ಕಾಲದ ಅನಂತ ಪ್ರವಾಹದಲ್ಲಿ ಎಷ್ಟೋ ಸಾಮ್ರಾಜ್ಯಗಳು ಕೊಚ್ಚಿಹೋಗಿವೆ. ಆದರೆ, ಮನುಷ್ಯನ ಘನತೆಯನ್ನು ಎತ್ತಿಹಿಡಿಯುವ ತತ್ವಗಳೇನಾದರೂ ಇದ್ದರೆ, ಅವು ಮಾತ್ರ ಕಾಲಾತೀತವಾಗಿ ನಿಲ್ಲುತ್ತವೆ. ಇಂತಹ ಒಂದು ವಿಶಿಷ್ಟ ತತ್ವದ, ಅಚಲ ಆದರ್ಶದ ಮತ್ತು ಅಸಾಧಾರಣ ಬೌದ್ಧಿಕ ಕ್ರಾಂತಿಯ ಮೂರ್ತರೂಪವೇ ಡಾ. ಭೀಮರಾವ್ ರಾಮ್‌ಜೀ ಅಂಬೇಡ್ಕರ್.
ಮಾನವನ ಇತಿಹಾಸದಲ್ಲಿ ಕತ್ತಿ ಹಿಡಿದು ಜಗತ್ತನ್ನು ಗೆದ್ದವರ ಕತೆಗಳು ಸಾಕಷ್ಟಿವೆ. ಆದರೆ, ಲೇಖನಿ ಹಿಡಿದು ಕೋಟ್ಯಂತರ ಜನರ ಬದುಕಿನ ಬರಹವನ್ನೇ ಬದಲಾಯಿಸಿದ ಅಂಬೇಡ್ಕರ್ ಅವರ ಬದುಕು ಒಂದು ಆಧುನಿಕ ಮಹಾಕಾವ್ಯ.
ಬೆಂಕಿಯಲ್ಲಿ ಅರಳಿದ ಹೂವು:
1891ರ ಏಪ್ರಿಲ್ 14ರಂದು ಮಧ್ಯಪ್ರದೇಶದ ‘ಮಹೌ’ ಎಂಬಲ್ಲಿ ರಾಮ್‌ಜೀ ಸಕ್ಪಾಲ್ ಮತ್ತು ಭೀಮಾಬಾಯಿ ದಂಪತಿಯ 14ನೆಯ ಮಗುವಾಗಿ ಜನಿಸಿದ ಭೀಮರಾವ್ ಅವರ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ; ಅದು ಅವಮಾನಗಳ, ತಿರಸ್ಕಾರಗಳ ಮತ್ತು ನೋವಿನ ಕೂಪವಾಗಿತ್ತು. ಆದರೆ, ಆ ಬೆಂಕಿಯನ್ನೇ ಅವರು ತಮ್ಮನ್ನು ತಾವು ಪುಟವಿಟ್ಟುಕೊಳ್ಳುವ ಕುಲುಮೆಯನ್ನಾಗಿಸಿಕೊಂಡರು. ಮುಂಬೈನ ಎಲ್ಫಿನ್‌ಸ್ಟೋನ್ ಕಾಲೇಜಿನಲ್ಲಿ ಪದವಿ ಪಡೆದು, ಬರೋಡಾ ಮಹಾರಾಜರ ವಿದ್ಯಾರ್ಥಿವೇತನದ ನೆರವಿನಿಂದ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಹಾಗೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಉನ್ನತ ವ್ಯಾಸಂಗ ಮಾಡಿ ಎಂ.ಎ., ಪಿಎಚ್.ಡಿ., ಡಿ.ಎಸ್ಸಿ. ಮತ್ತು ಬಾರ್-ಅಟ್-ಲಾ ಮುಂತಾದ ಉನ್ನತ ಪದವಿಗಳನ್ನು ಪಡೆದದ್ದು ಅಸಾಧಾರಣ ಸಾಧನೆಯಾಗಿದೆ.
