ಆಸ್ಪತ್ರೆಯ ಬಿಳಿಯ ಗೋಡೆಯ ಕಾರಿಡಾರಿನಲ್ಲಿ ಕೈಯಲ್ಲೊಂದು ವೈದ್ಯಕೀಯ ವರದಿ ಹಿಡಿದು ಕುಳಿತ ವ್ಯಕ್ತಿಯ ಕಣ್ಣುಗಳನ್ನು ಒಮ್ಮೆ ಗಮನಿಸಿ. ಅಲ್ಲಿರುವ ಆತಂಕ ಇಡೀ ಬದುಕಿನ ದಿಕ್ಕನ್ನೇ ಬದಲಿಸಿಬಿಡುವಷ್ಟು ತೀವ್ರವಾಗಿರುತ್ತದೆ. ವೈದ್ಯರ ಬಾಯಿಂದ ಹೊರಡುವ ‘ಕ್ಯಾನ್ಸರ್’ ಎಂಬ ಮೂರೇ ಅಕ್ಷರದ ಪದವೊಂದು ಮನುಷ್ಯನ ಉತ್ಸಾಹವನ್ನೇ ಉಡುಗಿಸಿಬಿಡುತ್ತದೆ. ಇಂದಿಗೂ ನಮ್ಮ ಸಮಾಜದಲ್ಲಿ ಈ ಹೆಸರನ್ನು ಕೇಳಿದಾಕ್ಷಣ ಸಾವಿನ ಕರಿನೆರಳು ಕಣ್ಣಮುಂದೆ ಸುಳಿದುಹೋಗುತ್ತದೆ. ಭಯವೆಂಬುದೇ ಅರ್ಧ ಕಾಯಿಲೆ! ಪ್ರತಿವರ್ಷ ನವೆಂಬರ್ ಏಳರಂದು ಆಚರಿಸುವ ‘ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ’ವು ನಮ್ಮೊಳಗಿನ ಈ ಅಜ್ಞಾನದ ಕತ್ತಲನ್ನು ಓಡಿಸಿ, ಅರಿವಿನ ದೀವಿಗೆಯನ್ನು ಹಚ್ಚುವ ಮಹತ್ವದ ಉದ್ದೇಶವನ್ನು ಹೊಂದಿದೆ.
ಮನುಷ್ಯನ ದೇಹವೆಂಬುದು ಕೋಟ್ಯಂತರ ಜೀವಕೋಶಗಳ ಒಂದು ಸುಂದರ ಗಣರಾಜ್ಯ. ಪ್ರತಿಯೊಂದು ಜೀವಕೋಶವೂ ಹುಟ್ಟುತ್ತದೆ, ತನ್ನ ಪಾಲಿನ ಕೆಲಸ ಮಾಡುತ್ತದೆ ಮತ್ತು ಸಮಯ ಬಂದಾಗ ಮೌನವಾಗಿ ಮರೆಯಾಗಿ ಹೊಸ ಕೋಶಕ್ಕೆ ಜಾಗ ಮಾಡಿಕೊಡುತ್ತದೆ. ಈ ಪ್ರಕೃತಿ ನಿಯಮವನ್ನು ಮೀರಿ ಜೀವಕೋಶವೊಂದು ತನಗೆ ಸಾವೇ ಇಲ್ಲವೆಂಬಂತೆ ಅಡ್ಡಾದಿಡ್ಡಿಯಾಗಿ ಬೆಳೆಯಲು ಶುರುಮಾಡಿದಾಗ ಅಲ್ಲಿ ಹುಟ್ಟುವುದೇ ಕ್ಯಾನ್ಸರ್! ತನ್ನದೇ ದೇಹದ ಭಾಗವೊಂದು ತನ್ನ ವಿರುದ್ಧವೇ ಸಾರುವ ಆಂತರಿಕ ದಂಗೆಯಿದು. ವೈದ್ಯಕೀಯ ಇತಿಹಾಸಕಾರ ಸಿದ್ಧಾರ್ಥ ಮುಖರ್ಜಿ ತಮ್ಮ ಜಗದ್ವಿಖ್ಯಾತ ‘ದಿ ಎಂಪರರ್ ಆಫ್ ಆಲ್ ಮ್ಯಾಲಡೀಸ್’ (The Emperor of All Maladies) ಕೃತಿಯಲ್ಲಿ ಕ್ಯಾನ್ಸರ್ ಅನ್ನು ಎಲ್ಲ ರೋಗಗಳ ಚಕ್ರವರ್ತಿ ಎಂದು ಕರೆದಿದ್ದಾರೆ. ಶತಮಾನಗಳಿಂದ ಮನುಷ್ಯನ ಬುದ್ಧಿಮತ್ತೆಗೆ ಸವಾಲು ಹಾಕುತ್ತಾ ಬಂದಿರುವ ಈ ರೋಗವು ನಮ್ಮದೇ ಜೀವಕೋಶಗಳ ವಿಕೃತ ರೂಪಾಂತರವಾಗಿದೆ.
