ಕಲ್ಯಾಣ ಕರ್ನಾಟಕದ ನೀರಾವರಿ ವ್ಯವಸ್ಥೆ: ಕೋಟಿಗಟ್ಟಲೆ ಹಣ ನೀರಿನಲ್ಲಿ ತೇಲಿ ಹೋದರೂ ರೈತರ ಹೊಲಗಳು ಬರಡಾಗಿಯೇ ಉಳಿದಿವೆ!
ಭೀಮಾ ಮಿಷನ್ ಅಧ್ಯಯನ ತಂಡದ ಎರಡು ತಿಂಗಳ ಯಾತ್ರೆಯ ಆಘಾತಕಾರಿ ವರದಿ ಸಿದ್ಧ — ಶೀಘ್ರವೇ ಸರ್ಕಾರಕ್ಕೆ ಮಂಡನೆ
ಆಳಂದ: ಭೀಮಶೆಟ್ಟಿ ಮುಕ್ಕಾ ಮತ್ತು ಆರ್ಥಿಕ ತಜ್ಞ ಡಾ. ಬಸವರಾಜ ಕಮನೂರ ನೇತೃತ್ವದಲ್ಲಿ ಕಾಲುವೆಗಳ ಅಧ್ಯನ ನಡೆಸಿದ ತಂಡ.

ಆಳಂದ: ಅಣೆಕಟ್ಟೆಗಳಲ್ಲಿ ನೀರಿದ್ದರು ಕಾಲುವೆಗಳಿಗೆ ನೀರು ಹರಿಯದೆ ಒಣಗಿ ನಿಂತ್ತಿವೆ.

ಆಳಂದ: ಕಾಲುವೆಗೆಳ ನಿರ್ವಹಣೆ ಇಲ್ಲದೆ ಹಾಗೂ ರೈತರ ಜಮೀನುಗಳಿಗೆ ನೀರು ಹರಿಯದೆ ಮುಳ್ಳು ಕಂಟಿಗಳಿAದ ದುಸ್ಥಿತಿಯ ನೋಟ.
ಆಳAದ: ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಲಾದ ಮಧ್ಯಮ ನೀರಾವರಿ ಯೋಜನೆಯ ಅಣೆಕಟ್ಟೆ ಮತ್ತು ಮುಖ್ಯ ಕಾಲುವೆಗಳು ಹಲವು ದಶಕಗಳ ಬಳಿಕವೂ ರೈತರ ಜಮೀನುಗಳಿಗೆ ಸರಿಯಾಗಿ ನೀರು ಒದಗಿಸದೇ ಇರುವ ಕಟು ವಾಸ್ತವ ಬಯಲಾಗಿದೆ.
ಕಲಬುರಗಿ, ಬೀದರ್ ಮತ್ತು ಯಾದಗಿರಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಭೀಮಾ ಮಿಷನ್ ಅಡಿಯಲ್ಲಿ ನಡೆಸಲಾದ ಸುದೀರ್ಘ ಎರಡು ತಿಂಗಳ ಪಾದಯಾತ್ರೆ ಅಧ್ಯಯನ ಯಾತ್ರೆಯ ವರದಿ ಈಗ ಸಿದ್ಧಗೊಂಡಿದ್ದು, ಮೂರೂ ಜಿಲ್ಲೆಗಳ ನೀರಾವರಿ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಲೋಪ, ದುರ್ಲಕ್ಷ್ಯ ಮತ್ತು ಇಚ್ಛಾಶಕ್ತಿಯ ಕೊರತೆ ನಗ್ನ ಸತ್ಯವನ್ನು ವರದಿ ಹೊರಹಾಕಿದೆ.
