ಚಿತ್ತಾಪುರ: ಪಟ್ಟಣದ ತಹಶೀಲ್ ಕಚೇರಿ ಸಭಾಂಗಣದಲ್ಲಿ ತಹಾಶಿಲ್ದಾರ್ ಉಮಾಕಾಂತ ಹಳ್ಳೆ ಅಧ್ಯಕ್ಷತೆಯಲ್ಲಿ ಕೊರೊನಾ ವಿಶೇಷ ಸಭೆ ನಡೆಯಿತು.
ಕೊರೊನಾ ತಡೆಯಲು ಅಧಿಕಾರಿಗಳಾದ ನಾವುಗಳು 24 ಗಂಟೆಗಳ ಕಾಲ ದುಡಿಯೋಣ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಹೇಳಿದರು.
ಪಟ್ಟಣದ ತಹಶೀಲ್ ಕಚೇರಿ ಸಭಾಂಗಣದಲ್ಲಿ ಕೊರೊನಾ ತಡೆಗಟ್ಟುವ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಮೊದಲನೇಯ ಕೊರೊನಾ ಹಾವಳಿ ತಡೆಗಟ್ಟಲು ಅಧಿಕಾರಿಗಳು ಹಗಲು ರಾತ್ರಿ ಎನ್ನದೇ ಶ್ರಮಿಸಿದ್ದೀರಿ. ಅದೇ ರೀತಿ ಇದೀಗ ಎರಡನೇ ಕೊರೊನಾ ಹಾವಳಿ ಶುರುವಾಗಿದೆ. ಆದ್ದರಿಂದ ಪ್ರತಿಯೊಬ್ಬ ಅಧಿಕಾರಿಯೂ ಸಹ ಹಿಂದೇ ಶ್ರಮಿಸಿದ ಹಾಗೆಯೇ 24 ಗಂಟೆಗಳ ಕಾಲ ಕೆಲಸ ಮಾಡುವ ಮೂಲಕ ಕೊರೊನಾ ಹಾವಳಿ ತಡೆಗಟ್ಟಬೇಕು ಎಂದು ಸೂಚಿಸಿದರು.
ಮದುವೆ ಸಮಾರಂಭಕ್ಕೆ ಕಡ್ಡಾಯವಾಗಿ ಪಾಸ್ ಪಡೆದುಕೊಳ್ಳಬೇಕು. ಒಳ ಪ್ರದೇಶದಲ್ಲಿ 50 ಜನರು, ಹೊರ ಪ್ರದೇಶದಲ್ಲಿ 100 ಜನರಿಗೆ ಅವಕಾಶ ನೀಡಲಾಗಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮದುವೆಗಳಿಗೆ ಕಡ್ಡಾಯವಾಗಿ ತಹಶೀಲ್ ಕಚೇರಿಯಲ್ಲಿ ಅನುಮತಿ ಪಡೆಯಬೇಕು. ಒಂದು ವೇಳೆ ಈ ಎಲ್ಲ ನಿಯಮಗಳನ್ನು ಉಲ್ಲಂಘನೆಯಾದಲ್ಲಿ ಮಧು ಮಗನ ಕಡೆಯವರಿಂದ 10 ಸಾವಿರ ರೂ. ದಂಡ ಹಾಗೂ ಮಧು ಮಗಳ ಕಡೆಯವರಿಂದ 10 ಸಾವಿರ ರೂ. ದಂಡ ವಸೂಲಿ ಮಾಡಿ ಕಲ್ಯಾಣ ಮಂಟಪ ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಹಾಕಿಕೊಳ್ಳಬೇಕು. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಹಾಕಲಾಗುವುದು. 18 ವರ್ಷದ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಕೂಡಲೇ ಲಸಿಕೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೊರೊನಾ ಸೋಂಕಿತರಿಗೆ ವಸತಿ ನಿಲಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಶಾಸಕ ಪ್ರಿಯಾಂಕ್ ಖರ್ಗೆ ಅವರು ಮೊದಲನೇಯ ಕೊರೊನಾ ಸಂದರ್ಭದಲ್ಲಿ ನೀಡಿದ ಬೆಡ್‍ಗಳನ್ನು ಬಳಸಿಕೊಳ್ಳಲಾಗುವುದು. ನಾಲ್ಕು ಗ್ರಾಮ ಪಂಚಾಯಿತಿಗಳಿಗೆ ಒಬ್ಬರಂತೆ ಹಾಗೂ ಪುರಸಭೆ ನಾಲ್ಕು ವಾರ್ಡ್‍ಗಳಿಗೆ ಒಬ್ಬರಂತೆ ಸೇಕ್ಟರ್ ಮ್ಯಾಜೀಸ್ಟ್ರೇಟ್‍ಗಳ ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕಿನಲ್ಲಿ ಯಾವುದೇ ರೀತಿಯ ಜಾತ್ರೆ ಹಾಗೂ ರಥೋತ್ಸವ, ಉರುಸ್‍ಗಳನ್ನು ಮಾಡಬಾರದು ಎಂದರು.
ಪ್ರೋಬೇಷನರಿ ತಹಶೀಲ್ದಾರ್ ಕೆ. ಶೃತಿ, ತಾಪಂ ಇಒ ನೀಲಗಂಗಾ ಬಬಲಾದ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸಿಪಿಐ ಕೃಷ್ಣಪ್ಪ ಕಲ್ಲದೇವರು, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಪಾಟೀಲ್, ಶ್ರೀಧರ್, ಅಣ್ಣೇಪ್ಪ ಕುದರಿ, ಸಿದ್ದವೀರಯ್ಯ ದುದ್ನೂರ, ಸಂಜೀವಕುಮಾರ ಮಾನಕರ್, ರಾಜಕುಮಾರ ರಾಠೋಡ, ಸಂತೋಷ, ಸಂತೋಷ ಶಿರನಾಳ ಸೇರಿದಂತೆ ಇತರರು ಇದ್ದರು.