ಕಾಳಗಿ : ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು. ದೂರು ಬಂದ ಕಡೆಗಳಲ್ಲಿ ತಕ್ಷಣವೇ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಡಾ. ಅವಿನಾಶ್ ಜಾಧವ್ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕಾಳಗಿ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಕಾಳಗಿ ತಾಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ ಜನ, ಜಾನುವಾರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಯೋಜನೆ ರೂಪಿಸಿ, ಕಾರ್ಯಗತಗೊಳಿಸಬೇಕು. ಗ್ರಾಮಗಳ ಜಲ ಮೂಲಗಳ ಮಾಹಿತಿ ಪಡೆಯಬೇಕು. ಸಣ್ಣ ಪುಟ್ಟ ದುರಸ್ತಿ ಕಾರ್ಯಗಳನ್ನು ವಾರದೊಳಗೆ ಕೈಗೊಳ್ಳಬೇಕು. ಕೊಳವೆಬಾವಿಗಳ ಸಮರ್ಪಕ ಕಾರ್ಯ ನಿರ್ವಹಣೆ ಬಗ್ಗೆ ಗಮನ ಹರಿಸಬೇಕು.
ತಾಲೂಕಿನ ಮಂಗಲಗಿ, ಕೋಡ್ಲಿ, ತೆಗಲತಿಪ್ಪಿ, ತೆಂಗಳಿ, ಅಲ್ಲಾಪೂರ ಸೇರಿದಂತೆ ಇತರೆ
ಸಮಸ್ಯಾತ್ಮಕ ಗ್ರಾಮಗಳು ಹಾಗೂ ವಸತಿ ನಿಲಯಗಳಿಗೆ ಕೂಡಲೇ ನೀರು ಪೂರೈಸಬೇಕು. ಗೋಶಾಲೆಗಳಿಗೆ ಮೇವು ಒದಗಿಸಬೇಕು. ಗ್ರಾಮಗಳಲ್ಲಿ ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಿಸಿ, ನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಇದೇ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ ಅವರಿಂದ ಗ್ರಾಮವಾರು ನೀರಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಶಾಸಕರು, ಜನರಿಗೆ ಕುಡಿಯುವ ನೀರು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈಗಾಗಲೇ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳನ್ನು ಗುರುತಿಸಿ, ನೀರು ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಪರಿಹಾರಕ್ಕೆ ಇರುವ ಮಾರ್ಗೋಪಾಯಗಳನ್ನು ಪರಿಶೀಲಿಸಿ, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಯಾವುದೇ ಕಾರಣಕ್ಕೂ
ಕುಡಿಯುವ ನೀರಿನ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ದಿಸೆಯಲ್ಲಿ ವಿಶೇಷ ನಿಗಾ ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆಯಾಗದ ಕಾರಣ ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸಲು ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ. ಅವಿನಾಶ್ ಜಾಧವ್, “ಅನುದಾನದ ಸಮಸ್ಯೆ ಸೇರಿದಂತೆ ಇತರ ಕಾರಣಗಳನ್ನು ಮುಂದಿಟ್ಟುಕೊಂಡು ಕುಡಿಯುವ ನೀರಿನ ಸಮಸ್ಯೆ ಮುಂದುವರಿಯಲು ಬಿಡಬಾರದು. ಜನರಿಗೆ ಕುಡಿಯುವ ನೀರು ಒದಗಿಸುವುದು ನಿಮ್ಮ ಜವಾಬ್ದಾರಿ. ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಸಮಸ್ಯೆ ಎದುರಾದರೆ ತಕ್ಷಣ ಸ್ಪಂದಿಸಿ ಪರಿಹಾರಕ್ಕೆ ಮುಂದಾಗಬೇಕು” ಎಂದು ಖಡಕ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಪೃಥ್ವಿರಾಜ್ ಪಾಟೀಲ, ತಾಲೂಕ ಪಂಚಾಯತ ಮುಖ್ಯ ಅಧಿಕಾರಿ ಡಾ. ಬಸವಲಿಂಗಪ್ಪ ಡಿಗ್ಗಿ. ಪಪಂ ಸದಸ್ಯ ರಮೇಶ್ ಕಿಟ್ಟದ, ಜಿತೇಂದ್ರ ರಾಠೋಡ, ಜೆಸ್ಕಾಂ ಎಇಇ ಇಲಿಯಾಸ್ ಅಹ್ಮದ್, ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ್ ಚೆಂಗಟಿ, .
ಸಂತೋಷ ಪಾಟೀಲ ಮಂಗಲಗಿ, ಪ್ರಶಾಂತ ಕದಂ, ರೇವಣಸಿದ್ಧ ಬಡಾ, ಜಗದೀಶ ಪಾಟೀಲ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.