ನಿಸ್ವಾರ್ಥ ಅಧ್ಯಯನ ತಂಡದ ಕಾರ್ಯ:
ಹಿರಿಯ ಹೋರಾಟಗಾರ ಮತ್ತು ಭೀಮಾ ಮಿಷನ್‌ನ ರೂವಾರಿ ಭೀಮಶೆಟ್ಟಿ ಮುಕ್ಕಾ ಅವರ ನೇತೃತ್ವದಲ್ಲಿ, ಹಿರಿಯ ಆರ್ಥಿಕ ತಜ್ಞ ಡಾ. ಬಸವರಾಜ ಕಮನೂರ ಮತ್ತು ಸಂಗಾತಿಗಳಾದ ಶಿವಶರಣಪ್ಪ ಟೆಂಗಳಿ, ರಾಜು ಜೈನ್, ಶಿವರಾಜ ಬಿರಾದಾರ, ಅಭಿ ಹಾಗೂ ಮಹೇಶ ಪಾಟೀಲ, ಪ್ರಿಯಾ ಹೊಸಗೌಡ ಒಳಗೊಂಡ ತಂಡವು ಯಾವುದೇ ಸರ್ಕಾರಿ ನೆರವಿಲ್ಲದೆ ಸ್ವಯಂಪ್ರೇರಣೆಯಿAದ ಎರಡು ತಿಂಗಳ ಕಾಲ ಮೂರೂ ಜಿಲ್ಲೆಗಳ ಅಣೆಕಟ್ಟೆ, ಮುಖ್ಯ ಕಾಲುವೆ ಮತ್ತು ವಿತರಣಾ ಕಾಲುವೆಗಳನ್ನು ಪ್ರತ್ಯಕ್ಷ ತಪಾಸಣೆ ನಡೆಸಿ ಸ್ಥಳೀಯ ರೈತರ ಸಮಸ್ಯೆಗಳನ್ನು ಆಲಿಸಿ, ಅಂಕಿ ಅಂಶಗಳ ಸಂಗ್ರಹಿಸಿ ಸಮಗ್ರ ವರದಿ ಸಿದ್ಧಪಡಿಸಿದ್ದಾರೆ. ಇಂತಹ ನಿಸ್ವಾರ್ಥ ಸೇವೆ ಈ ಭಾಗದ ರೈತರ ನಿಜವಾದ ನೋವನ್ನು ದಾಖಲಿಸಿ ಸರ್ಕಾರದ ಮುಂದಿಡುವ ಮಹತ್ವದ ಕೆಲಸ ಮಾಡಿದೆ ಎಂದು ಸ್ಥಳೀಯ ಜನ ಶ್ಲಾಘಿಸುವಂತಾಗಿದೆ.
ಏನಿದೆ ಕಲ್ಯಾಣ ಕರ್ನಾಟಕದ ನೀರಾವರಿ ಯೋಜನೆಗಳ ವಾಸ್ತವ?
ಕಲ್ಯಾಣ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಒಟ್ಟು ೧೧ ಮಧ್ಯಮ ನೀರಾವರಿ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. ಅವು ಈ ಕೆಳಗಿನಂತಿವೆ:
ಕಲಬುರಗಿ ಜಿಲ್ಲೆ: ಅಫಜಲಪೂರ ತಾಲೂಕಿನ ಭೀಮಾ ಏತ ನೀರಾವರಿ, ಆಳಂದದ ಅಮರ್ಜಾ, ಕಮಲಾಪೂರ ಮುಲ್ಲಾಮರಿ ಕೆಳದಂಡೆ, ಗಂಡೋರಿ ನಾಲಾ, ಬೆಣ್ಣೆತೋರಾ, ಚಿಂಚೋಳಿ ತಾಲ್ಲೂಕಿನ ಚಂದ್ರAಪಳ್ಳಿ
ಬೀದರ್ ಜಿಲ್ಲೆ: ಚುಳಕಿ ನಾಲಾ, ಕಾರಾಂಜಾ, ಮುಲ್ಲಾಮರಿ ಮೇಲ್ದಂಡೆ
ಯಾದಗಿರಿ ಜಿಲ್ಲೆ: ಸೌದಾಗರ್, ಹತ್ತಿಗುಣಿ ಅಣೆಕಟ್ಟೆಗಳು
ಈ ಎಲ್ಲಾ ಯೋಜನೆಗಳೂ ತಮ್ಮ ನಿಗದಿತ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ಅಧ್ಯಯನ ತಂಡದ ಕಟು ಅಭಿಪ್ರಾಯ.
ಭೀಮಾ ಏತ ನೀರಾವರಿ ೪೯,೦೦೦ ಎಕರೆ ಗುರಿ, ಕೇವಲ ೨೦% ಮಾತ್ರ ಫಲ!