ತರಗತಿಯ ಹೊರಗೆ ಕುಳಿತು ಪಾಠ ಕೇಳಿದ ಆ ಬಾಲಕ, ಜ್ಞಾನದ ಹಸಿವಿನಿಂದಲೇ ವಿಶ್ವದ ಶ್ರೇಷ್ಠ ವಿದ್ವಾಂಸರ ಸಾಲಿನಲ್ಲಿ ನಿಂತದ್ದು ಪವಾಡ ಸದೃಶವಾಗಿದೆ. ಅಂತಹ ಒಂದು ಪವಾಡ ಸಂಭವಿಸಲು ಅವರ ಅಕ್ಷರದ ಮೇಲಿನ ನಂಬಿಕೆ ಮತ್ತು ಅಸಾಧಾರಣ ಇಚ್ಛಾಶಕ್ತಿಯೇ ಕಾರಣ. ಗ್ರಂಥಾಲಯಗಳೇ ಅವರ ದೇವಾಲಯಗಳಾದವು. ಕೇವಲ ಓದುವುದಕ್ಕಷ್ಟೇ ಸೀಮಿತವಾಗದೆ, 1920ರಲ್ಲಿ ‘ಮೂಕನಾಯಕ’ ಮತ್ತು ನಂತರ ‘ಬಹಿಷ್ಕೃತ ಭಾರತ’ದಂತಹ ಪತ್ರಿಕೆಗಳನ್ನು ಹುಟ್ಟುಹಾಕಿ ಮೂಕ ಸಮುದಾಯಗಳಿಗೆ ದನಿಯಾದರು. 1927ರ ‘ಮಹಾಡ್ ಕೆರೆ ಸತ್ಯಾಗ್ರಹ’ ಮತ್ತು 1930ರ ‘ಕಾಳಾರಾಮ್ ದೇವಾಲಯ ಪ್ರವೇಶ ಚಳುವಳಿ’ಗಳು ಭಾರತದ ಸಾಮಾಜಿಕ ಇತಿಹಾಸದಲ್ಲಿನ ಕ್ರಾಂತಿಕಾರಿ ಮೈಲಿಗಲ್ಲುಗಳಾಗಿವೆ.
ಆರ್ಥಿಕ-ಸಾಮಾಜಿಕ ದೃಷ್ಟಾರ
ಅಂಬೇಡ್ಕರ್ ಅವರನ್ನು ಕೇವಲ ‘ಸಂವಿಧಾನ ಶಿಲ್ಪಿ’ ಎಂಬ ಒಂದು ಚೌಕಟ್ಟಿನಲ್ಲಿ ಬಂಧಿಸುವುದು ಅವರ ಬಹುಮುಖಿ ಪ್ರತಿಭೆಗೆ ಮಾಡುವ ಅಪಚಾರ. ಅವರು ಶ್ರೇಷ್ಠ ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ಕಾನೂನು ತಜ್ಞ ಹಾಗೂ ಮಹಾನ್ ಮಾನವತಾವಾದಿಯಾಗಿದ್ದಾರೆ.
