Shubhashaya News

ಕನ್ನಡ ಜ್ಞಾನ ಪರಂಪರೆ ಉಳಿಸಿ ಬೆಳೆಸಲು ಸಂಶೋಧನೆ ಅಗತ್ಯ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಕನ್ನಡ ಶಾಸ್ತಿçÃಯ ಜ್ಞಾನ ಪರಂಪರೆ ಕಾರ್ಯಾಗಾರವನ್ನು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಉದ್ಘಾಟಿಸಿ ಮಾತನಾಡಿದರು.

ಆಳಂದ: ಪ್ರಾಚೀನ ಕನ್ನಡ ಸಾಹಿತ್ಯ, ಶಾಸನ, ವ್ಯಾಕರಣ ಹಾಗೂ ಶಾಸ್ತಿçÃಯ ಗ್ರಂಥಗಳಲ್ಲಿರುವ ಜ್ಞಾನ ಸಂಪತ್ತನ್ನು ಆಧುನಿಕ ದೃಷ್ಟಿಕೋನದಲ್ಲಿ ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಅಗತ್ಯವಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಸಿಯುಕೆ ಕನ್ನಡ ವಿಭಾಗ ಹಾಗೂ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್) ಸಹಯೋಗದಲ್ಲಿ ಆಯೋಜಿಸಿರುವ ‘ಕನ್ನಡ ಶಾಸ್ತಿçÃಯ ಜ್ಞಾನ ಪರಂಪರೆ’ ಕುರಿತ ಎರಡು ದಿನಗಳ ರಾಷ್ಟಿçÃಯ ಕಾರ್ಯಾಗಾರಕ್ಕೆ ಮಂಗಳವಾರ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಶಾಸ್ತಿçÃಯ ಕನ್ನಡ ಮತ್ತು ಆಧುನಿಕ ಭಾಷೆಗಳ ನಡುವಿನ ಬೆಳವಣಿಗೆಗೆ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಪಂಪ, ರನ್ನ, ಪೊನ್ನ ಸೇರಿದಂತೆ ನೂರಾರು ಕವಿಗಳು ಕನ್ನಡ ನಾಡಿಗೆ ನೀಡಿರುವ ಜ್ಞಾನ ಸಂಪತ್ತಿನ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕು. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಕನ್ನಡದ ಸಾಹಿತ್ಯ ಹಾಗೂ ಜ್ಞಾನ ಪರಂಪರೆಯನ್ನು ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದ ಭಾಷೆಯ ಬಳಕೆಯಲ್ಲೂ ಬದಲಾವಣೆಗಳಾಗುತ್ತಿದ್ದು, ಪೂರ್ವಜರು ನೀಡಿದ ಅಮೂಲ್ಯ ಭಾಷಾ ಸಂಪತ್ತನ್ನು ಸಂರಕ್ಷಿಸುವುದು ಅಗತ್ಯ. ರಾಷ್ಟಿçÃಯ ಶಿಕ್ಷಣ ನೀತಿ–೨೦೨೦ರ ಆಶಯದಂತೆ ಪ್ರಾದೇಶಿಕ ಭಾಷೆಗಳ ಮೂಲಕ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಲುಪಿಸಿ, ಸಂಶೋಧನೆ ಮತ್ತು ಉನ್ನತ ಅಧ್ಯಯನಕ್ಕೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ಬಸವರಾಜ ಕೋಡಗುಂಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಲಬುರಗಿ ಭಾಗದ ನಾಗಾವಿ, ಮಳಖೇಡ ಸೇರಿದಂತೆ ಹಲವು ಐತಿಹಾಸಿಕ ಸ್ಥಳಗಳು ಭಾಷೆ ಮತ್ತು ಜ್ಞಾನ ಪರಂಪರೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿವೆ. ಈ ಕುರಿತು ಇನ್ನಷ್ಟು ಸಂಶೋಧನೆ ನಡೆಯಬೇಕು ಎಂದರು.