ಭೀಮಾ ಏತ ನೀರಾವರಿ ಯೋಜನೆಯಡಿ ಸುಮಾರು ೪೯,೦೦೦ ಎಕರೆ ಜಮೀನಿಗೆ ನೀರಾವರಿ ಕಲ್ಪಿಸಬೇಕಿತ್ತು. ಆದರೆ ವಾಸ್ತವದಲ್ಲಿ ಕೇವಲ ಶೇ. ೨೦ರಷ್ಟು ಮಾತ್ರ ನೀರು ಬಳಕೆಯಾಗುತ್ತಿದೆ. ಚಂದ್ರAಪಳ್ಳಿ ಅಣೆಕಟ್ಟೆಯಲ್ಲೂ ಇದೇ ಪರಿಸ್ಥಿತಿ ಇದ್ದು, ಶೇ. ೨೦ ಬಳಕೆ ಮಾತ್ರ ನಡೆಯುತ್ತಿದೆ ಎಂದು ತಂಡ ಬಹಿರಂಗಪಡಿಸಿದೆ.
ಅಣೆಕಟ್ಟೆಗಳ ದುಃಸ್ಥಿತಿ: ಕಟ್ಟಿದ್ದು ಅಭಿವೃದ್ಧಿಗೋ, ನಿರ್ಲಕ್ಷ್ಯಕ್ಕೋ?
ಅಧ್ಯಯನ ತಂಡ ಸ್ಥಳ ಪರಿಶೀಲನೆ ನಡೆಸಿದಾಗ ಕಂಡುಬAದ ಸಮಸ್ಯೆಗಳು ಹೀಗಿವೆ: ಕಾಲುವೆಗಳು ಮಣ್ಣು, ಗಿಡಗಂಟಿ ಮತ್ತು ಹುಲ್ಲಿನಿಂದ ತುಂಬಿ ಹೋಗಿ ನೀರು ಹರಿಯಲು ಅಸಾಧ್ಯವಾಗಿದೆ. ವಿತರಣಾ ಕಾಲುವೆಗಳು ಬಹುತೇಕ ಕಾರ್ಯಹೀನವಾಗಿದ್ದು ನೀರೇ ಹರಿಯುತ್ತಿಲ್ಲ.ಅಣೆಕಟ್ಟೆ ಪ್ರಾಂಗಣಗಳಲ್ಲಿ ಪೊದೆ ಮತ್ತು ಕಂಟಿಗಳು ಬೆಳೆದು ನಿರ್ವಹಣೆ ಸಂಪೂರ್ಣ ಶೂನ್ಯ, ಪ್ರವಾಸಿಗರು ಬಿಸಾಡಿದ ತ್ಯಾಜ್ಯ ಅಣೆಕಟ್ಟೆ ಪ್ರದೇಶದಲ್ಲಿ ಸಂಗ್ರಹವಾಗಿ ಪರಿಸರ ಮಾಲಿನ್ಯ ಉಂಟಾಗಿದೆ. ಚುಳಕಿ ನಾಲಾ ಅಣೆಕಟ್ಟೆ ಅತ್ಯಂತ ಕಳಪೆ ಗುಣಮಟ್ಟದ ನಿರ್ಮಾಣ ಹೊಂದಿದೆ. ಕಾಲುವೆಗಳ ಅಕ್ಕಪಕ್ಕದ ರಸ್ತೆಗಳು ಅವೈಜ್ಞಾನಿಕ ಮತ್ತು ಅಸಮರ್ಪಕವಾಗಿ ನಿರ್ಮಾಣಗೊಂಡಿವೆ. ಕಾಲುವೆಗಳ ನಿರ್ಮಾಣವೇ ಅವೈಜ್ಞಾನಿಕ ಎಂದು ತಂಡ ಕಟುವಾಗಿ ವಿಮರ್ಶಿಸಿದೆ.