ಭಾರತದಂತಹ ವೈವಿಧ್ಯಮಯ, ಜಾತಿ-ಧರ್ಮಗಳ ಜಟಿಲ ಜಾಲದಲ್ಲಿ ಸಿಲುಕಿದ್ದ ದೇಶಕ್ಕೊಂದು ಸಂವಿಧಾನ ರಚಿಸಲು ‘ಕರಡು ಸಮಿತಿಯ ಅಧ್ಯಕ್ಷರಾಗಿ’ ಅವರು ವಹಿಸಿದ ಪಾತ್ರ ಐತಿಹಾಸಿಕವಾದದ್ದು. ಸಂವಿಧಾನವು ಸಮಾನತೆಯ, ಸ್ವಾತಂತ್ರ್ಯದ ಮತ್ತು ಭ್ರಾತೃತ್ವದ ಕಲ್ಪನೆಗಳನ್ನು ಹೆಣೆದ ಒಂದು ಅದ್ಭುತ ಕೃತಿಯಾಗಿದೆ. ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾಗಿ ‘ಹಿಂದೂ ಕೋಡ್ ಬಿಲ್’ ಮಂಡಿಸುವ ಮೂಲಕ ಮಹಿಳೆಯರಿಗೆ ಆಸ್ತಿ ಹಕ್ಕು ಮತ್ತು ಸಮಾನತೆಯನ್ನು ಪ್ರತಿಪಾದಿಸಿದಾಗ, ಅವರು ತಮ್ಮ ಕಾಲಕ್ಕಿಂತ ಎಷ್ಟು ಮುಂದಿದ್ದರು ಎಂಬುದು ನಮಗೆ ಅರ್ಥವಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಾಪನೆಗೆ ಅವರು ಬರೆದ “ದಿ ಪ್ರಾಬ್ಲಮ್ ಆಫ್ ದಿ ರುಪೀ” ಎಂಬ ಅರ್ಥಶಾಸ್ತ್ರದ ಪ್ರಬಂಧವೇ ಬುನಾದಿಯಾಯಿತು ಎಂಬುದು ಅವರ ಬೌದ್ಧಿಕ ವಿಸ್ತಾರಕ್ಕೆ ಸಾಕ್ಷಿಯಾಗಿದೆ. ಹಾಗೆಯೇ ಅವರ “ಅನಿಹಿಲೇಷನ್ ಆಫ್ ಕ್ಯಾಸ್ಟ್” ಕೃತಿಯು ಇಂದಿಗೂ ಜಾತಿ ವಿನಾಶದ ಪ್ರಬಲ ಸೈದ್ಧಾಂತಿಕ ಅಸ್ತ್ರವಾಗಿ ನಿಂತಿದೆ.
ಶಿಕ್ಷಣ, ಸಂಘಟನೆ, ಹೋರಾಟ
“ಶಿಕ್ಷಿತರಾಗಿ, ಸಂಘಟಿತರಾಗಿ, ಹೋರಾಡಿ” – ಇದು ಶೋಷಿತ ಸಮುದಾಯಗಳ ಏಳಿಗೆಗೆ ಬಾಬಾಸಾಹೇಬ್ ಅವರು ಬರೆದ ಪ್ರಣಾಳಿಕೆ. ಮನುಷ್ಯನನ್ನು ಮನುಷ್ಯನಾಗಿ ಕಾಣದ ಯಾವುದೇ ವ್ಯವಸ್ಥೆಯನ್ನು ಅವರು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದರು. ಬುದ್ಧನ ಕರುಣೆ, ಕಬೀರನ ಭಕ್ತಿ ಮತ್ತು ಜ್ಯೋತಿಬಾ ಫುಲೆಯವರ ವಿಚಾರಧಾರೆ ಅವರ ದಾರಿದೀಪವಾಗಿತ್ತು. ಇದೇ ಕಾರಣಕ್ಕಾಗಿ, 1956ರ ಅಕ್ಟೋಬರ್ 14ರಂದು ನಾಗ್ಪುರದ ದೀಕ್ಷಾಭೂಮಿಯಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಸಮಾನತೆಯ ಪ್ರತೀಕವಾದ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವವೆಂದರೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ತಳಹದಿಯ ಮೇಲೆ ನಿಂತಿರುವ ಒಂದು ಜೀವನ ವಿಧಾನ.
