ಕಲಬುರಗಿ: ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ’ಯಲ್ಲಿ ಜಿಲ್ಲೆಯ ಆಳಂದ ಪಟ್ಟಣದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ವಿಜಯಲಕ್ಷ್ಮಿ ಲಕ್ಷ್ಮೀಕಾಂತ ಪೋದಾರ್ ಅವರು ತೃತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಕಲಬುರಗಿ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ವಿದ್ಯಾರ್ಥಿನಿ, ಈಗ ರಾಜ್ಯಮಟ್ಟದ ಸ್ಪರ್ಧೆಯಲ್ಲೂ ತೃತೀಯ ಸ್ಥಾನ ಗಳಿಸಿ ಕಾಲೇಜಿಗೆ ಹಾಗೂ ಕಲಬುರಗಿಗೆ ಕೀರ್ತಿ ತಂದಿದ್ದಾರೆ.
ಪಿಯುಸಿ ಮಟ್ಟದ ಈ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಪ್ರಥಮ ಸ್ಥಾನಪಡೆದವರನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡಲಾಗಿತ್ತು, ಇದರಲ್ಲಿ ಕಲಬುರಗಿಯ ಕುಮಾರಿ ವಿಜಯಲಕ್ಷ್ಮಿ ಅವರು ತೃತೀಯ ಬಹುಮಾನ ಪಡೆದಿರುತ್ತಾರೆ.
ಕುಮಾರಿ ವಿಜಯಲಕ್ಷ್ಮಿ ಅವರಿಗೆ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ರೂ. 11,000/- ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ ಎಂದು ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಅವರು ತಿಳಿಸಿದ್ದಾರೆ.