ಯಡ್ರಾಮಿ: ತಾಲೂಕಿನ ನಾಗರಹಳ್ಳಿ ಹಾಗೂ ಮಳ್ಳಿ ಗ್ರಾಮದ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ 16ರ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.
ರಾಜ್ಯ ಹೆದ್ದಾರಿ ನಿರ್ಮಾಣದ ವೇಳೆ ರಸ್ತೆ ಎರಡೂ ಬದಿಗಳಲ್ಲಿ ಮಳೆ ಮತ್ತು ಕಾಲುವೆ ನೀರು ಸರಾಗವಾಗಿ ಹರಿದು ಹೋಗುವ ಉದ್ದೇಶದಿಂದ ಚರಂಡಿ (ಕಾಲುವೆ) ನಿರ್ಮಿಸಲಾಗಿತ್ತು. ಆದರೆ ರಸ್ತೆ ಪಕ್ಕದ ಕೆಲ ಜಮೀನಿನ ಮಾಲೀಕರು ಕಾಲುವೆಯನ್ನು ಅತಿಕ್ರಮಿಸಿರುವ ಆರೋಪ ಕೇಳಿಬಂದಿದೆ. ಇದರಿಂದ ನೀರು ಸರಾಗವಾಗಿ ಹರಿಯದೆ ರಸ್ತೆಯ ಮಧ್ಯಭಾಗದಲ್ಲೇ ನಿಂತು ದೊಡ್ಡ ಕೆರೆಯಂತಾಗಿದೆ.
ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ನಾಳೆಗಳಿಗೆ ನೀರು ಹರಿಸಲಾಗಿದ್ದು, ಆ ನೀರು ಈ ಭಾಗಕ್ಕೆ ಬಂದ ನಂತರ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.
ಇದೇ ರಸ್ತೆಯ ಪಕ್ಕದಲ್ಲೇ ಸರ್ಕಾರಿ ಪ್ರೌಢಶಾಲೆ ಇರುವುದರಿಂದ ಪ್ರತಿದಿನ ಶಾಲೆಗೆ ತೆರಳುವ ವಿದ್ಯಾರ್ಥಿಗಳು ನೀರಿನಲ್ಲೇ ನಡೆದು ಶಾಲೆಗೆ ಹೋಗುವ ದುಸ್ಥಿತಿ ಎದುರಿಸುತ್ತಿದ್ದಾರೆ. ಪೋಷಕರಲ್ಲಿಯೂ ಆತಂಕ ಮನೆ ಮಾಡಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗಿದೆ.
ರಸ್ತೆಯ ಮಧ್ಯದಲ್ಲಿ ನಿಂತಿರುವ ನೀರು ಒಂದು ರೀತಿಯಲ್ಲಿ ಸ್ವಿಮ್ಮಿಂಗ್ ಪೂಲ್ನಂತೆಯೇ ಕಾಣುತ್ತಿದ್ದು ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸಂಬಂಧಪಟ್ಟ ರಾಜ್ಯ ಹೆದ್ದಾರಿ ಇಲಾಖೆ ಹಾಗೂ ಜಿಲ್ಲಾಡಳಿತ ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಅತಿಕ್ರಮಣ ತೆರವುಗೊಳಿಸಿ ಕಾಲುವೆಗಳನ್ನು ಸ್ವಚ್ಛಗೊಳಿಸುವ ಮೂಲಕ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಬಸವರಾಜ, ಅಶೋಕ, ಸುನಿಲ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.