Shubhashaya News

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ| ಎಂ.ಸಿ.ಸಿ. ಕಟ್ಟುನಿಟಾಗಿ ಪಾಲಿಸಿ,ಶಾಂತಿಯುತ ಚುನಾವಣೆಗೆ ಸರ್ವ ಸಿದ್ಧತೆ ಕೈಗೊಳ್ಳಿ: ಶಿವಕುಮಾರ ಕೆ.ಬಿ

ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಗೆ ಇದೇ ಅಕ್ಟೋಬರ್ 23 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಕ್ಷೇತ್ರದಾದ್ಯಂತ ಶಾಂತಿಯುತ ಚುನಾವಣೆಗೆೆ ಎಲ್ಲಾ ರೀತಿಯ ಸಿದ್ಧತೆ ಕೈಗೊಳ್ಳುವಂತೆ ಪ್ರದೇಶದ ಡಿ.ಸಿ., ಎಸ್.ಪಿ.ಗಳಿಗೆ ಕ್ಷೇತ್ರದ ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ. ಸೂಚನೆ ನೀಡಿದರು.

ಬುಧವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಕ್ಷೇತ್ರದ ವ್ಯಾಪ್ತಿಯ ಏಳು ಜಿಲ್ಲೆಗಳು ಡಿ.ಸಿ, ಎಸ್.ಪಿ., ಮಹಾನಗರ ಪಾಲಿಕೆ ಆಯುಕ್ತರು, ಸಹಾಯಕ ಆಯುಕ್ತರು, ತಹಶೀಲ್ದಾರರೊಂದಿಗೆ ವಿ.ಸಿ. ಮೂಲಕ ಸಭೆ ನಡೆಸಿದ ಅವರು, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ಭಯ, ನಿರ್ಭೀತಿಯಿಲ್ಲದೆ ಶಾಂತಿಯುತ ಮತದಾನ ಜರುಗಲು ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸಬೇಕೆಂದರು.

ಈಗಾಗಲೆ 30-12-2025ಕ್ಕೆ ಮತದಾರರ ಪಟ್ಟಿ ಪ್ರಕಟಿಸಿದ್ದು, ಇದಾದ ಬಳಿಕ ಕಳೆದ ಸೆಪ್ಟೆಂಬರ್-29ರ ವರೆಗೆ ಸ್ವೀಕೃತ ನಮೂನೆ-19ರ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಿ ದೋಷಮುಕ್ತ ಮತದಾರರ ಪಟ್ಟಿ ತಯಾರಿಸಬೇಕು. ಆಯೋಗದ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರು ಕಡ್ಡಾಯವಾಗಿ ಮತದಾನ ಕೇಂದ್ರಕ್ಕೆ ಭೇಟಿ ನೀಡಿ ಕನಿಷ್ಠ ಮೂಲಭೂತ ಸೌಕರ್ಯ ಇರುವ ಕುರಿತು ಖಚಿತಪಡಿಸಿಕೊಳ್ಳಬೇಕೆಂದ ಚುನಾವಣಾ ವೀಕ್ಷಕರು, ಮತದಾನ ದಿನದಂದು ಮತಗಟ್ಟೆಗಳಿಗೆ ಅವಶ್ಯವಿರುವ ನಮೂನೆ, ಲಕೋಟೆ ಹಾಗೂ ಸ್ಟೇಷನರಿ ಸಾಮಗ್ರಿಗಳನ್ನು ಮಸ್ಟ್ರಿಂಗ್ ದಿನದಂದು ಮತಗಟ್ಟೆ ಅಧಿಕಾರಿ-ಸಿಬ್ಬಂದಿಗಳಿಗೆ ನೀಡಬೇಕೆಂದರು.

ಮತಗಟ್ಟೆ ಮೇಲೆ ವೆಬ್ ಕಾಸ್ಟಿಂಗ್ ನಿಗಾ:

ಚುನಾವಣಾ ಆಯೋಗದ ನಿರ್ದೇಶನದಂತೆ ಕ್ಷೇತ್ರದ ಪ್ರತಿ ಮತಗಟ್ಟೆ ಮೇಲೆ ನಿಗಾ ಇರಿಸಲು ವೆಬ್‌ಕಾಸ್ಟಿಂಗ್ ಮಾಡಬೇಕು. ಇನ್ನು ಮೈಕ್ರೋ ವೀಕ್ಷಕರು ಮತ್ತು ಮತಗಟ್ಟೆ ಅಧಿಕಾರಿ-ಸಿಬ್ಬಂದಿಗೆ ಇದೇ ಅಕ್ಟೋಬರ್ 12 ಮತ್ತು 17 ರಂದು ಎರಡು ಹಂತದಲ್ಲಿ ತರಬೇತಿ ನೀಡಬೇಕೆಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಪಾನ ನಿಷೇಧ ದಿನ ಘೋಷಣೆ:

ಮತದಾನ ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ-1951 ಸೆಕ್ಷನ್ 135(ಸಿ)ರ ಪ್ರಕಾರ ಚುನಾವಣೆಯ ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚಿತವಾಗಿ ಮತದಾನ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಕ್ಟೋಬರ್ 21 ಸಂಜೆ 4 ಗಂಟೆಯಿಂದಲೆ ಜಾರಿಯಾಗುವಂತೆ ಎಲ್ಲಾ ಜಿಲ್ಲೆಯಲ್ಲಿ “ಶುಷ್ಕ ದಿನ (Dry Day)” ಘೋಷಿಸಿ ಆದೇಶ ಹೊರಡಿಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಝಹೀರಾ ನಸೀಮ್, ಸಹಾಯಕ ಚುನಾವಣಾಧಿಕಾರಿಯಾಗಿರುವ ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಕಲಬುರಗಿ ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ ಸಂಕನೂರ್, ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ ಶಿಂಧೆ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬೇನ್ ಮೋಹಪಾತ್ರ, ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರು(ಅಭಿವೃದ್ಧಿ) ಮತ್ತು ಪ್ರಭಾರಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿರುವ ಪ್ರಮೀಳಾ ಎಂ.ಕೆ., ಕಲಬುರಗಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಉಪಸ್ಥಿತರಿದ್ದರು. ಉಳಿದಂತೆ ಏಳು ಜಿಲ್ಲೆಗಳ ಅಧಿಕಾರಿಗಳು ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗಿಯಾಗಿದ್ದರು.

Leave A Reply

Your email address will not be published.