Shubhashaya News

SBI ಗ್ರಾಹಕರ ಗಮನಕ್ಕೆ : ಇಂದು 45 ನಿಮಿಷ ಬ್ಯಾಂಕಿಂಗ್ ಸೇವೆ ಸ್ಥಗಿತ ; ATM ನಿಯಮ, ಶುಲ್ಕದ ಸಂಪೂರ್ಣ ವಿವರ ಇಲ್ಲಿದೆ!

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ತಾಂತ್ರಿಕ ನಿರ್ವಹಣಾ ಚಟುವಟಿಕೆಯ ಹಿನ್ನೆಲೆಯಲ್ಲಿ ಇಂದು (ನವೆಂಬರ್ 19, 2026, ಗುರುವಾರ) ತನ್ನ ಪ್ರಮುಖ ಡಿಜಿಟಲ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳನ್ನು 45 ನಿಮಿಷಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ನೆಟ್ ಬ್ಯಾಂಕಿಂಗ್, YONO ಅಪ್ಲಿಕೇಶನ್, IMPS, NEFT, RTGS ಮತ್ತು UPI ಸೇರಿದಂತೆ ದೈನಂದಿನ ಹಣಕಾಸು ವಹಿವಾಟು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬ್ಯಾಂಕ್ ತಿಳಿಸಿದೆ.

ನಿಗದಿತ ನಿರ್ವಹಣಾ ಕಾರ್ಯದ ಕಾರಣದಿಂದಾಗಿ ಸೇವೆಗಳ ಸ್ಥಗಿತಗೊಳ್ಳುವ ಸಮಯವು ವಿಭಿನ್ನವಾಗಿದೆ. ಇಂದು ಮಧ್ಯರಾತ್ರಿ 12:45 ರಿಂದ 01:30 ರವರೆಗೆ RTGS ಸೇವೆಗಳು, 01:15 ರಿಂದ 01:45 ರವರೆಗೆ ಇಂಟರ್ನೆಟ್ ಬ್ಯಾಂಕಿಂಗ್, YONO, YONO ಲೈಟ್ ಮತ್ತು IMPS ಸೇವೆಗಳು ಲಭ್ಯವಿರುವುದಿಲ್ಲ. ಹಾಗೆಯೇ, ಮುಂಜಾನೆ 01:55 ರಿಂದ 02:40 ರವರೆಗೆ NEFT ಸೇವೆಗಳು ಮತ್ತು 01:45 ರಿಂದ 02:45 ರವರೆಗೆ ಎಟಿಎಂ ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ.

ಇಂದು ಮುಂಜಾನೆ 01:15 ರಿಂದ 02:00 ಗಂಟೆಯವರೆಗೆ (IST) ಎಸ್‌ಬಿಐ ಯುಪಿಐ (UPI) ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ. ಆದಾಗ್ಯೂ, ನಿರ್ವಹಣಾ ಕಾರ್ಯವನ್ನು ನಿಗದಿತ ಸಮಯಕ್ಕಿಂತ ಮೊದಲೇ ಪೂರ್ಣಗೊಳಿಸುವ ಸಾಧ್ಯತೆಯಿದ್ದು, ಗ್ರಾಹಕರಿಗೆ ಉಂಟಾಗುವ ಅನಾನುಕೂಲತೆಗೆ ಬ್ಯಾಂಕ್ ವಿಷಾದ ವ್ಯಕ್ತಪಡಿಸಿದೆ. ತುರ್ತು ಸಂದರ್ಭಗಳಲ್ಲಿ ನಿರಂತರ ಪಾವತಿ ಸೇವೆಗಾಗಿ ಗ್ರಾಹಕರು ‘ಯುಪಿಐ ಲೈಟ್’ (UPI Lite) ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ಎಸ್‌ಬಿಐ ಸಲಹೆ ನೀಡಿದೆ.

ಯುಪಿಐ ಲೈಟ್ ಮೂಲಕ ಗ್ರಾಹಕರು ಯಾವುದೇ ಯುಪಿಐ ಪಿನ್ ನಮೂದಿಸದೆಯೇ ಪ್ರತಿ ವಹಿವಾಟಿಗೆ ರೂ. 1,000 ವರೆಗಿನ ಸಣ್ಣ ಮೌಲ್ಯದ ಪಾವತಿಗಳನ್ನು ಸುಲಭವಾಗಿ ಮಾಡಬಹುದು. ಇದಕ್ಕಾಗಿ ಗ್ರಾಹಕರು ತಮ್ಮ ಖಾತೆಯಲ್ಲಿ ರೂ. 5,000 ವರೆಗೆ ಬ್ಯಾಲೆನ್ಸ್ ಕಾಯ್ದುಕೊಳ್ಳಬಹುದು (ಸಾಮಾನ್ಯ ಯುಪಿಐ ದಿನದ ಮಿತಿ ರೂ. 1 ಲಕ್ಷವಾಗಿದೆ). YONO SBI ಅಥವಾ BHIM SBI Pay ಅಪ್ಲಿಕೇಶನ್ ತೆರೆದು, ಯುಪಿಐ ಲೈಟ್ ವಿಭಾಗಕ್ಕೆ ಹೋಗಿ ನಿಗದಿತ ಮೊತ್ತವನ್ನು ಲೋಡ್ ಮಾಡುವ ಮೂಲಕ ಈ ಸೇವೆಯನ್ನು ತಕ್ಷಣವೇ ಸಕ್ರಿಯಗೊಳಿಸಬಹುದು.

