Shubhashaya News

KPSC ಬಳಿಕ KAS ನಲ್ಲೂ ಭಾರಿ ಅಕ್ರಮ : ಮಕ್ಕಳ ಕೆಎಎಸ್ ಹುದ್ದೆಗೆ ಐಪಿಎಸ್ ಅಧಿಕಾರಿಯಿಂದ 2 ಕೋಟಿ ರೂ. ಡೀಲ್!

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸುತ್ತಿರುವ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ರಾಜ್ಯದ ಐಪಿಎಸ್ ಅಧಿಕಾರಿ ಎಂ.ವಿ. ಚಂದ್ರಕಾಂತ್ ಅವರ ಇಬ್ಬರು ಹೆಣ್ಣುಮಕ್ಕಳಿಗೆ ಕೆಎಎಸ್ (KAS) ಹುದ್ದೆ ಕೊಡಿಸಲು ಬರೋಬ್ಬರಿ 2 ಕೋಟಿ ರೂ. ಡೀಲ್ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಬಂಧಿತನಾಗಿರುವ ಮಧ್ಯವರ್ತಿ ಬಸವರಾಜ ಕನ್ನಾಳೆ, ಇ.ಡಿ ವಿಚಾರಣೆ ವೇಳೆ ಈ ಇಡೀ ವ್ಯವಹಾರದ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ.

ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಕೆಎಎಸ್ ಸಂದರ್ಶನದ ವೇಳಾಪಟ್ಟಿ ಪ್ರಕಟಿಸುವ ಮುನ್ನ ನನ್ನನ್ನು ಸಂಪರ್ಕಿಸಿ, ಐಪಿಎಸ್ ಅಧಿಕಾರಿ ಎಂ.ವಿ. ಚಂದ್ರಕಾಂತ್ ಅವರ ಮನೆಗೆ ತೆರಳಿ 2 ಕೋಟಿ ರೂ. ನಗದು ಸಂಗ್ರಹಿಸಿ ತರುವಂತೆ ಸೂಚಿಸಿದ್ದರು ಎಂದು ಕನ್ನಾಳೆ ಹೇಳಿಕೆ ನೀಡಿದ್ದಾನೆ. ಅದರಂತೆ ಹಣ ಸಂಗ್ರಹಿಸಿ ಗಂಗ್ವಾರ್ ಅವರಿಗೆ ತಲುಪಿಸಿದ್ದೆ. ಚಂದ್ರಕಾಂತ್ ಅವರ ಇಬ್ಬರು ಪುತ್ರಿಯರಿಗೆ ಕೆಎಎಸ್ ಸಂದರ್ಶನದಲ್ಲಿ ಹೆಚ್ಚಿನ ಅಂಕಗಳನ್ನು ನೀಡಲು ಈ ಮುಂಗಡ ಹಣವನ್ನು ಪಡೆಯಲಾಗಿತ್ತು ಹಾಗೂ ಇದನ್ನು ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಹಸ್ತಾಂತರಿಸಬೇಕಿತ್ತು ಎಂದು ಗಂಗ್ವಾರ್ ತಿಳಿಸಿದ್ದಾಗಿ ಕನ್ನಾಳೆ ವಿವರಿಸಿದ್ದಾನೆ.

ಆದರೆ, ದುರದೃಷ್ಟವಶಾತ್ ಐಪಿಎಸ್ ಅಧಿಕಾರಿಯ ಇಬ್ಬರು ಹೆಣ್ಣುಮಕ್ಕಳ ಪೈಕಿ ಒಬ್ಬರು ಕೆಎಎಸ್ ಸಂದರ್ಶನಕ್ಕೆ ಅರ್ಹತೆಯನ್ನೇ ಪಡೆಯಲಿಲ್ಲ. ಈ ವಿಚಾರವಾಗಿ ಐಪಿಎಸ್ ಅಧಿಕಾರಿ ಚಂದ್ರಕಾಂತ್ ಮತ್ತು ಅವರ ಪತ್ನಿ ತನಗೆ ವಾಟ್ಸಾಪ್ ಕರೆ ಮಾಡಿ ಮಾತನಾಡಿದ್ದರು ಎಂದು ಕನ್ನಾಳೆ ಇ.ಡಿ ಅಧಿಕಾರಿಗಳ ಮುಂದೆ ತಿಳಿಸಿದ್ದಾನೆ. 2019ರಲ್ಲಿ ಗಂಗ್ವಾರ್ ಬೀದರ್ ಜಿಪಂ ಸಿಇಒ ಆಗಿದ್ದಾಗ ಪರಿಚಯವಾಗಿ, ಬಳಿಕ ಆಪ್ತ ಸ್ನೇಹ ಬೆಳೆದಿತ್ತು. ನಂತರ ಆನಂದರಾವ್ ವೃತ್ತದ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ಪ್ರತ್ಯೇಕ ಖಾತೆ ತೆರೆದು ಗಂಗ್ವಾರ್ ಅವರ ಹಣಕಾಸು ವಹಿವಾಟನ್ನು ತಾನೇ ನಿರ್ವಹಿಸುತ್ತಿದ್ದೆ ಎಂದು ಕನ್ನಾಳೆ ಒಪ್ಪಿಕೊಂಡಿದ್ದಾನೆ.

ಇದಷ್ಟೇ ಅಲ್ಲದೆ, ಗಂಗ್ವಾರ್ ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ನಡೆದ ಪಿಡಿಒ (ಹೈ-ಕ), ಕಿರಿಯ ಅಭಿಯಂತರ (ಜೆಇ), ಕೃಷಿ ಅಧಿಕಾರಿ ಮತ್ತು ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಗಳಲ್ಲಿ ತಾನು ಶಿಫಾರಸು ಮಾಡಿದ ಅಭ್ಯರ್ಥಿಗಳಿಗೆ ಕೀ ಉತ್ತರಗಳನ್ನು ಒದಗಿಸಲಾಗಿತ್ತು ಎಂದು ಕನ್ನಾಳೆ ಸ್ಫೋಟಕ ಮಾಹಿತಿ ನೀಡಿದ್ದಾನೆ. ಗಂಗ್ವಾರ್ ಮತ್ತು ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಆಪ್ತರಾಗಿದ್ದು, ನೇಮಕಾತಿ ಅಕ್ರಮಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ. ತಾನು ಗಂಗ್ವಾರ್ ಅವರಿಗೆ ಸೇರಿದ ಸುಮಾರು 15 ಕೋಟಿ ರೂ. ಹಣವನ್ನು ನಿರ್ವಹಿಸಿದ್ದಾಗಿ ಬಸವರಾಜ ಕನ್ನಾಳೆ ಇ.ಡಿ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ ಎಂದು ಉನ್ನತ ಮೂಲಗಳು ತಿಳಿಸಿವೆ.

 

Leave A Reply

Your email address will not be published.