ಅಧಿಕಾರಿಗಳ ನಿರ್ಲಕ್ಷ್ಯ ಮತ್ತು
ರಾಜಕೀಯ ಇಚ್ಛಾಶಕ್ತಿಯ ಕೊರತೆ:
ಭೀಮಾ ಮಿಷನ್ ತಂಡ ಸ್ಪಷ್ಟವಾಗಿ ಹೇಳಿರುವಂತೆ, ಕಲ್ಯಾಣ ಕರ್ನಾಟಕದ ನೀರಾವರಿ ಯೋಜನೆಗಳು ವಿಫಲಗೊಳ್ಳಲು ಮುಖ್ಯ ಕಾರಣಗಳೆಂದರೆ, ಉನ್ನತ ಅಧಿಕಾರಿಗಳ ನಿರ್ಲಕ್ಷ್ಯ: ನಿರ್ವಹಣೆ ಮತ್ತು ಮೇಲ್ವಿಚಾರಣೆ ಸಂಪೂರ್ಣ ಕೊರತೆ ಇದ್ದು, ಕ್ಷೇತ್ರ ಅಧಿಕಾರಿಗಳು ಜವಾಬ್ದಾರಿ ಮರೆತಿದ್ದಾರೆ.
ರಾಜಕೀಯ ಇಚ್ಛಾಶಕ್ತಿಯ ಅಭಾವ: ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳು ರೈತರ ನಿಜವಾದ ಸಮಸ್ಯೆಗಳ ಕಡೆ ತಮ್ಮ ಗಮನ ಹರಿಸದ ಪರಿಸ್ಥಿತಿ ಇದೆ
ರೈತರ ನಿರುತ್ಸಾಹ: ದಶಕಗಳ ನಿರಾಸೆಯಿಂದ ರೈತ ಸಮುದಾಯ ಸ್ವತಃ ಹೋರಾಡುವ ಉತ್ಸಾಹ ಕಳೆದುಕೊಂಡಿದ್ದಾರೆ.
ನೀರು ಬಳಕೆದಾರರ ಸಂಘಗಳ ನಿಷ್ಕ್ರಿಯತೆ: ಎಲ್ಲ ಅಣೆಕಟ್ಟೆಗಳಿಗೆ ನೀರು ಬಳಕೆದಾರರ ಸಂಘಗಳು ಅಸ್ತಿತ್ವದಲ್ಲಿ ಇದ್ದರೂ ರೈತರ ಜಾಗೃತಿ ಮತ್ತು ಸಂಘಟನೆ ಆಗಿಲ್ಲ.
ಅಮರ್ಜಾ ತುಂಬಿಸುವ ಯೋಜನೆ — ದುಬಾರಿ ಆದರೆ ನಿರರ್ಥಕ?
ಭೀಮಾ ನದಿಯಿಂದ ಅಮರ್ಜಾ ಅಣೆಕಟ್ಟೆಗೆ ನೀರು ತರುವ ಯೋಜನೆ ಜಾರಿಯಲ್ಲಿದ್ದರೂ ಅದರ ಉಪಯುಕ್ತತೆ ಬಗ್ಗೆ ತಂಡ ಪ್ರಶ್ನೆ ಎತ್ತಿದೆ. “ಮಳೆಗಾಲದಲ್ಲಿ ಭೀಮಾ ನೀರು ಹರಿಯುವಾಗ ಅಮರ್ಜಾ ಅಣೆಕಟ್ಟೆಗೂ ಸ್ಥಳೀಯ ಮಳೆ ನೀರು ಬರುತ್ತದೆ. ಹಾಗಿರುವಾಗ ಈ ಯೋಜನೆ ಫಲಪ್ರದವಲ್ಲ” ಎಂದು ತಂಡ ವಾದಿಸಿದೆ. ಇಂತಹ ದೊಡ್ಡ ಯೋಜನೆಗಳ ಬದಲಿಗೆ ಸ್ಥಳೀಯ ಅಗತ್ಯಕ್ಕೆ ತಕ್ಕ ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದೆ.
ಭೀಮಾ ಮಿಷನ್‌ನ ಪ್ರಮುಖ ಶಿಫಾರಸ್ಸುಗಳು: ಅಧ್ಯಯನ ತಂಡ ಸರ್ಕಾರಕ್ಕೆ ಮಂಡಿಸಲಿರುವ ಪ್ರಮುಖ ಶಿಫಾರಸ್ಸುಗಳು:
ಅಣೆಕಟ್ಟೆ ತುಂಬಿಸುವ ಯೋಜನೆಗಳ ಬದಲಿಗೆ ಅಗತ್ಯ ಸ್ಥಳಗಳಲ್ಲಿ ಚೆಕ್‌ಡ್ಯಾಂ, ಬ್ರಿಡ್ಜ್ ಕಂ-ಬ್ಯಾರೇಜ್ ನಿರ್ಮಾಣ ಮಾಡಬೇಕು. ಹಳ್ಳಿಗಳಲ್ಲಿ ಬರಡಾಗಿ ಉಳಿದಿರುವ ಸಣ್ಣ ಕೆರೆಗಳನ್ನು ಪುನರ್ಜೀವನ ಮಾಡಬೇಕು. ಕಾಲುವೆಗಳ ಸಮರ್ಪಕ ಸ್ವಚ್ಛತೆ ಮತ್ತು ನಿರ್ವಹಣೆ ಕ್ರಮ ಕೈಗೊಳ್ಳಬೇಕು.
