ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್, ಸೈಬರ್ ಅಪರಾಧ ಹಾಗೂ ನಕಲಿ ತನಿಖಾಧಿಕಾರಿಗಳ ಸೋಗಿನಲ್ಲಿ ನಡೆಯುವ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಪ್ರಮುಖ ಆದೇಶವೊಂದನ್ನು ಹೊರಡಿಸಿದೆ. ಹೊರರಾಜ್ಯಗಳ ಪೊಲೀಸರು ಕರ್ನಾಟಕಕ್ಕೆ ತನಿಖೆಗೆ ಬಂದಾಗ ಸ್ಥಳೀಯ ಪೊಲೀಸ್ ಠಾಣೆಯೊಂದಿಗೆ ಕಡ್ಡಾಯವಾಗಿ ಸಮನ್ವಯ ಸಾಧಿಸಬೇಕು ಎಂದು ಹೈಕೋರ್ಟ್ನ ಏಕಸದಸ್ಯ ಪೀಠ ಸೂಚಿಸಿದೆ.
ತುಮಕೂರಿನ ‘ಶಿವ ಎಂಟರ್ಪ್ರೈಸಸ್’ ಮತ್ತು ‘ಸಿದ್ಧಿ ಏಜೆನ್ಸೀಸ್’ ಎಂಬ ಎರಡು ತಂಬಾಕು ಸಂಸ್ಥೆಗಳ ಮೇಲೆ ಮಹಾರಾಷ್ಟ್ರದ ಕೊಲ್ಹಾಪುರ ವ್ಯಾಪ್ತಿಯ ವಡ್ಗಾಂವ್ ಪೊಲೀಸರು ನಡೆಸಿದ್ದ ತನಿಖಾ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ, ಮಹಾರಾಷ್ಟ್ರ ಪೊಲೀಸರ ಈ ಕ್ರಮವನ್ನು ಅಕ್ರಮ ಎಂದು ಘೋಷಿಸಿದೆ.
ಅನ್ಯ ರಾಜ್ಯಗಳಿಗೆ ತೆರಳಿ ತನಿಖೆ ನಡೆಸುವ ಪೊಲೀಸ್ ಸಿಬ್ಬಂದಿ ಆಯಾ ವ್ಯಾಪ್ತಿಯ ಸ್ಥಳೀಯ ಪೊಲೀಸರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿ, ಅವರ ನೆರವು ಪಡೆಯುವುದು ಕಡ್ಡಾಯವಾಗಿದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಮಹಾರಾಷ್ಟ್ರದ ವಡ್ಗಾಂವ್ ಪೊಲೀಸರು ಸಂವಿಧಾನ ಮತ್ತು ಶಾಸನಬದ್ಧ ಗಡಿಗಳನ್ನು ಮೀರಿ ವರ್ತಿಸಿದ್ದಾರೆ ಎಂದು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ ಮತ್ತು ನಕಲಿ ಅಧಿಕಾರಿಗಳ ಭೇಟಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಮನೆ ಅಥವಾ ಕಚೇರಿಗೆ ಬರುವ ಅಧಿಕಾರಿಗಳು ನಿಜವಾದ ಪೊಲೀಸರೇ ಅಥವಾ ವಂಚಕರೇ ಎಂಬುದನ್ನು ಪರಿಶೀಲಿಸಲು ಸಾರ್ವಜನಿಕರಿಗೆ ತಕ್ಷಣದ ವ್ಯವಸ್ಥೆ ಇರುವುದಿಲ್ಲ. ಯಾವುದೇ ಮುನ್ಸೂಚನೆ ಇಲ್ಲದೆ ನಡೆಸುವ ಇಂತಹ ಕಾರ್ಯಾಚರಣೆಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತವೆ ಹಾಗೂ ಅಪರಾಧಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ: 2025ರ ಆಗಸ್ಟ್ 19ರಂದು ಬೆಂಗಳೂರು – ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದನ್ನು ತಡೆದಿದ್ದ ಮಹಾರಾಷ್ಟ್ರ ಪೊಲೀಸರು, ಪಾನ್ ಮಸಾಲಾ ಮತ್ತು ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು. ಎಫ್ಐಆರ್ನಲ್ಲಿ ಅಪರಿಚಿತ ವ್ಯಕ್ತಿಗಳ ಹೆಸರು ಇತ್ತೇ ಹೊರತು ತುಮಕೂರಿನ ಸಂಸ್ಥೆಗಳ ಉಲ್ಲೇಖವಿರಲಿಲ್ಲ. ಆದರೂ ಆಗಸ್ಟ್ 21ರಂದು ವಡ್ಗಾಂವ್ ಪೊಲೀಸರು ತುಮಕೂರಿನ ಸಂಸ್ಥೆಗಳ ಮೇಲೆ ದಾಳಿ ನಡೆಸಿ, ಯಾವುದೇ ಜಪ್ತಿ ಮಹಜರು ಸಿದ್ಧಪಡಿಸದೆ ಲೆಕ್ಕಪತ್ರಗಳ ಪ್ರತಿಗಳನ್ನು ಪಡೆದುಕೊಂಡಿದ್ದರು. ಇದನ್ನು ಪ್ರಶ್ನಿಸಿ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.