Shubhashaya News

ಬೆಳಗಾವಿ ಚಳಿಗಾಲದ ಅಧಿವೇಶನ ದಿನಾಂಕ ಬದಲು : ಡಿ.2ರಿಂದ 11ರವರೆಗೆ ನಡೆಸಲು ಸಂಪುಟ ಸಭೆ ತೀರ್ಮಾನ

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ದಿನಾಂಕವನ್ನು ಸಚಿವ ಸಂಪುಟ ಸಭೆಯಲ್ಲಿ ಪರಿಷ್ಕರಿಸಲಾಗಿದೆ. ಈ ಮೊದಲು ನವೆಂಬರ್ 30 ರಿಂದ ಡಿಸೆಂಬರ್ 11 ರವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಗುರುವಾರ ನಡೆದ ಸಂಪುಟ ಸಭೆಯಲ್ಲಿ ನವೆಂಬರ್ 30 ರ ಬದಲು ಡಿಸೆಂಬರ್ 2 ರಿಂದ ಡಿಸೆಂಬರ್ 11 ರವರೆಗೆ ಅಧಿವೇಶನವನ್ನು ನಡೆಸಲು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಈ ಹೊಸ ನಿರ್ಧಾರದಿಂದಾಗಿ ಬೆಳಗಾವಿ ಅಧಿವೇಶನದ ಅವಧಿಯನ್ನು ಎರಡು ದಿನಗಳ ಕಾಲ ಕಡಿತಗೊಳಿಸಿದಂತಾಗಿದೆ.

ಕರಾವಳಿ ಹಾಗೂ ಐತಿಹಾಸಿಕ ಕ್ಷೇತ್ರಗಳ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ ಪ್ರಸಿದ್ಧ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಪಿಪಿಪಿ (PPP) ಮಾದರಿಯಲ್ಲಿ ಹಾಗೂ ಡಿಬಿಎಫ್‌ಒಟಿ (DBFOT) ಆಧಾರದಲ್ಲಿ ಬಹುಮಹಡಿ ವಾಹನ ನಿಲುಗಡೆ (ಮಲ್ಟಿ-ಲೆವೆಲ್ ಪಾರ್ಕಿಂಗ್) ಸೌಲಭ್ಯ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ.

ಮತ್ತೊಂದೆಡೆ, ಐತಿಹಾಸಿಕ ಹಾಗೂ ಪುರಾತತ್ವ ಮಹತ್ವ ಹೊಂದಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ‘ಸನ್ನತಿ’ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ‘ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2026’ಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಬೆಂಗಳೂರು ಟರ್ಫ್ ಕ್ಲಬ್‌ಗೆ ನೀಡಲಾಗಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ 4 ಎಕರೆ ಜಾಗದ ಗುತ್ತಿಗೆ ಅವಧಿ (30 ವರ್ಷ) ಹಾಗೂ ಗುತ್ತಿಗೆ ಮೊತ್ತವನ್ನು ಪರಿಷ್ಕರಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.

ಇದರೊಂದಿಗೆ, ರಾಜ್ಯದ ಮೂಲಸೌಕರ್ಯ ವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಕೆಎಸ್‌ಐಐಪಿ-IV (KSHIP-IV) ಯೋಜನೆಯಡಿ ಒಟ್ಟು 780.20 ಕಿ.ಮೀ ಉದ್ದದ 10 ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಹಣಕಾಸಿನ ನೆರವಿನೊಂದಿಗೆ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ.

ಆರೋಗ್ಯ ರಂಗದಲ್ಲೂ ಆಧುನಿಕ ತಂತ್ರಜ್ಞಾನ ಹಾಗೂ ಜಾಗೃತಿ ಚಟುವಟಿಕೆಗಳಿಗೆ ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಮತ್ತು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಗೆ (KIMS) ಒಟ್ಟು 40 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅತ್ಯಾಧುನಿಕ ರೊಬೊಟಿಕ್ ಸರ್ಜರಿ (Robotic Surgery) ಉಪಕರಣಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ.

ಹೆಚ್ಚುವರಿಯಾಗಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ (IEC) ಚಟುವಟಿಕೆಗಳನ್ನು ವ್ಯಾಪಕವಾಗಿ ಕೈಗೊಳ್ಳಲು 28.01 ಕೋಟಿ ರೂ. ವೆಚ್ಚದ ಸಮಗ್ರ ಕ್ರಿಯಾ ಯೋಜನೆಗೂ ಸಚಿವ ಸಂಪುಟ ಅನುಮೋದನೆ ನೀಡಿದೆ.

 

Leave A Reply

Your email address will not be published.