ಇಂದು ನಾವು ತಾಂತ್ರಿಕವಾಗಿ ಎಷ್ಟೇ ಮುಂದುವರಿದಿದ್ದರೂ, ನಮ್ಮ ನೆಲದ ವಾಸ್ತವದಲ್ಲಿ ಇನ್ನೂ ಅಸಮಾನತೆಯ ಗೋಡೆಗಳ ನಡುವೆಯೇ ಬದುಕುತ್ತಿದ್ದೇವೆ. ಆರ್ಥಿಕ ಕಂದಕಗಳು ದಿನೇ ದಿನೇ ಹೆಚ್ಚುತ್ತಿರುವ, ಸಾಮಾಜಿಕ ಸಾಮರಸ್ಯದ ಎಳೆಗಳು ಬಿಗಡಾಯಿಸುತ್ತಿರುವ ಇಂದಿನ ದಿನಗಳಲ್ಲಿ ಬಾಬಾಸಾಹೇಬರ ವಿಚಾರಗಳು ಇನ್ನಷ್ಟು ಪ್ರಸ್ತುತವಾಗುತ್ತವೆ. ಅವರು ಅಂದೇ ಬಹಳ ಸ್ಪಷ್ಟವಾಗಿ ಎಚ್ಚರಿಸಿದ್ದರು: “ನಮಗೆ ಕೇವಲ ರಾಜಕೀಯ ಸ್ವಾತಂತ್ರ್ಯವಿದ್ದರೆ ಸಾಲದು, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವಿಲ್ಲದಿದ್ದರೆ ಈ ಪ್ರಜಾಪ್ರಭುತ್ವದ ಸೌಧವನ್ನು ಯಾರು ಬೇಕಾದರೂ ಕೆಡವಬಹುದು.” ಈ ಮಾತು ಇಂದಿನ ಕಾಲಘಟ್ಟಕ್ಕೆ ಕನ್ನಡಿ ಹಿಡಿದಂತಿದೆ.
1990ಲ್ಲಿ ಮರಣೋತ್ತರವಾಗಿ ‘ಭಾರತ ರತ್ನ’ ಪುರಸ್ಕಾರಕ್ಕೆ ಭಾಜನರಾದ ಡಾ. ಬಿ. ಆರ್. ಅಂಬೇಡ್ಕರ್ ಅವರು ಹಚ್ಚಿಟ್ಟ ಅರಿವಿನ ದೀಪವನ್ನು ಆರದಂತೆ ಕಾಯುವುದು ಮತ್ತು ಅವರು ಕಂಡ ಸಮಾನತೆಯ ಕನಸನ್ನು ನನಸು ಮಾಡುವುದು ಪ್ರಜ್ಞಾವಂತ ಸಮಾಜದ ಜವಾಬ್ದಾರಿಯಾಗಿದೆ. ಕೇವಲ ಜಯಂತಿಗಳಂದು ಅವರ ಭಾವಚಿತ್ರಕ್ಕೆ ಹಾರ ಹಾಕಿ, ಜೈಕಾರ ಕೂಗುವುದರ ಬದಲು, ಅವರ ಸಾಂವಿಧಾನಿಕ ನೈತಿಕತೆಯನ್ನು ನಮ್ಮ ಶೈಕ್ಷಣಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಆ ಮಹಾನ್ ಚೇತನದ ಬದುಕಿಗೆ, ಹೋರಾಟಕ್ಕೆ ನಾವು ನೀಡುವ ನಿಜವಾದ ಗೌರವ.
ಕತ್ತಲು ಎಷ್ಟೇ ದಟ್ಟವಾಗಿದ್ದರೂ, ಪ್ರಜ್ಞೆಯ ಒಂದು ಸಣ್ಣ ಕಿಡಿ ಇಡೀ ವ್ಯವಸ್ಥೆಯನ್ನು ಬೆಳಗಬಲ್ಲದು ಎಂಬುದಕ್ಕೆ ಬಾಬಾಸಾಹೇಬರೇ ಜೀವಂತ ಉದಾಹರಣೆ.
ಶಿವರಾಜ ಸೂ. ಸಣಮನಿ
ಲೇಖಕರು: ಮದಗುಣಕಿ
Comments are closed.