ನವೆಂಬರ್ ಏಳರಂದೇ ಭಾರತದಲ್ಲಿ ಈ ಜಾಗೃತಿ ದಿನವನ್ನು ಆಚರಿಸುವುದರ ಹಿಂದೆ ಒಂದು ಸ್ಫೂರ್ತಿದಾಯಕ ಇತಿಹಾಸವಿದೆ. 1867ರ ಇದೇ ದಿನದಂದು ಪೋಲೆಂಡ್ ದೇಶದಲ್ಲಿ ಜನಿಸಿದ ಮೇರಿ ಕ್ಯೂರಿ ಮುಂದೆ ವಿಜ್ಞಾನ ಲೋಕದ ಧ್ರುವತಾರೆಯಾಗಿ ಬೆಳೆದರು. ಪ್ಯಾರಿಸ್ನ ಸೋರುತಿರುವ ಚಾವಣಿಯ ಪ್ರಯೋಗಾಲಯದಲ್ಲಿ ನಿಂತು, ಟನ್ಗಟ್ಟಲೆ ಖನಿಜವನ್ನು ಕುದಿಸಿ ‘ರೇಡಿಯಂ’ ಮತ್ತು ‘ಪೊಲೊನಿಯಂ’ ಮೂಲಧಾತುಗಳನ್ನು ಶೋಧಿಸಿದ ಅವರ ಸಾಹಸ ರೋಮಾಂಚಕಾರಿಯಾದುದು. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಎರಡರಲ್ಲೂ ನೊಬೆಲ್ ಪ್ರಶಸ್ತಿ ಪಡೆದ ಆ ಮಹಾನ್ ವಿಜ್ಞಾನಿ ಕಂಡುಹಿಡಿದ ವಿಕಿರಣಶೀಲತೆಯೇ (Radioactivity) ಇಂದು ಕ್ಯಾನ್ಸರ್ ಚಿಕಿತ್ಸೆಯ ಪ್ರಬಲ ಅಸ್ತ್ರವಾದ ‘ರೇಡಿಯೇಷನ್ ಥೆರಪಿ’ಗೆ ಮೂಲಾಧಾರವಾಯಿತು! ವಿಜ್ಞಾನದ ಸಂಶೋಧನೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಮೇರಿ ಕ್ಯೂರಿಯವರ ಜನ್ಮದಿನವು ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಸದಾ ಪ್ರೇರಣೆ ನೀಡುತ್ತದೆ. 2014ರಲ್ಲಿ ಭಾರತ ಸರ್ಕಾರವು ಈ ದಿನವನ್ನು ಅಧಿಕೃತವಾಗಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವೆಂದು ಘೋಷಿಸಿತು.
ಭಾರತದಲ್ಲಿ ಇಂದು ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಬಾಯಿ, ಶ್ವಾಸಕೋಶ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ಗಳು ನಮ್ಮ ಜನರನ್ನು ಹೆಚ್ಚಾಗಿ ಬಾಧಿಸುತ್ತಿವೆ. ನಮ್ಮ ಬದಲಾದ ಜೀವನಶೈಲಿಯೇ ಇದಕ್ಕೆ ಪ್ರಮುಖ ಕಾರಣ. ಗುಟ್ಕಾ, ತಂಬಾಕು, ಧೂಮಪಾನ ಮತ್ತು ಮದ್ಯಪಾನದ ಚಟಗಳು ಯುವಜನತೆಯ ಬದುಕನ್ನು ಒಳಗಿನಿಂದಲೇ ಕೊರೆಯುತ್ತಿವೆ. ಸಂಸ್ಕರಿಸಿದ ಆಹಾರ, ರಾಸಾಯನಿಕಗಳ ಅತಿಯಾದ ಬಳಕೆ, ವಾಯುಮಾಲಿನ್ಯ ಹಾಗೂ ದೈಹಿಕ ಶ್ರಮವಿಲ್ಲದ ಬದುಕು ದೇಹದ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತಿವೆ. ಗ್ರಾಮೀಣ ಭಾಗದಲ್ಲಂತೂ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಾಗ ಆಸ್ಪತ್ರೆಗೆ ಹೋಗುವ ಬದಲು ನಿರ್ಲಕ್ಷ್ಯ ತೋರುವುದು ಅಥವಾ ಮೌಢ್ಯಕ್ಕೆ ಮೊರೆ ಹೋಗುವುದು ರೋಗವು ಕೊನೆಯ ಹಂತ ತಲುಪಲು ಕಾರಣವಾಗುತ್ತಿದೆ.
