ಕಲಬುರಗಿ: ತಾಯಿ ಹಾಗೂ ಇಬ್ಬರು ಪುತ್ರಿಯರು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆಳಂದ ತಾಲೂಕಿನ ಇಕ್ಕಳಕಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಇಕ್ಕಳಕಿ ಗ್ರಾಮದ ನಿವಾಸಿಗಳಾದ ಗೌರಾಬಾಯಿ ಪೀರಪ್ಪ ತಳಕೇರಿ (52) ಹಾಗೂ ಅವರ ಪುತ್ರಿಯರಾದ ಅಂಬಿಕಾ(22) ಹಾಗೂ ಭಾಗ್ಯಶ್ರೀ (20) ಎಂದು ಗುರುತಿಸಲಾಗಿದೆ.
ಕುಟುಂಬವು ಮಾದನ ಹಿಪ್ಪರ್ಗಾ ಎಸ್ಬಿಐ ಬ್ಯಾಂಕ್ನಲ್ಲಿ ಸುಮಾರು 2.13 ಲಕ್ಷ ಹಾಗೂ ಖಾಸಗಿಯಾಗಿ 4 ಲಕ್ಷದಷ್ಟು ಸಾಲ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಆರ್ಥಿಕ ಒತ್ತಡದ ಹಿನ್ನೆಲೆಯಲ್ಲಿ ಘಟನೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ, ಮೂವರ ಸಾವಿಗೆ ನಿಖರ ಕಾರಣ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೆಚ್ಚಿನ ಸಾಲ ಇರುವುದರಿಂದ ಅದರ ಬಗ್ಗೆ ಹೆಂಡತಿ ಚಿಂತಿಸುತ್ತಿದ್ದಳು. ಮೃತ ಇಬ್ಬರು ಪುತ್ರಿಯರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಬುಧವಾರ ಕುರಿಗಳಿಗೆ ಮೇವು ತರಲು ಹೋಗುವುದಾಗಿ ಹೊಲಕ್ಕೆ ಹೋಗಿದ್ದ ಗೌರಬಾಯಿ ಶ್ರೀದೇವಿ ಪಾಟೀಲ್ ಎಂಬಾತರ ಹೊಲದ ಬಾವಿಯಲ್ಲಿ ಮೃತಪಟ್ಟಿರುವ ಶವ ಪತ್ತೆಯಾಗಿದೆ ಎಂದು ಮೃತ ಗೌರಬಾಯಿ ಗಂಡ ಪೀರಪ್ಪ ತಳಕೇರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ಮಾದನ ಹಿಪ್ಪರಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.