ನೀರು ಬಳಕೆದಾರರ ಸಂಘಗಳ ಮೂಲಕ ರೈತರಿಗೆ ನೀರು ಬಳಕೆ ತರಬೇತಿ ಮತ್ತು ಜಾಗೃತಿ** ಮೂಡಿಸಬೇಕು. ರೈತರು ನೀರನ್ನು ಅನಾವಶ್ಯಕ ಹರಿಬಿಡದೆ **ಶಿಸ್ತುಬದ್ಧ ನೀರಾವರಿ** ಅನುಸರಿಸುವಂತೆ ಪ್ರೇರೇಪಿಸಬೇಕು. ಕಾಲುವೆ ನಿರ್ಮಾಣ ಮತ್ತು ದುರಸ್ತಿಯಲ್ಲಿ ವೈಜ್ಞಾನಿಕ ವಿಧಾನ ಅಳವಡಿಸಬೇಕು.
ಮುಂದಿನ ಹೆಜ್ಜೆ: ಸರ್ಕಾರಕ್ಕೆ ಮಂಡನೆ: ಭೀಮಾ ಮಿಷನ್ ತಂಡ ಸಿದ್ಧಪಡಿಸಿದ ವರದಿಯನ್ನು ಹಂತ ಹಂತವಾಗಿ ಮಂಡಿಸಲು ಕ್ರಮ ಕೈಗೊಳ್ಳಲಾಗಿದ್ದು:
ಮೊದಲು ಆಯಾ ಜಿಲ್ಲಾಧಿಕಾರಿಗಳಿಗೆ ಸ್ಥಿತಿಗತಿ ವಿವರಿಸಿ ಭೇಟಿ ನೀಡಲಾಗುವುದು. ನಂತರ ಸ್ಥಳೀಯ ಶಾಸಕರಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುವುದು. ಅಂತಿಮವಾಗಿ ರಾಜ್ಯದ ನೀರಾವರಿ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ನಿಯೋಗದ ಮೂಲಕ ಅಧಿಕೃತ ವರದಿ ಮಂಡಿಸಲಾಗುವುದು
ತಳಮಟ್ಟದ ಧ್ವನಿ: “ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಅಣೆಕಟ್ಟೆ ರೈತರ ಜಮೀನಿಗೆ ನೀರು ಕೊಡದಿದ್ದರೆ ಅವು ಕಟ್ಟಿದ ಉದ್ದೇಶ ಈಡೇರಿದಂತೆ ಆಗುತ್ತದೆಯೇ? ಅಣೆಕಟ್ಟೆ ಕಟ್ಟಿದ್ದೇ ರೈತರ ಹೊಲಗಳಿಗೆ ನೀರು ಒದಗಿಸಲಿಕ್ಕೆ. ಅದೇ ಆಗದಿದ್ದರೆ ಅಣೆಕಟ್ಟೆ ಯಾಕೆ ಬೇಕು?”* — ಎಂದು ಭೀಮಾ ಮಿಷನ್ ಸರ್ಕಾರಕ್ಕೆ ಮುಖಕ್ಕೆ ಹೊಡೆದಂತೆ ಕೇಳುತ್ತಿದೆ.
ಈ ಅಧ್ಯಯನ ವರದಿ ಕೇವಲ ಲೋಪಗಳ ಪಟ್ಟಿಯಲ್ಲ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಕಲ್ಯಾಣ ಕರ್ನಾಟಕದ ಬರಡು ಭೂಮಿಯ ರೈತರ ಬದುಕಿಗೆ ನೀರು ಉಣಿಸಬೇಕೆಂಬ ಒಂದು ಸಮಾಜ ಮನಸ್ಸಾಕ್ಷಿಯ ಕರೆ.
Comments are closed.