ವೈದ್ಯಕೀಯ ವಿಜ್ಞಾನವು ಇಂದು ಅಸಾಧಾರಣ ಪ್ರಗತಿ ಸಾಧಿಸಿದೆ. ಕ್ಯಾನ್ಸರ್ ಎಂದರೆ ಖಂಡಿತವಾಗಿಯೂ ಸಾವಿನ ತೀರ್ಪು ಎಂಬ ಕಾಲ ಈಗ ಹಿಂದಕ್ಕೆ ಸರಿದಿದೆ. ಮೊದಲ ಹಂತದಲ್ಲೇ ರೋಗವನ್ನು ಪತ್ತೆಹಚ್ಚಿದರೆ ಶೇಕಡಾ ಎಂಬತ್ತಕ್ಕೂ ಹೆಚ್ಚು ಕ್ಯಾನ್ಸರ್ಗಳನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಕಿಮೊಥೆರಪಿ, ಇಮ್ಯುನೊಥೆರಪಿ, ಟಾರ್ಗೆಟೆಡ್ ಥೆರಪಿ ಹಾಗೂ ರೋಬೋಟಿಕ್ ಶಸ್ತ್ರಚಿಕಿತ್ಸೆಗಳು ಲಕ್ಷಾಂತರ ರೋಗಿಗಳಿಗೆ ಮರುಜನ್ಮ ನೀಡುತ್ತಿವೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಇಂದು ಲಸಿಕೆಗಳೂ ಲಭ್ಯವಿವೆ. ಕ್ರಿಕೆಟಿಗ ಯುವರಾಜ್ ಸಿಂಗ್, ನಟಿ ಮನೀಷಾ ಕೊಯಿರಾಲಾ ಅವರಂತಹ ಅನೇಕರು ಈ ಕಾಯಿಲೆಯನ್ನು ಗೆದ್ದು ಬಂದು ಮತ್ತೆ ತಮ್ಮ ಕ್ಷೇತ್ರಗಳಲ್ಲಿ ಮಿಂಚಿರುವುದು ಕಣ್ಣಮುಂದಿರುವ ಜೀವಂತ ಸಾಕ್ಷಿ.
ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆ ಬಾರದಂತೆ ಎಚ್ಚರ ವಹಿಸುವುದೇ ಜಾಣತನ. ದೇಹದಲ್ಲಿ ಕಾಣಿಸಿಕೊಳ್ಳುವ ಅಸಹಜ ಗಡ್ಡೆಗಳು, ವಾಸಿಯಾಗದ ಹುಣ್ಣುಗಳು, ಕಾರಣವಿಲ್ಲದೆ ತೂಕ ಇಳಿಯುವುದು ಅಥವಾ ನಿರಂತರ ಕೆಮ್ಮಿನಂತಹ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ನಿಯಮಿತ ವೈದ್ಯಕೀಯ ತಪಾಸಣೆಯು ನಮ್ಮ ಬದುಕಿನ ಭಾಗವಾಗಬೇಕು. ಸರ್ಕಾರವು ಸಹ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕ್ಯಾನ್ಸರ್ ತಪಾಸಣಾ ಕೇಂದ್ರಗಳನ್ನು ಬಲಪಡಿಸಿ, ಬಡವರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಸಿಗುವಂತೆ ಮಾಡುವ ತುರ್ತು ಅಗತ್ಯವಿದೆ.
ಕ್ಯಾನ್ಸರ್ ವಿರುದ್ಧದ ಹೋರಾಟವು ಆಸ್ಪತ್ರೆಯ ಪ್ರಯೋಗಾಲಯದಿಂದ ಶುರುವಾಗುವ ಮುನ್ನ ನಮ್ಮ ಅಡುಗೆಮನೆಯಿಂದ ಮತ್ತು ನಮ್ಮ ದಿನಚರಿಯಿಂದ ಶುರುವಾಗಬೇಕು. ತಂಬಾಕಿನ ಚೀಟಿಯನ್ನು ಕಸದ ಬುಟ್ಟಿಗೆ ಎಸೆದಾಗ, ತಾಜಾ ಹಣ್ಣು-ತರಕಾರಿಗಳ ಸಾತ್ವಿಕ ಆಹಾರವನ್ನು ಅಪ್ಪಿಕೊಂಡಾಗ, ನಿತ್ಯವೂ ಬೆವರು ಸುರಿಸಿ ವ್ಯಾಯಾಮ ಮಾಡಿದಾಗ ನಮ್ಮ ದೇಹದ ಜೀವಕೋಶಗಳು ನಲಿಯುತ್ತವೆ. ರೋಗಿಯೊಬ್ಬನಿಗೆ ನಾವು ನೀಡುವ ಆತ್ಮವಿಶ್ವಾಸದ ನಗು ಮತ್ತು ಭರವಸೆಯ ಮಾತು ಯಾವುದೇ ಔಷಧಿಗಿಂತಲೂ ದೊಡ್ಡ ಶಕ್ತಿಯನ್ನು ತುಂಬುತ್ತದೆ. ಆರೋಗ್ಯವಂತ ದೇಹ ಮತ್ತು ಜಾಗೃತ ಮನಸ್ಸೇ ಕ್ಯಾನ್ಸರ್ ವಿರುದ್ಧ ನಾವು ಕಟ್ಟಬಹುದಾದ ಅತ್ಯಂತ ಭದ್ರವಾದ ಕೋಟೆ!
ಶಿವರಾಜ ಸೂ. ಸಣಮನಿ, ಮದಗುಣಕಿ