ಕಲಬುರಗಿ: “ಉದ್ಯೋಗ ನಿಧಿ” ಯೋಜನೆಯಡಿ ಹೊಸದಾಗಿ ಉದ್ಯೋಗ ಸೃಜಿಸುವಂತಹ ಕೈಗಾರಿಕೆಗಳಿಗೆ ಪ್ರತಿ ಉದ್ಯೋಗಿಗೆ ಎದುರಾಗಿ ಮಾಸಿಕ 2,500 ರೂ. ಗಳಂತೆ ಎರಡು ವರ್ಷದ ವರೆಗೆ ಉದ್ಯೋಗ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ನೂತನ ಯೋಜನೆಯ ಲಾಭ ಪಡೆಯಲು ಜಿಲ್ಲೆಯ ಕೈಗಾರಿಕೆಗಳು ಉದ್ಯೋಗ ನಿಧಿ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಕರೆ ನೀಡಿದ್ದಾರೆ.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ “ಉದ್ಯೋಗ ನಿಧಿ” ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ಪ್ರೋ.ಎಂ. ಗೋವಿಂದ ರಾವ್ ಸಮಿತಿಯ ವರದಿಯ ಆಧಾರದ ಮೇಲೆ ರಾಜ್ಯ ಸರ್ಕಾರವು ಕಲಬುರಗಿ ಜಿಲ್ಲೆ ಸೇರಿದಂತೆ ಕಡಿಮೆ ಅಭಿವೃದ್ಧಿ ಹೊಂದಿದ ರಾಜ್ಯದ 11 ಜಿಲ್ಲೆಗಳಿಗೆ ಉದ್ಯೋಗ ಸೃಜಿಸುವ “ಉದ್ಯೋಗ ನಿಧಿ” ಹೊಸ ಯೋಜನೆ ಘೋಷಿಸಲಾಗಿದೆ ಎಂದರು.
ಅದರಂತೆ 2027ರ ಮಾರ್ಚ್ ವರೆಗೆ ಕಲಬುರಗಿ ಜಿಲ್ಲೆಯಲ್ಲಿ 2,600 ಉದ್ಯೋಗ ಸೃಜನೆ ಗುರಿ ಹೊಂದಲಾಗಿದ್ದು, ಈ ಯೋಜನೆಯಡಿ ಹೆಚ್ಚುವರಿ ಉದ್ಯೋಗ ಸೃಷ್ಟಿಸುವ (ಹೊಸದಾಗಿ ಪಿ.ಎಫ್. ಖಾತೆ ತೆರೆಯುವ) ಅರ್ಹ ಉದ್ಯಮಿಗಳಿಗೆ, ಕೈಗಾರಿಕಾ ಘಟಕಗಳಿಗೆ, ಹೊಸದಾಗಿ ನೇಮಕಗೊಳ್ಳುವ ಪ್ರತಿ ಕಾರ್ಮಿಕನಿಗೆ (11 ಜಿಲ್ಲೆಯ ನಿವಾಸಿಗೆ ಮಾತ್ರ) ಎದುರಾಗಿ ಗರಿಷ್ಠ 24 ತಿಂಗಳ ಅವಧಿಗೆ ಮಾಸಿಕ 2,500 ರೂ. ಉದ್ಯೋಗ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.
ಕೈಗಾರಿಕಾ ಘಟಕವು ಉದ್ಯಮ್ ಪೋರ್ಟಲ್ನಲ್ಲಿ ನೋಂದಾಯಿತ ಉತ್ಪಾದನಾ ಮತ್ತು ಸೇವಾ ವಲಯಕ್ಕೆ ಸೇರಿದ ಎಂ.ಎಸ್.ಎಂ.ಇ. ಆಗಿರಬೇಕು. ಉದೋಗದಾತ ಉದ್ಯೋಗಿಗೆ ನೀಡುವ ವೇತನವು ಸಂಬಂಧಿತ ವಲಯಕ್ಕೆ ಸೂಚಿಸಲಾದ ಕನಿಷ್ಠ ವೇತನಕ್ಕಿಂತ ಹೆಚ್ಚಾಗಿರಬೇಕು. ಯೋಜನೆ ಜಾರಿಗೆ ಬಂದ ದಿ.11-09-2026ರ ನಂತರ ಹಾಲಿ ಇರುವ ಉದ್ದಿಮೆಗಳು ಹಾಗೂ ಹೊಸದಾಗಿ ಪ್ರಾರಂಭವಾಗುವ ಉದ್ಯಮಗಳು ಸೃಷ್ಟಿಸುವ ಹೊಸ ಮತ್ತು ಹೆಚ್ಚುವರಿ ಉದ್ಯೋಗಗಳಿಗೆ ಈ ಸೌಲಭ್ಯ ಸಿಗಲಿದೆ ಎಂದ ಅವರು, ಜಿಲ್ಲೆಯ ಎಂ.ಎಸ್.ಎಂ.ಇ. ಮತ್ತು ಭಾವಿ ಉದ್ಯೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಯೋಜನೆಯ ಲಾಭವನ್ನು ಪಡೆಯಲು ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕೆಂದು ಡಿ.ಸಿ. ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮತ್ತು ಉದ್ಯೋಗ ನಿಧಿ ಸಮಿತಿಯ ಸದಸ್ಯ ಕಾರ್ಯದರ್ಶಿ ಅಬ್ದುಲ್ ಅಜೀಮ್, ಜಿಲ್ಲಾ ಕೈಗಾರಿಕಾ ಕೇಂದ್ರ, ಅಧಿಕಾರಿಗಳಾದ ರುಪಾಲಿ, ನಳಿನಿ ಹಾಗೂ ಜಾಫರ ಅನ್ಸಾರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕೈಗಾರಿಕಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.