ಇದೇ ವೇಳೆ, ಬ್ಯಾಂಕ್ ಶಾಖೆ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ಮಾಡುವ NEFT ವಹಿವಾಟು ಶುಲ್ಕಗಳ ವಿವರವೂ ಮಹತ್ವದ್ದಾಗಿದೆ. ರೂ. 10,000 ವರೆಗಿನ ವಹಿವಾಟಿಗೆ ಶಾಖೆಯಲ್ಲಿ ರೂ. 2.50 ಮತ್ತು ಮೊಬೈಲ್ ಮೂಲಕ ರೂ. 2 ಶುಲ್ಕವಿದ್ದರೆ, ರೂ. 10,001 ರಿಂದ ರೂ. 1 ಲಕ್ಷದವರೆಗೆ ಶಾಖೆಯಲ್ಲಿ ರೂ. 5 ಹಾಗೂ ಮೊಬೈಲ್‌ನಲ್ಲಿ ರೂ. 4 ಶುಲ್ಕ ವಿಧಿಸಲಾಗುತ್ತದೆ. ರೂ. 1 ಲಕ್ಷದಿಂದ ರೂ. 2 ಲಕ್ಷದವರೆಗೆ ಶಾಖೆಯಲ್ಲಿ ರೂ. 15 (ಮೊಬೈಲ್‌ನಲ್ಲಿ ರೂ. 12) ಮತ್ತು ರೂ. 2 ಲಕ್ಷಕ್ಕಿಂತ ಹೆಚ್ಚಿನ ವಹಿವಾಟಿಗೆ ಶಾಖೆಯಲ್ಲಿ ಗರಿಷ್ಠ ರೂ. 25 (ಮೊಬೈಲ್‌ನಲ್ಲಿ ರೂ. 20) ಶುಲ್ಕ ಅನ್ವಯವಾಗುತ್ತದೆ.

ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಬಳಸುವ RTGS ವಹಿವಾಟುಗಳಿಗೆ ಎರಡು ಹಂತದ ಶುಲ್ಕಗಳನ್ನು ನಿಗದಿಪಡಿಸಲಾಗಿದೆ. ಎಸ್‌ಬಿಐ ಶಾಖೆಗೆ ಭೇಟಿ ನೀಡಿ ರೂ. 2 ಲಕ್ಷದಿಂದ ರೂ. 5 ಲಕ್ಷದವರೆಗೆ ಆರ್‌ಟಿಜಿಎಸ್ ಮಾಡಿದರೆ ರೂ. 25 ಮತ್ತು ರೂ. 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ರೂ. 50 ಶುಲ್ಕ ವಿಧಿಸಲಾಗುತ್ತದೆ. ಆದರೆ, ಮೊಬೈಲ್ ಬ್ಯಾಂಕಿಂಗ್ ಮೂಲಕ ಈ ವಹಿವಾಟುಗಳನ್ನು ನಡೆಸಿದರೆ ಕ್ರಮವಾಗಿ ರೂ. 20 ಮತ್ತು ರೂ. 40 ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ.

ಮತ್ತೊಂದೆಡೆ, ಕಳೆದ ತಿಂಗಳಷ್ಟೇ ಎಸ್‌ಬಿಐ ತನ್ನ ಎಟಿಎಂ ವಹಿವಾಟು ನಿಯಮಗಳನ್ನು ಪರಿಷ್ಕರಿಸಿದೆ. ಹೊಸ ನಿಯಮದ ಪ್ರಕಾರ, ಎಸ್‌ಬಿಐ ಸಂಬಳ ಪ್ಯಾಕೇಜ್ (Salary Package) ಖಾತೆದಾರರಿಗೆ ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ನೀಡಲಾಗುತ್ತಿದ್ದ ಉಚಿತ ಮಾಸಿಕ ವಹಿವಾಟುಗಳ ಮಿತಿಯನ್ನು ಹಿಂದಿನ 10 ರಿಂದ ತಿಂಗಳಿಗೆ 5 ವಹಿವಾಟುಗಳಿಗೆ ಇಳಿಸಲಾಗಿದೆ. ಈ ಮಿತಿಯು ಹಣಕಾಸು ಮತ್ತು ಹಣಕಾಸೇತರ ಎರಡೂ ವಹಿವಾಟುಗಳಿಗೆ ಅನ್ವಯಿಸುತ್ತದೆ.

ನಿಗದಿತ 5 ಉಚಿತ ವಹಿವಾಟುಗಳ ಮಿತಿಯನ್ನು ಮೀರಿದ ನಂತರ, ಸಾಮಾನ್ಯ ಮತ್ತು ಸಂಬಳ ಪ್ಯಾಕೇಜ್ ಖಾತೆದಾರರಿಬ್ಬರೂ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಉಚಿತ ಮಿತಿಯ ನಂತರ ಪ್ರತಿ ನಗದು ಹಿಂಪಡೆಯುವಿಕೆಗೆ ರೂ. 23 ಹಾಗೂ ಜಿಎಸ್‌ಟಿ (GST) ಶುಲ್ಕ ವಿಧಿಸಲಾಗುತ್ತದೆ. ಅದೇ ರೀತಿ, ಮಿತಿಯ ನಂತರದ ಪ್ರತಿ ಹಣಕಾಸೇತರ (Non-financial) ಎಟಿಎಂ ವಹಿವಾಟಿಗೆ ಗ್ರಾಹಕರು ರೂ. 11 ಜೊತೆಗೆ ಜಿಎಸ್‌ಟಿ ಪಾವತಿಸುವುದು ಕಡ್ಡಾಯವಾಗಿದೆ.

 

Leave A Reply

Your email address will not be published.