೀ ಉತ್ತರಾದಿ ಮಠದಲ್ಲಿ ಕಾರ್ತಿಕ ದೀಪೋತ್ಸವ, ವೇದಪಾರಾಯಣ ನೆರವೇರಿಸಲಾಯಿತು.
ಶ್ರುತೀಶ ಸೇವಾ ಸಮಿತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ನೆರವೇರಿತು. ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳು ಸಂಪೂರ್ಣ ಗುಣಮುಖರಾಗಿ ಭಕ್ತರನ್ನು ಆಶೀರ್ವದಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಯಿತು. ಅಲ್ಲದೇ ದೇಶದ ಗಡಿ ಕಾಯುವ ಯೋಧರ ಆರೋಗ್ಯ ವೃದ್ಧಿಯಾಗಲೆಂದು ಅವರ ಯೋಗಕ್ಷೇಮವನ್ನೂ ಪ್ರಾರ್ಥಿಸಿ ಪಾರಾಯಣ ಮಾಡಲಾಯಿತು.
ಈ ಸಂದರ್ಭದಲ್ಲಿ ಉತ್ತರಾದಿ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ ಅವರು ಮಾತನಾಡಿ, `ಶ್ರೀ ಸತ್ಯಾತ್ಮತೀರ್ಥ ಶ್ರೀಗಳು ಲೋಕೋದ್ಧಾರಕ್ಕಾಗಿಯೇ ಅವತರಿಸಿರುವ ಮಹಾನ್ ಯತಿಗಳಾಗಿದ್ದು, ಭಕ್ತರಿಗೆ ದಾರಿ ತೋರಿಸುವ ದಿವ್ಯ ದೀಪಧಾರಿಗಳಾಗಿದ್ದಾರೆ, ಅಂಥ ಸದ್ಗುರುಗಳ ಆರೋಗ್ಯ ಬೇಗ ಸುಧಾರಿಸಲೆಂದು ಭಕ್ತಿಯಿಂದ ಪ್ರಾರ್ಥಿಸಿ ಕಾರ್ತಿಕ ದೀಪೋತ್ಸವ ನೆರವೇರಿಸಿದ್ದೇವೆ’ ಎಂದು ತಿಳಿಸಿದರು.
ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂ. ವಿನೋದಾಚಾರ್ಯ ಗಲಗಲಿ, ಪಂ. ಅಭಯಾಚಾರ್ಯ ಪಾಟೀಲ್, ನಿವೃತ್ತ ಯೋಧರಾದ ಅಶೋಕ್, ಟ್ರಸ್ಟಿನ ಸದಸ್ಯರು, ನೂರಾರು ಭಕ್ತರು ಉಪಸ್ಥಿತರಿದ್ದರು.
ಕಲಬುರಗಿಯ ಬ್ರಹ್ಮಪುರದ ಉತ್ತರಾದಿ ಮಠದಲ್ಲಿ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ ಅವರ ನೇತೃತ್ವದಲ್ಲಿ ಕಾರ್ತಿಕ ದೀಪೋತ್ಸವ, ವೇದಪಾರಾಯಣ ನಡೆಯಿತು.