ಹಿರಿಯ ಸಂಶೋಧಕ ಡಾ. ದೇವರ ಕೊಂಡಾರೆಡ್ಡಿ ಮಾತನಾಡಿ, ಕನ್ನಡದ ಶಾಸ್ತಿçÃಯ ಗ್ರಂಥಗಳನ್ನು ಇಂದಿನ ವೈಜ್ಞಾನಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವ ಅಗತ್ಯವಿದೆ. ‘ರಟ್ಟಮತ’ ಗ್ರಂಥದಲ್ಲಿ ಮೋಡಗಳ ವಿಧಗಳು, ಬರಗಾಲ, ಭೂಮಿಯೊಳಗಿನ ನೀರಿನ ಸ್ತರಗಳು ಹಾಗೂ ಗಿಡಮರಗಳ ಕುರಿತು ಮಾಹಿತಿ ದೊರೆಯುತ್ತದೆ. ‘ಸೂಪಶಾಸ್ತç’ದಲ್ಲಿ ಆಹಾರ ತಯಾರಿಕೆಯ ವೈಜ್ಞಾನಿಕ ವಿಧಾನಗಳು ಹಾಗೂ ದೇಹ ಮತ್ತು ಮನಸ್ಸಿಗೆ ಅನುಕೂಲಕರ ಆಹಾರದ ಕುರಿತು ವಿವರಗಳಿವೆ. ಇಂತಹ ಗ್ರಂಥಗಳಲ್ಲಿರುವ ಜ್ಞಾನವನ್ನು ಆಧುನಿಕ ವಿಜ್ಞಾನದ ದೃಷ್ಟಿಕೋನದಲ್ಲಿ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಪ್ರೊ. ಸತ್ಯನಾರಾಯಣ ಅವರು ‘ಶಾಸ್ತಿçÃಯ ಕನ್ನಡ ಜ್ಞಾನ ಸಂಪತ್ತು ಮತ್ತು ವಿಜ್ಞಾನ: ಸವಾಲುಗಳು ಮತ್ತು ಹೊಸ ಸಾಧ್ಯತೆಗಳು’, ಪ್ರೊ. ಬಸವರಾಜ ಕೋಡಗುಂಟಿ ಅವರು ‘ಕನ್ನಡ ಧ್ವನಿವಿಜ್ಞಾನದ ೨೦೦೦ ವರ್ಷಗಳ ಇತಿಹಾಸ’, ಡಾ. ಸಂಗಮೇಶ ಕಲ್ಯಾಣಿ ಅವರು ‘ಅಮರಗನ್ನಡ ಮತ್ತು ಮೋಡಿ ಲಿಪಿ’ ಸೇರಿದಂತೆ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಪ್ರತಿನಿಧಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಶಿವಗಂಗಾ ರುಮ್ಮಾ, ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ಗಣೇಶ್ ಪವಾರ್, ಸಿಐಐಎಲ್ ಸಂಯೋಜಕ ಡಾ. ಎಲ್.ಆರ್. ಪ್ರೇಮ್ ಕುಮಾರ್, ಪ್ರೊ. ವಿಕ್ರಂ ವಿಸಾಜಿ, ಡಾ. ಟಿ.ಡಿ. ರಾಜಣ್ಣ, ಡಾ. ಅಪ್ಪಗೆರೆ ಸೋಮಶೇಖರ, ಡಾ. ವಿಜಯಕುಮಾರ್ ವಿಶ್ವಮಾನವ, ಡಾ. ಶಿವಾನಂದ ಬಂಟನೂರು, ಪ್ರೊ. ಸಂದೀಪ್ ರಣಬೀಕರ, ಡಾ. ಗೋವಿಂದ ಜಾಧವ, ಡಾ. ಶಿವಕುಮಾರ್ ಬೆಳ್ಳಿ ಸೇರಿದಂತೆ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಯೋಜಕ ಡಾ. ರೋಹಿಣಾಕ್ಷ ಶಿರ್ಲಾಲು ಸ್ವಾಗತಿಸಿದರು.

Leave A Reply

Your email address will not be published.